ಬಳ್ಳಾರಿ:ಚಿತ್ರದುರ್ಗದ ರೇಣುಕಾಸ್ವಾಮಿಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ ಬೆನ್ನಲ್ಲೇ, ಕಾರಾಗೃಹಕ್ಕೆ ಉತ್ತರವಲಯದ ಡಿಐಜಿ ಟಿಪಿ ಶೇಷ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಭದ್ರತೆ ಪರಿಶೀಲಿಸಲು ಇಂದು ಜೈಲಿಗೆ ಭೇಟಿ ನೀಡಿದ್ದೆ. ನಾವು ನೀಡಿದ ಆದೇಶದ ಪ್ರಕಾರ ಯಾವುದೆಲ್ಲ ಜಾರಿ ಆಗಿವೆ ಎಂಬುದನ್ನು ವೀಕ್ಷಿಸಲು ಭೇಟಿ ನೀಡಿದ್ದೆ. ತಾವು ಸೂಚಿಸಿದ ಆದೇಶದ ಪ್ರಕಾರ, ಜೈಲು ಅಧಿಕಾರಿಗಳು ಭದ್ರತೆಯನ್ನು ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ದರ್ಶನ್ ಜೈಲು ಸ್ಥಳಾಂತರದ ವಿಚಾರದಲ್ಲಿ ದುಡ್ಡಿನ ಆಮಿಷ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾವುದೇ ದುಡ್ಡಿನ ಆಮಿಷಕ್ಕೆ ಒಳಗಾಗಿಲ್ಲ. ಅದೆಲ್ಲವೂ ಸುಳ್ಳು. ಈ ರೀತಿಯ ಸುಳ್ಳು ಆರೋಪ ಮಾಡುವವರ ಮೇಲೆಯೇ ದೂರು ದಾಖಲು ಮಾಡಿಕೊಳ್ಳಬೇಕಾಗುತ್ತದೆ. ಪತ್ರಕರ್ತರು ಇಂತಹದ್ದೊಂದು ವಿಚಾರ ನನ್ನ ಗಮನಕ್ಕೆ ತಂದ್ದಿದ್ದು ಖುಷಿ ಇದೆ. ಆದರೆ, ನಾನು ಪಾರದರ್ಶಕವಾಗಿದ್ದೇನೆ. ನನ್ನ ಮೇಲೆ ಈವರೆಗೂ ಒಂದು ಕಪ್ಪು ಕೂಡ ಚುಕ್ಕೆ ಇಲ್ಲ. ಇಂತಹ ಸುಳ್ಳು ಆರೋಪ ಕೇಳಿ ಬಂದಾಗ ನನ್ನಿಂದ ನೀವು ಸ್ಪಷ್ಟನೆ ಪಡೆದುಕೊಳ್ಳಬಹುದು. ದರ್ಶನ್ ವಿಚಾರದಲ್ಲಿ ನನ್ನನ್ನು ಯಾರು ಸಂಪರ್ಕಿಸಿಲ್ಲ. ನಾನು ಮಾಡಿಲ್ಲ. ಮಾಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ಕಾರಾಗೃಹಲ್ಲಿ 15 ಸೆಲ್ಗಳಿದ್ದು, ಪ್ರತಿ ಸೆಲ್‌ನಲ್ಲಿ 4 ಕೈದಿನಗಳನ್ನು ಇರಿಸಲಾಗಿದೆ. ಆದರೆ, ದರ್ಶನ್ ಅವರನ್ನು ಮಾತ್ರ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ. ಮೂರು ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಎಲ್ಲ ಸೆಲ್ಗಳ ಮಾಹಿತಿ, ಎಲ್ಲರ ಚಲನವಲನ ಸೆರೆಯಾಗಲಿದೆ. ಬೇರೆ ಬಂಧಿಗಳಿಗಿಂತ ಹೆಚ್ಚಿನ ನಿಗಾವಹಿಸಲು ಹೈಸೆಕ್ಯೂರಿಟಿ ಸೆಲ್ ವ್ಯವಸ್ಥೆ ಮಾಡಲಾಗಿದೆ. ದರ್ಶನ್ ಭದ್ರತೆ ಒದಗಿಸಿದ ಜೈಲ್ ಸಿಬ್ಬಂದಿಗೆ ಮೊಬೈಲ್ ನಿಷೇಧಿಸಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳನ್ನು ಪ್ರತಿದಿನ ಸೇವ್ ಮಾಡಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ನಮ್ಮ ಇಬ್ಬರು ಸಿಬ್ಬಂದಿ ಬಾಡಿ ಕ್ಯಾಮರಾ ಧರಿಸಿ ದಿನದ 24 ಗಂಟೆಗಳ ಕಾಲ ಸೆಲ್‌ನಲ್ಲಿ ಎಚ್ಚರ ವಹಿಸುತ್ತಿದ್ದಾರೆ. ಏನೇ ನಡೆದರೂ, ಯಾರೇ ಬಂದರೂ ಅದರಲ್ಲಿ ಸೆರೆಯಾಗುತ್ತದೆ ಎಂದರು.