ಶಿವಮೊಗ್ಗ:ನಗರದ ಗೋಪಾಳ ಬಡಾವಣೆಯ 72 ವರ್ಷದ ವ್ಯಕ್ತಿಗೆ ಸಿಬಿಐ ಅಧಿಕಾರಿ ಎಂದು ಪೋನ್ ಮಾಡಿ ಬೆದರಿಸಿ, ಡಿಜಿಟಲ್ ಅರೆಸ್ಟ್ ಮೂಲಕ ಒಟ್ಟು 41 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದ ಇಬ್ಬರು ನಕಲಿ ಸಿಬಿಐ ಅಧಿಕಾರಿಗಳನ್ನು ಶಿವಮೊಗ್ಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯದ ಮೊಹಮ್ಮದ್ ಅಹಮದ್(45) ಹಾಗೂ ಅಭಿಷೇಕ್ ಶೇಟ್ (27) ಬಂಧಿತರು. ಶಿವಮೊಗ್ಗದ ಗೋಪಾಳ ಬಡಾವಣೆಯ ಎಲ್. ಎಸ್ ಆನಂದ್ ಅವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ತಾನು ಸಿಬಿಐ ಅಧಿಕಾರಿ ಎಂದು ವಿಡಿಯೋ ಕಾಲ್ ಮಾಡಿ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯಲ್ಲಿ ದೊಡ್ಡ ಮೊತ್ತದ ಹಣವು ಅಕ್ರಮವಾಗಿ ವರ್ಗಾವಣೆ ಆಗಿದೆ. ಇದರಿಂದ ನಿಮ್ಮ ಮೇಲೆ ದೂರು ದಾಖಲಾಗಿದೆ ಎಂದಿದ್ದಾರೆ.
ಇದರಿಂದ ನಿಮ್ಮನ್ನು ಅರೆಸ್ಟ್ ಮಾಡಲು ವಾರಂಟ್ ಜಾರಿ ಮಾಡಲಾಗಿದೆ. ನಿಮ್ಮ ಎಲ್ಲ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ನಮ್ಮ ಸಿಬ್ಬಂದಿ ಈಗ ಶಿವಮೊಗ್ಗ ಸಿಟಿ ಬಳಿಯೇ ಬರುತ್ತಿದ್ದು, ನಿಮ್ಮನ್ನು ಅರೆಸ್ಟ್ ಮಾಡಿ ಕರೆದುಕೊಂಡು ಬರುತ್ತಾರೆ. ನೀವು ಇದರಿಂದ ಬಚಾವ್ ಆಗಬೇಕಾದ್ರೆ, ನಾವು ಹೇಳಿದ ಖಾತೆಗೆ ಹಣವನ್ನು ವರ್ಗಾವಣೆ ಮಾಡಬೇಕು ಎಂದು ತಿಳಿಸಿ, ಒಟ್ಟು 41 ಲಕ್ಷ ರೂ. ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಸಿಕೊಂಡಿರುತ್ತಾರೆ.