ಮೈಸೂರು : ಸಚಿವ ಕೆ ಎನ್ ರಾಜಣ್ಣ ದೊಡ್ಡವರು. ಅವರ ಬಗ್ಗೆ ನಾನು ಮಾತನಾಡಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ ಓರ್ವ ಸಣ್ಣ ಕಾರ್ಯಕರ್ತ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.
ಸಚಿವ ಕೆ.ಎನ್.ರಾಜಣ್ಣ ಅವರ ದಿಢೀರ್ ದೆಹಲಿ ಪ್ರವಾಸ, ಉದಯಗಿರಿ ಗಲಾಟೆಗೆ ಪೊಲೀಸರ ಕರ್ತವ್ಯಲೋಪ ಕಾರಣ ಎಂಬ ಅವರ ಹೇಳಿಕೆಗೆ ಮೈಸೂರಿನಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ, ರಾಜಣ್ಣ ದೊಡ್ಡವರು, ನಾನು ಅವರ ಬಗ್ಗೆ ಮಾತನಾಡಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಾನೊಬ್ಬ ಸಣ್ಣ ಕಾರ್ಯಕರ್ತ ಅಷ್ಟೇ. ಉದಯಗಿರಿ ಪೊಲೀಸ್ ಠಾಣೆಯ ಮೇಲೆ ದಾಳಿ ವಿಚಾರದಲ್ಲಿ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಈ ಬಗ್ಗೆ ನೋಡಿಕೊಳ್ಳುತ್ತಾರೆ . ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಪ್ರಯಾಗ್ರಾಜ್ ಪುಣ್ಯಸ್ನಾನದಷ್ಟೇ ಶ್ರೇಷ್ಠ: ಈ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದು ಪ್ರಯಾಗ್ರಾಜ್ನಲ್ಲಿ ಮಾಡಿದ್ದಷ್ಟೇ ಸಂತಸವಾಗಿದೆ. ನಮ್ಮ ತ್ರಿವೇಣಿ ಸಂಗಮವಾದ ಕಾವೇರಿ, ಕಪಿಲ, ಸ್ಫಟಿಕ ಬಹಳ ಪವಿತ್ರವಾದ ಸ್ಥಳ. ತಲಕಾಡಿನ ಗಂಗರು ಸೇರಿದಂತೆ ನಮ್ಮ ಅನೇಕ ಪೂರ್ವಜರು ಇದೇ ಸ್ಥಳದಿಂದ ಆಳಿದಂತಹ ದಾಖಲೆಗಳಿವೆ. ಈಗ ಅನೇಕ ಮಠಾಧೀಶರು ಕರ್ನಾಟಕದಲ್ಲಿ ಕುಂಭಮೇಳದ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಇದು ಕೂಡಾ ಯಾವುದಕ್ಕೂ ಕಡಿಮೆ ಇಲ್ಲ. ನಿನ್ನೆ ರಾತ್ರಿ ನಾನು ಕೂಡ ಮೇಳದಲ್ಲಿ ಸ್ನಾನ ಮಾಡಿದೆ. ನೀರು ಬಹಳ ಪವಿತ್ರವಾಗಿದೆ. ನಾವು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ನಮ್ಮ ನಾಡಿನಲ್ಲಿ ಇಂಥ ಜಾಗ ಇರುವುದು ನಮ್ಮೆಲ್ಲರ ಭಾಗ್ಯ. ಮೈಸೂರು ಜಿಲ್ಲಾಡಳಿತವು ಗಂಗಾರತಿ ಮಾದರಿಯಲ್ಲೇ, ಕಾವೇರಿ ಆರತಿ ಮಾಡಿದ್ದಾರೆ. ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಡಿ ಕೆ ಶಿವಕುಮಾರ್ ಪ್ರಶಂಸೆ ವ್ಯಕ್ತಪಡಿಸಿದರು.
