ಬೆಂಗಳೂರು:ರಾಜ್ಯ ಸರ್ಕಾರ ಮಹತ್ವದ ಗೃಹ ಆರೋಗ್ಯ ಯೋಜನೆಗೆ ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಕೋಲಾರ ಜಿಲ್ಲೆಯಿಂದ ಯೋಜನೆ ಪ್ರಾರಂಭಿಸಲಾಗಿದ್ದು, ಸಾಂಕೇತಿಕವಾಗಿ ನಾಲ್ವರಿಗೆ ಔಷಧಿ ವಿತರಿಸಲಾಯಿತು.
ರಾಜ್ಯದಲ್ಲಿ ಶೇಕಡಾ 26.9ರಷ್ಟು ರಕ್ತದೊತ್ತಡ, ಶೇಕಡಾ 15.6ರಷ್ಟು ಮಧುಮೇಹ ರೋಗಗಳಿಂದ ಜನರು ಬಳಲುತ್ತಿದ್ದು, ಇದರಿಂದ ಉಂಟುಗುತ್ತಿರುವ ಮರಣ ಹಾಗೂ ಅನಾರೋಗ್ಯ ತೊಡಕುಗಳನ್ನು ತಡೆಗಟ್ಟುವುದು ಗೃಹ ಆರೋಗ್ಯ ಯೋಜನೆಯ ಮುಖ್ಯ ಗುರಿ.
ಅಲ್ಲದೇ ರಾಜ್ಯದಲ್ಲಿ ಶೇಕಡಾ 11.5ರಷ್ಟು ಬಾಯಿ ಕ್ಯಾನ್ಸರ್, ಶೇಕಡಾ 26ರಷ್ಟು ಸ್ತನ ಕ್ಯಾನ್ಸರ್ ಹಾಗೂ ಶೇಕಡಾ 18.3ರಷ್ಟು ಗರ್ಭಕಂಠದ ಕ್ಯಾನ್ಸರ್ ರೋಗಗಳಿಂದ ಜನರು ತತ್ತರಿಸುತ್ತಿದ್ದು, ಈ ರೋಗಗಳಿಗೂ ಪರಿಹಾರ ಒದಗಿಸಲು ಗೃಹ ಆರೋಗ್ಯ ಯೋಜನೆಯಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ.
ಯೋಜನೆಯ ಮುಖಾಂತರ ಜನರಿಗೆ ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸಿ ಔಷಧಿ ಪೂರೈಸುವುದಷ್ಟೇ ಅಲ್ಲದೇ, ದೀರ್ಘಾವಧಿಯಲ್ಲಿ ಈ ಅಸಾಂಕ್ರಾಮಿಕ ರೋಗಗಳಿಂದ ಉಂಟಾಗುವ ಕಿಡ್ನಿ ವೈಫಲ್ಯ, ಹೃದಯಾಘಾತ, ಸ್ಟ್ರೋಕ್ಗಳಂತಹ ಜೀವಾಪಾಯಗಳಿಂದ ಜನರನ್ನು ರಕ್ಷಿಸಬಹುದಾಗಿದೆ.
3 ಕೋಟಿ ಜನರ ತಪಾಸಣೆ ಗುರಿ: ''ಕೋಲಾರ ಜಿಲ್ಲೆಯಿಂದ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದ್ದು, ಎರಡು ತಿಂಗಳ ಬಳಿಕ ರಾಜ್ಯಾದ್ಯಂತ ಯೋಜನೆ ಚಾಲ್ತಿಗೆ ಬರಲಿದೆ. ಹಳ್ಳಿಗಾಡಿನ ಜನರು ರಕ್ತದೊತ್ತಡ, ಮಧುಮೇಹ ರೋಗಗಳ ತಪಾಸಣೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೀಗಾಗಿ, ಆರೋಗ್ಯ ಇಲಾಖೆಯನ್ನು ಜನರ ಮನೆ ಬಳಿಗೆ ಕಳಿಸಿ ತಪಾಸಣೆ ನಡೆಸಿ, ಔಷಧಿ ಪೂರೈಸುವ ಯೋಜನೆ ರೂಪಿಸಿದೆ. ಈ ಯೋಜನೆ ಮೂಲಕ ರಾಜ್ಯದ 6 ಕೋಟಿ ಜನರಲ್ಲಿ ಮೂರು ಕೋಟಿ ಜನರನ್ನು ತಪಾಸಣೆ ಮಾಡುವ ಗುರಿ ಹೊಂದಿದ್ದೇವೆ'' ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
''ದೀರ್ಘಕಾಲೀನ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡುವ ಉದ್ದೇಶ ಇದೆ. ಈ ಕಾರ್ಯಕ್ರಮದಿಂದ ಜನರ ಆರೋಗ್ಯ ರಕ್ಷಿಸಲು ಪಣ ತೊಟ್ಟಿದ್ದೇವೆ. ತಪಾಸಣೆ ಮಾಡಿ ಅಗತ್ಯ ಔಷಧಿ ಕೊಡಲಾಗುತ್ತದೆ. ಇದರ ಜೊತೆಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದೇವೆ. ಸಕ್ಕರೆ ಕಾಯಿಲೆ, ಬಿಪಿ, ಕ್ಯಾನ್ಸರ್, ಮಾನಸಿಕ ರೋಗಕ್ಕೂ ಈ ಕಾರ್ಯಕ್ರಮದಲ್ಲಿ ಆದ್ಯತೆ ನೀಡಲಾಗುವುದು'' ಎಂದು ಸಚಿವರು ಹೇಳಿದ್ದಾರೆ.
