ಕರ್ನಾಟಕ

karnataka

ETV Bharat / state

ಬೆಳಗಾವಿ ಅಧಿವೇಶನದಲ್ಲಿ ಕಿತ್ತೂರು-ಕಲ್ಯಾಣ ಪ್ರಾಂತ್ಯಗಳ ಅಭಿವೃದ್ಧಿ ಬಗ್ಗೆ ಚರ್ಚೆ: ಸಭಾಪತಿ ಹೊರಟ್ಟಿ - BELAGAVI SESSION

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ಕುರಿತು ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾಹಿತಿ ನೀಡಿದರು.

HORATTI REACT ON BELAGAVI DISTRICT
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (ETV Bharat)

By ETV Bharat Karnataka Team

Published : Dec 7, 2024, 7:42 PM IST

ಬೆಳಗಾವಿ:ಡಿ.9ರಿಂದ ನಡೆಯಲಿರುವ ಚಳಿಗಾಲ ಅಧಿವೇಶನ ಯಶಸ್ಸಿಗೆ ಹಾಗೂ ಕಲಾಪವನ್ನು ರಚನಾತ್ಮಕವಾಗಿ ನಡೆಸಲು ಪರಿಷತ್ ಸದಸ್ಯರಿಗೆ ಅನೇಕ ಸಲಹೆಗಳನ್ನು ನೀಡಲಾಗಿದೆ. ಮಂಗಳವಾರ ಮತ್ತು ಬುಧವಾರ ಪ್ರಶ್ನೋತ್ತರ ವೇಳೆ‌ಯ ನಂತರ ಸಂಪೂರ್ಣ ಕಿತ್ತೂರ-ಕಲ್ಯಾಣ ಪ್ರಾಂತ್ಯಗಳ ಅಭಿವೃದ್ಧಿ ಕುರಿತು ಚರ್ಚಿಸಲು ಸದಸ್ಯರಿಗೆ ಸಲಹೆ ನೀಡಲಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಅಧಿವೇಶನ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಶನಿವಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗುವುದಿಲ್ಲ. ಶಾಸಕರು, ಸಚಿವರು ಪ್ರವಾಸಕ್ಕೆ ಬಂದಂತೆ ಬರುತ್ತಾರೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಸಾರ ಆಗಿವೆ. ಹಾಗಾಗಿ, 9 ರಂದು ಮಧ್ಯಾಹ್ನ ಊಟದ ನಂತರ ವಿರೋಧ ಪಕ್ಷದ ನಾಯಕರು, ಆಡಳಿತ ಪಕ್ಷದ ನಾಯಕರ ಸಭೆ ಕರೆದಿದ್ದೇನೆ. ಪ್ರತಿಭಟನೆ ನಡೆಸಿ ಸದನದ ಸಮಯ ವ್ಯರ್ಥಗೊಳಿಸದೇ, ಸದನ ಸುಗಮವಾಗಿ ನಡೆಸಲು ಅವಕಾಶ ನೀಡುವಂತೆ ತಿಳಿಸಿದ್ದೇವೆ ಎಂದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (ETV Bharat)

ಈ ಬಾರಿ ಪರಿಷತ್ತಿನಲ್ಲಿ ಒಟ್ಟು 1397 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 150 ಚುಕ್ಕೆ ಗುರುತಿನ ಪ್ರಶ್ನೆಗಳು ಹಾಗೂ 81 ಗಮನ ಸೆಳೆಯುವ ಸೂಚನೆಗಳು ಬಂದಿರುತ್ತವೆ. ಈ ಅಧಿವೇಶನದಲ್ಲಿ 14 ಬಿಲ್​ಗಳು ಪಾಸ್ ಆಗುತ್ತಿವೆ. ಇನ್ನು ಮೊದಲ ವಾರ ಮಂಗಳವಾರ ಹಾಗೂ ಬುಧವಾರ ಯುಕೆಪಿ, ಮಹಾದಾಯಿ, ರೈತರ ಸಮಸ್ಯೆ, ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತ‌ ಚರ್ಚೆಗಳಿಗೆ ಒತ್ತು‌ ನೀಡಲಾಗುವುದು. ಅಧಿವೇಶನ ಮಂಗಳವಾರ ಮತ್ತು ಬುಧವಾರ ಪ್ರಶ್ನೋತ್ತರ ವೇಳೆ‌ ನಂತರ ಸಂಪೂರ್ಣ ಕಿತ್ತೂರ ಕಲ್ಯಾಣ ಪ್ರಾಂತ್ಯಗಳ ಅಭಿವೃದ್ಧಿ ಚಿಂತನೆ ನಡೆಸಲು ಸಲಹೆ ನೀಡಲಾಗಿದೆ ಎಂದರು.

ಮಕ್ಕಳ ರಕ್ಷಣೆ ಕುರಿತು ಅರಿವು ಮೂಡಿಸಲು ಕ್ರಮ‌ ವಹಿಸಲಾಗುತ್ತಿದ್ದು, ಪರಿಷತ್ ಸದಸ್ಯರ ವೇದಿಕೆ ಮಾಡಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಸರಕಾರಕ್ಕೆ ಸಲಹೆ ನೀಡಲು ಕ್ರಮ ವಹಿಸಲಾಗುವುದು. ಶಾಸಕರ ಹಾಜರಾತಿ ಹೆಚ್ಚಳಕ್ಕೆ ಕೂಡ ಆದ್ಯತೆ ನೀಡಲಾಗುವುದು.‌‌ ಶಾಸಕರ ಮನವೊಲಿಸಲು ಯತ್ನಿಸಲಾಗುತ್ತದೆ ಎಂದು ತಿಳಿಸಿದರು. ಶಾಸಕರ ಹಾಜರಾತಿ ಕಡ್ಡಾಯ‌ ಕಾನೂನು ಪ್ರಶ್ನೆಗೆ ಉತ್ತರಿಸಿದ ಬಸವರಾಜ ಹೊರಟ್ಟಿ, ಆ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು. ಮಕ್ಕಳಿಗೆ ಚಾಕಲೇಟ್ ಕೊಟ್ಟಂತೆ ನಾವು ಮಾಡಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದರು.