ಕಾವೇರಿ ಆರತಿ ಬಜೆಟ್ನಲ್ಲಿ ಸೇರ್ಪಡೆ : ಮುಂದಿನ ದಿನಗಳಲ್ಲಿ ಸರ್ಕಾರವು ಈ ಕುಂಭಮೇಳಕ್ಕೆ ಮಾಸ್ಟರ್ ಪ್ಲಾನ್ ಮಾಡುತ್ತದೆ. ಕಾವೇರಿ ಆರತಿ ಬಗ್ಗೆ ವರದಿ ತರಿಸಿಕೊಂಡಿದ್ದೇನೆ. ಈ ಬಾರಿಯ ಬಜೆಟ್ನಲ್ಲಿ ಅದನ್ನು ಅಧಿಕೃತವಾಗಿ ಸೇರಿಸಲು ಪ್ರಯತ್ನ ಮಾಡುತ್ತೇನೆ. ಮಾರ್ಚ್ 22 ರಂದು ವಿಶ್ವ ಜಲ ದಿನವಿದೆ. ಅದಕ್ಕೂ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಕರ್ನಾಟಕದ ಜನರು ಪ್ರಯಾಗ್ರಾಜ್ ಹೋಗುವ ಅವಶ್ಯಕತೆ ಇಲ್ಲ. ಗಂಗಾ, ಯಮುನಾ , ಸರಸ್ವತಿ, ನದಿಗಳಿಗೆ ಎಷ್ಟು ಪಾವಿತ್ರ್ಯತೆ ಇದೆಯೋ ಅಷ್ಟೇ ಪಾವಿತ್ರ್ಯತೆ ಕಾವೇರಿ ನದಿಗೂ ಇದೆ. ಹೀಗಾಗಿ ಇಲ್ಲಿಯೂ ಕೂಡ ವ್ಯವಸ್ಥೆ ಚೆನ್ನಾಗಿದೆ. ಪ್ರಯತ್ನಕ್ಕಿಂತ ಪ್ರಾರ್ಥನೆ ದೊಡ್ಡದು. ಮುಖ್ಯಮಂತ್ರಿಗಳು ಕೂಡ ಬರಬೇಕಿತ್ತು. ಮಂಡಿ ನೋವು ಇದ್ದುದರಿಂದ ಬರಲು ಸಾಧ್ಯವಾಗಲಿಲ್ಲ. ನೀನು ಹೋಗಿ ಬಾ ಅಂತ ನನ್ನನ್ನು ಕಳಿಸಿಕೊಟ್ಟಿದ್ದಾರೆ. ಹೀಗಾಗಿ ಬಂದೆ. ನಮ್ಮ ಸರ್ಕಾರದ ವತಿಯಿಂದ ಪ್ರೋತ್ಸಾಹ ನೀಡಲು ನಾನು ಇಲ್ಲಿಗೆ ಬಂದು ಪುಣ್ಯ ಸ್ನಾನ ಮಾಡಿದ್ದೇನೆ. ಎಲ್ಲರೂ ನಮ್ಮ ರಾಜ್ಯದ ತ್ರಿವೇಣಿ ಸಂಗಮದಲ್ಲೇ ಪವಿತ್ರ ಸ್ನಾನ ಮಾಡಿ ಎಂದು ಮನವಿ ಮಾಡಿದರು.
ಮೆಟ್ರೋ ದರ ಏರಿಕೆ : ಬಿಜೆಪಿಯವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ. ಮೆಟ್ರೋ ವಿಚಾರದಲ್ಲಿ ಅದಕ್ಕೇ ಆದಂತಹ ಸಮಿತಿ ಇದೆ. ದರ ಏರಿಕೆ ಮತ್ತು ಇಳಿಕೆ ಕುರಿತು ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇನ್ನು ಡಬಲ್ ಡೆಕ್ಕರ್ ನಿರ್ಮಿಸಲು ಪಾಲಿಕೆ ವತಿಯಿಂದ ಶೇ.50 ರಷ್ಟು ಹಣ ನಮ್ಮ ಸರ್ಕಾರ ನೀಡುತ್ತದೆ ಎಂದು ಇದೇ ವೇಳೆ ವಿವಿರಣೆ ನೀಡಿದರು.