ಹುಬ್ಬಳ್ಳಿ:ಹಿಂದೊಂದು ಕಾಲವಿತ್ತು. ಮಹಿಳೆಯರು ಹೊಸ್ತಿಲು ದಾಟಲು ಅವಕಾಶವಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರೇ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ತಾವು ಕೂಡ ಸಮರ್ಥರು ಅನ್ನೋದನ್ನು ರುಜುವಾತು ಮಾಡಿದ್ದು, ಇದಕ್ಕೆ ಹುಬ್ಬಳ್ಳಿ ಧಾರವಾಡ ಜಿಲ್ಲೆಯ ಮಹಿಳಾ ಅಧಿಕಾರಿಗಳು ಸ್ಪಷ್ಟ ನಿದರ್ಶನವಾಗಿದ್ದಾರೆ.
ವಾಣಿಜ್ಯ ನಗರಿ ಹಾಗೂ ವಿದ್ಯಾಕಾಶಿ ಎಂದು ಖ್ಯಾತಿಗಳಿಸಿರುವ ಅವಳಿ ನಗರದ ಧಾರವಾಡ ಜಿಲ್ಲೆಯಲ್ಲಿ ಸದ್ಯ ಆಡಳಿತ ಚುಕ್ಕಾಣಿ ಬಹುತೇಕ ಮಹಿಳಾ ಅಧಿಕಾರಿಗಳ ಕೈಯಲ್ಲೇ ಇದೆ. ಹುಬ್ಬಳ್ಳಿ-ಧಾರವಾಡ ಅವಳಿನಗರದ ಪ್ರಥಮ ಪ್ರಜೆ, ಪೊಲೀಸ್ ಆಯುಕ್ತರಿಂದ ಹಿಡಿದು, ಇಡೀ ಜಿಲ್ಲೆಯ ಆಡಳಿತ ನಡೆಸುವ ಜಿಲ್ಲಾಧಿಕಾರಿ ಸಹಿತ ಮಹಿಳೆಯೇ ಇರುವುದು ವಿಶೇಷವಾಗಿದೆ.
ಮಹಿಳಾ ಅಧಿಕಾರಿಗಳ ಕೈಯುಲ್ಲಿ ಧಾರವಾಡ ಆಡಳಿತ: ಧಾರವಾಡ ಜಿಲ್ಲಾ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಅತೀ ಹೆಚ್ಚು ಜಿಲ್ಲಾಮಟ್ಟದ ಅಧಿಕಾರಿ ಸ್ಥಾನಗಳಲ್ಲಿ ಮಹಿಳೆಯರು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡ ಜಿಲ್ಲಾಧಿಕಾರಿಯಾಗಿ ದಿವ್ಯಪ್ರಭು ಜೆ.ಆರ್.ಜಿ., ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದೀಪಾ ಚೋಳನ್, ಡಿಸಿ ನಂತರದಲ್ಲಿ ಬರುವ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ, ಹು-ಧಾ ಮಹಾನಗರ ಪಾಲಿಕೆಯ ಮೇಯರ್ ವೀಣಾ ಭರದ್ವಾಡ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಶಾಲಾ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಆಯುಕ್ತರಾಗಿ ಜಯಶ್ರೀ ಶಿಂತ್ರಿ, ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ.ಶಶಿ ಪಾಟೀಲ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪದ್ಮಾವತಿ, ಧಾರವಾಡ ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ... ಹೀಗೆ ಜಿಲ್ಲೆಯ ಬಹುತೇಕ ಪ್ರಮುಖ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳೇ ಇದ್ದಾರೆ. ಇದು ಜಿಲ್ಲೆಯ ಮಹಿಳೆಯರು ಹೆಮ್ಮೆ ಪಡುವಂತಹ ಸಂಗತಿಯಾಗಿದೆ.