ಗೃಹ ಆರೋಗ್ಯ ಯೋಜನೆಯ ವಿಶೇಷತೆ ಏನು?:ಕೋಲಾರ ಜಿಲ್ಲೆಯಿಂದ ಯೋಜನೆ ಪ್ರಾರಂಭ ಮುಂಬರುವ ಜನವರಿ ತಿಂಗಳಿನಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯೋಜನೆ ಜಾರಿಯಾಗಲಿದೆ. ರಕ್ತದೊತ್ತಡ, ಮಧುಮೇಹ ಮತ್ತು ಬಾಯಿ, ಗರ್ಭ ಕಂಠ ಮತ್ತು ಸ್ತನ ಕ್ಯಾನ್ಸರ್ ಸ್ಕ್ರೀನಿಂಗ್, BMI, ವೇಸ್ಟ್ ಹಿಪ್ ರೇಷ್ಯೋ ಅನುಪಾತ, ಸ್ಲೀಪ್ ಅಪ್ನಿಯಾ (ನಿದ್ದೆಯಲ್ಲಿ ಉಸಿರುಗಟ್ಟುವಿಕೆ) ಮತ್ತು ಮಾನಸಿಕ ಆರೋಗ್ಯ ಅಸ್ವಸ್ಥತೆಗಳ ತಪಾಸಣೆ ನಡೆಸಲಾಗುತ್ತದೆ.
ಆರೋಗ್ಯ ಕಾರ್ಯಕರ್ತರ ತಂಡವು ದಿನಕ್ಕೆ 15 ಮನೆಗಳ ತಪಾಸಣೆ ನಡೆಸಲಿದೆ. ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರದಂದು ಈ ತಂಡ ಮನೆ ಮನೆಗಳಿಗೆ ಭೇಟಿ ನೀಡಲಿದೆ. ದೃಢಪಟ್ಟ ಪ್ರಕರಣಗಳಿಗೆ ಅಗತ್ಯ ಔಷಧಿಗಳನ್ನು ಮಾತ್ರೆ ಪೆಟ್ಟಿಗೆ ನೀಡಲಾಗುವುದು. ಕೆಲವರಿಗೆ ಜೀವನಶೈಲಿ ಮಾರ್ಪಡಿಗೆ (ಆಹಾರ, ವ್ಯಾಯಾಮ) ಸಲಹೆ ನೀಡಲಾಗುವುದು. ಎರಡು ತಿಂಗಳ ನಂತರ ತಪಾಸಣೆ ಮಾಡಿ ದೃಢಪಟ್ಟಲ್ಲಿ ಅಂಥವರಿಗೆ ಔಷಧೋಪಚಾರಗಳನ್ನು ನೀಡಲಾಗುವುದು.
ಆರೈಕೆಯಲ್ಲಿರುವ ರೋಗಿಗಳಿಗೆ, ವಿಶೇಷ ವಿಕಲಚೇತನರಿಗೆ, ಹಿರಿಯ ನಾಗರಿಕರಿಗೆ ಅಸಾಂಕ್ರಾಮಿಕ ರೋಗಿಗಳು ಇದ್ದಲ್ಲಿ ಔಷಧೋಪಚಾರಗಳನ್ನು ನೀಡಲಾಗುವುದು. ಉಚಿತವಾಗಿ ಮಾತ್ರೆ ಪೆಟ್ಟಿಗೆಯಲ್ಲಿ ಔಷಧಿ ನೀಡಲಾಗುತ್ತದೆ. ಅಂದಾಜು 4-6 ತಿಂಗಳುಗಳಲ್ಲಿ ಸ್ಕ್ರೀನಿಂಗ್ ಕಾರ್ಯ ಪೂರ್ಣಗೊಳ್ಳಲಿದೆ. ನಂತರ ಹೆಚ್ಚಿನ ಆರೈಕೆಗಾಗಿ ಒಂದು ತಿಂಗಳ ನಂತರ ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತದೆ.
ಎರಡನೇ ಹಂತದಲ್ಲಿ, ಎನ್.ಸಿ.ಡಿ.ಗಳ ಅನುಸರಣೆ (ಫಾಲೋ ಅಪ್) ಮತ್ತು ನಿಯಂತ್ರಣಕ್ಕೆ ಗಮನ ನೀಡಲಾಗುತ್ತದೆ. ಈ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಮಾಸಿಕ ಆರೋಗ್ಯ ಶಿಬಿರಗಳನ್ನು ನಡೆಸಲಾಗುತ್ತದೆ.
ಇದನ್ನೂ ಓದಿ:ನಾನು ಸ್ಟೆಂಟ್ ಹಾಕಿಸಿಕೊಂಡು 24 ವರ್ಷವಾಯ್ತು, ಅರಾಮಾಗಿ ಕೆಲಸ, ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದೇನೆ: ಸಿಎಂ