ಬೆಂಗಳೂರು: "ಏಕಗವಾಕ್ಷಿ ಯೋಜನೆಯಡಿ ಹಸಿರು ನಿಶಾನೆ ನೀಡಲಾಗಿರುವ ಕೈಗಾರಿಕಾ ಯೋಜನೆಗಳಿಗೆ ಗರಿಷ್ಠ 100 ದಿನಗಳೊಳಗೆ ಅಗತ್ಯವಿರುವ ಎಲ್ಲಾ ಅನುಮೋದನೆಗಳನ್ನು ನೀಡಲು ಮೈಕ್ರೋಸಾಫ್ಟ್ ಕಂಪನಿಯ ನೆರವಿನಿಂದ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಲೋಕಾರ್ಪಣೆ ಮಾಡಲಾಗುವುದು" ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಏಕಗವಾಕ್ಷಿ ಯೋಜನೆ ಜಾರಿ ಸಂಬಂಧ ಮೈಕ್ರೋಸಾಫ್ಟ್ ಸಂಸ್ಥೆ ಪ್ರತಿನಿಧಿಗಳು ನೀಡಿದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು, "ನೆರೆಹೊರೆಯ ಕೆಲವು ರಾಜ್ಯಗಳಲ್ಲಿ ಕೈಗಾರಿಕಾ ಹೂಡಿಕೆ ಯೋಜನೆಗಳಿಗೆ 60-70 ದಿನಗಳಲ್ಲಿ ಪ್ರತಿಯೊಂದು ಅನುಮೋದನೆಯನ್ನೂ ನೀಡಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಸರಾಸರಿ 300 ದಿನಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದನ್ನು 60-70 ದಿನಗಳಿಗೆ ಇಳಿಸಬೇಕೆಂಬುದು ತಮ್ಮ ಗುರಿಯಾಗಿದೆ. ಇಲ್ಲದೇ ಹೋದರೆ ನಾವು ಹೂಡಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕಾಗಿ ತಂತ್ರಜ್ಞಾನದ ನೆರವು ನೀಡುವಂತೆ ಮೈಕ್ರೋಸಾಫ್ಟ್ ಕಂಪನಿಗೆ ಜವಾಬ್ದಾರಿ ವಹಿಸಲಾಗಿತ್ತು" ಎಂದು ಹೇಳಿದ್ದಾರೆ.
"ಕೈಗಾರಿಕಾ ಯೋಜನೆಗಳಿಗೆ ರಾಜ್ಯದಲ್ಲಿ ಅಗ್ನಿಶಾಮಕ, ಕಾನೂನು, ಅರಣ್ಯ ಮುಂತಾದ 33 ಇಲಾಖೆಗಳ ಅನುಮೋದನೆ ಬೇಕಾಗುತ್ತದೆ. ಜೊತೆಗೆ 147 ಬಗೆಯ ಸೇವೆಗಳಿವೆ. ಇವನ್ನು ಒಂದೇ ಕಡೆ ತರಬೇಕಾಗಿದೆ. ಈ ಸಾಫ್ಟ್‌ವೇರ್ ಇದನ್ನು ಸುಗಮಗೊಳಿಸಲಿದೆ. ಏಕಗವಾಕ್ಷಿ ವ್ಯವಸ್ಥೆಯ ಬಗ್ಗೆ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಹಾಗೂ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಪರಿಚಯಿಸಲಾಗುವುದು. ಆ ಮೂಲಕ ಕೈಗಾರಿಕಾ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳೂ ತಮ್ಮ ವ್ಯಾಪ್ತಿಯ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಕೋರಲಾಗುವುದು" ಎಂದು ತಿಳಿಸಿದರು.