ಚಿಕ್ಕಮಗಳೂರು:ವರ್ಷಕ್ಕೊಮ್ಮೆ ಭಕ್ತರಿಗೆ ಬೆಟ್ಟದ ಮೇಲೆ ದರ್ಶನ ನೀಡುವ ದೇವಿರಮ್ಮ ಇಂದು ಲಕ್ಷಾಂತರ ಭಕ್ತರಿಗೆ ಬೆಟ್ಟದ ತುದಿಯಲ್ಲಿ ದರ್ಶನ ನೀಡಿದ್ದಾಳೆ. ಒಂದು ರಾತ್ರಿ ಒಂದು ಹಗಲಿಗೆ ಲಕ್ಷದಷ್ಟು ಭಕ್ತರು ಬೆಟ್ಟ ಹತ್ತಿ ಇಳಿದಿರುವ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅತ್ಯಂತ ಮನೋಹರವಾಗಿದೆ.
ಸಮುದ್ರಮಟ್ಟದಿಂದ ಸುಮಾರು 3800 ಅಡಿಗಳಷ್ಟು ಎತ್ತರದಲ್ಲಿ ಪಿರಮಿಡ್ ಆಕಾರದಲ್ಲಿರುವ ಬೆಟ್ಟದ ಡ್ರೋನ್ ವಿಡಿಯೋ ಕಣ್ಮನ ಕೋರೈಸುವಂತಿದೆ. ಸುತ್ತಲೂ ಹಚ್ಚಹಸಿರಿನಿಂದ ಕಂಗೊಳಿಸುವ ಪ್ರಕೃತಿಯ ರಾಶಿ ಮಧ್ಯೆ ಗುಡ್ಡದ ತುತ್ತ ತುದಿಯಲ್ಲೊಂದು ಸಣ್ಣ ದೇಗುಲ ಭಕ್ತರನ್ನು ಸೆಳೆಯುತ್ತಿದೆ. ಆ ಗುಡಿಯಲ್ಲಿನ ದೇವಿಯನ್ನು ನೋಡಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ವರ್ಷಪೂರ್ತಿ ಬಿಂಡಿಗ ಗ್ರಾಮದ ದೇಗುಲದಲ್ಲಿ ದರ್ಶನ ನೀಡುವ ದೇವಿರಮ್ಮ ದೀಪಾವಳಿ ಅಮಾವಾಸ್ಯೆ ಹಿಂದಿನ ದಿನ ಗುಡ್ಡದ ತುದಿಯಲ್ಲಿರುವ ದೇಗುಲದಲ್ಲಿ ದರ್ಶನ ನೀಡುತ್ತಾಳೆ.
ದೇವಿರಮ್ಮನ ಬೆಟ್ಟಕ್ಕೆ ಹರಿದುಬಂದ ಭಕ್ತ ಸಾಗರ (ETV Bharat) ಬೆಟ್ಟದ ತುದಿಯಲ್ಲಿ ಆಕೆಯ ದರ್ಶನಕ್ಕೆ ವರ್ಷಪೂರ್ತಿ ಕಾಯುವ ಭಕ್ತರು ಅಮಾವಾಸ್ಯೆ ಹಿಂದಿನ ದಿನ ರಾತ್ರೋರಾತ್ರಿ ಬೆಟ್ಟವೇರಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಹೀಗೆ ರಾತ್ರೋರಾತ್ರಿ ಬೆಟ್ಟ ಹತ್ತುವ ಭಕ್ತರು ಬೆಳಗಾಗುವಷ್ಟರಲ್ಲಿ ಗುಡ್ಡದ ತುದಿಯಲ್ಲಿ ಜಮಾಯಿಸಿರುತ್ತಾರೆ. ದೇವಿಯ ದರ್ಶನದ ಜೊತೆ ಆ ಪ್ರಕೃತಿಯ ಸೌಂದರ್ಯವನ್ನೂ ಸವಿಯುತ್ತಾರೆ. ತಣ್ಣನೆಯ ಗಾಳಿ ಬೆಟ್ಟ ಹತ್ತಿರುವ ಸುಸ್ತನ್ನು ಕ್ಷಣಾರ್ಧದಲ್ಲಿ ಮಾಯವಾಗಿಸುತ್ತದೆ. ಅಂತಹ ಬೆಟ್ಟದಲ್ಲಿ ಭಕ್ತರು ಜಮಾಯಿಸಿರುವ ಡ್ರೋನ್ ವಿಡಿಯೋ ನೋಡುಗರ ಮೈನವಿರೇಳಿಸುವಂತಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಪರಿಷತ್ ಸದಸ್ಯ ಸಿ.ಟಿ. ರವಿ ಬರಿಗಾಲಿನಲ್ಲಿ ದೇವಿರಮ್ಮನ ಬೆಟ್ಟ ಹತ್ತಿ ದೇವರ ದರ್ಶನ ಪಡೆದರು. ಈ ವೇಳೆ ನೂರಾರು ಜನರು ಅವರ ಜೊತೆ ಸೆಲ್ಫಿಗೆ ಮುಗಿಬಿದ್ದಿದ್ದು ವಿಶೇಷವಾಗಿತ್ತು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆಯನ್ನು ಮಾಡಿಕೊಂಡಿತ್ತು.
ಇದನ್ನೂ ಓದಿ:ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ವಿಜೃಂಭಣೆಯಿಂದ ನೆರವೇರಿದ ತೆಪ್ಪೋತ್ಸವ: ವಿಡಿಯೋ