ಬೆಳಗಾವಿಯನ್ನು ಅಧಿಕೃತವಾಗಿ ಎರಡನೇ ರಾಜಧಾನಿ ಅಂತಾ ಘೋಷಿಸುವಂತೆ ಒತ್ತಾಯ ವಿಚಾರಕ್ಕೆ ನಾಳೆ ಮುಖ್ಯಮಂತ್ರಿಗಳು ಬರುತ್ತಿದ್ದು, ಅವರನ್ನು ಬಿಡಬೇಡಿ. ಪಟ್ಟು ಹಿಡಿದು ಅವರನ್ನು ಕೇಳಿ. ನಾನು ಕೂಡ ಖಂಡಿತವಾಗಿ ಆ ನಿಟ್ಟಿನಲ್ಲಿ ಸರ್ಕಾರಕ್ಕೆ ಸಲಹೆ ನೀಡುತ್ತೇನೆ ಎಂದರು.

ಅಧಿವೇಶನ ನಡೆಸಲು ಈ ಬಾರಿ 20 ಕೋಟಿ ಅಂದಾಜಿಸಲಾಗಿದೆ. ಶಾಸಕರ ಭವನ ನಿರ್ಮಿಸಲು ಕೆಲವು ಪ್ರಸ್ತಾವನೆಗಳು ಬಂದಿವೆ. ಇವುಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ನಿರ್ಧರಿಸಲಾಗುವುದು. ತಾಜ್ ಗ್ರೂಪ್, ಕೆಎಲ್​ಇ ಹೀಗೆ ಅನೇಕ ಸಂಸ್ಥೆಗಳು ಶಾಸಕರ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಿದ್ದು, ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಸಾಧಕ-ಬಾಧಕಗಳ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆಯಾಗಬೇಕಿದೆ.‌ ಜಿಲ್ಲೆಯಲ್ಲಿ 18 ಶಾಸಕರು, ಇಬ್ಬರು ಲೋಕಸಭೆ ಸದಸ್ಯರು, ಓರ್ವ ರಾಜ್ಯಸಭಾ ಸದಸ್ಯ, ಇಬ್ಬರು ಪರಿಷತ್ ಸದಸ್ಯರಿದ್ದಾರೆ. ಇವರೆಲ್ಲರೂ ಗಟ್ಟಿಯಾಗಿ ಸರ್ಕಾರದ ಮುಂದೆ ಹೋಗಿ ಕುಳಿತರೆ ಒಂದೇ ದಿನದಲ್ಲಿ ಜಿಲ್ಲಾ ವಿಭಜನೆ ಆದೇಶ ಬರುತ್ತದೆ. ಹಿಂದೆ ಧಾರವಾಡ ಜಿಲ್ಲೆ ವಿಭಜನೆ ವೇಳೆ ಅಲ್ಲಿನ 18 ಶಾಸಕರೂ ಸರ್ಕಾರದ ಮುಂದೆ ಹೋಗಿ ಕುಳಿತು ಧಾರವಾಡ, ಗದಗ, ಹಾವೇರಿ‌ ಜಿಲ್ಲೆ ರಚನೆ ಮಾಡಿಸಿದ್ದೇವು. ಆ ರೀತಿ ಇಲ್ಲಿಯೂ ಜನಪ್ರತಿನಿಧಿಗಳು ಒಂದಾಗಬೇಕು ಎಂದರು.

ವಿಧಾನ ಪರಿಷತ್​ಗೆ ನಾಮನಿರ್ದೇಶನ ಸದಸ್ಯರ ನೇಮಕಾತಿಯಲ್ಲಿ ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ಸಾಂಸ್ಕೃತಿಕ ವಲಯದಲ್ಲಿ ಸಾಧನೆಗೈದ ಸಾಧಕರಿಗೆ ಮೊದಲಿನಿಂದಲೂ ಆದ್ಯತೆ ನೀಡುತ್ತಾ ಬರಲಾಗಿದೆ. ಖಾಲಿ ಇರುವ ಪರಿಷತ್ ಸದಸ್ಯತ್ವಕ್ಕೆ ಇಂಥ ಸಾಧಕರ ನೇಮಕಾತಿಗೆ ಆದ್ಯತೆ ನೀಡಬೇಕೆಂದು ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ‌ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ವಿಧಾನ‌ ಪರಿಷತ್ ಕಾರ್ಯದರ್ಶಿ ಕೆ.ಆರ್.‌ಮಹಾಲಕ್ಷ್ಮೀ, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ:ಬೆಳಗಾವಿ ಚಳಿಗಾಲ ಅಧಿವೇಶನ: ಭದ್ರತೆ ಕುರಿತು ಈಟಿವಿ ಭಾರತ ಜೊತೆಗೆ ಪೊಲೀಸ್ ಆಯುಕ್ತರ ಸಂದರ್ಶನ

ABOUT THE AUTHOR

...view details