ದಾವಣಗೆರೆ: ಸ್ವಾತಂತ್ರ್ಯ ಬಂದು 78 ವರ್ಷಗಳು ಸಂದಿವೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಏನೋ ಬಂದಿದೆ. ಅದರೆ ದಾವಣಗೆರೆ ಜಿಲ್ಲೆಯ 'ಗುಡ್ಡದಹಟ್ಟಿ' ಗ್ರಾಮಕ್ಕೆ ಬಸ್ ಸಂಪರ್ಕ ಮಾತ್ರ ಸಿಕ್ಕಿಲ್ಲ. ಅಲ್ಲದೆ, ಮೂಲಭೂತ ಸೌಲಭ್ಯಗಳಿಂದ ಈ ಗ್ರಾಮದ ಜನರು ವಂಚಿತರಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗಮನ ನೀಡುವಂತೆ ಮನವಿ ಮಾಡಿದ್ದಾರೆ.
''ಕಾನನದ ಮಧ್ಯೆ ಈ ಪುಟ್ಟ ಗ್ರಾಮ ಇದ್ದು, ಬಸ್ ಸಂಪರ್ಕ ಇಲ್ಲದೆ ಮಕ್ಕಳು ಕಾಲ್ನಡಿಗೆಯಲ್ಲೇ ಶಾಲೆಗೆ ತೆರಳುವ ಪರಿಸ್ಥಿತಿ ಇದೆ. ಶಾಲೆ ತಲುಪುವುದು ಕಷ್ಟಸಾಧ್ಯ. ಇದರಿಂದ ಎಷ್ಟೋ ಪೋಷಕರು ತಮ್ಮ ಮಕ್ಕಳ ಶಾಲೆ ಬಿಡಿಸುತ್ತಿದ್ದಾರೆ. ಆರೋಗ್ಯ ಸಮಸ್ಯೆ ಎದುರಾದರೆ ಗುಡ್ದಹಳ್ಳಿ ಗ್ರಾಮಸ್ಥರು ಸಾಹಸ ಮಾಡಿ ಆಸ್ಪತ್ರೆ ಸೇರಿರುವ ಉದಾಹರಣೆಗಳು ಕಣ್ಣಿನ ಮುಂದಿದೆ. ಕಾಡಿನಂಚಿನಲ್ಲಿರುವ ಗುಡ್ದಹಳ್ಳಿ ಗ್ರಾಮಕ್ಕೆ ಬಸ್, ಮೂಲಭೂತ ಸೌಕರ್ಯ ನೀಡುವಂತೆ'' ಗ್ರಾಮಸ್ಥರು ಈಟಿವಿ ಭಾರತಕ್ಕೆ ಅವಲತ್ತುಕೊಂಡಿದ್ದಾರೆ.
ಬಸ್ ಸಂಪರ್ಕ ಇಲ್ಲದ್ದರಿಂದ ಇಲ್ಲಿನ ಮಕ್ಕಳು ದೂರದ ನರಗನಹಳ್ಳಿ ಗ್ರಾಮದಲ್ಲಿರುವ ಶಾಲೆಗೆ ಕಾಲ್ನಡಿಗೆಯಲ್ಲೇ ತೆರಳುವ ಪರಿಸ್ಥಿತಿ ಇದೆ. 20ಕ್ಕೂ ಹೆಚ್ಚು ಮಕ್ಕಳು ತೆರಳುತ್ತಿದ್ದು, ಪ್ರತಿದಿನ 8 ಕಿ.ಮೀ ಕ್ರಮಿಸಬೇಕು. ಗ್ರಾಮ ಕಾಡಿನಂಚಿನಲ್ಲಿರುವ ಕಾರಣ ಮಕ್ಕಳು ಶಾಲೆಗೆ ತೆರಳುವ ವೇಳೆ ಕಾಡು ಪ್ರಾಣಿಗಳು ಕಂಡಿರುವ ಉದಾಹರಣೆಗಳಿವೆ. ಆರೋಗ್ಯ ಹದಗೆಟ್ಟರೆ ಖಾಸಗಿ ವಾಹನಗಳಲ್ಲಿ ಆಸ್ಪತ್ರೆಗೆ ತೆರಳುವ ಪರಿಸ್ಥಿತಿ ಇದೆ. ಕಳೆದ 8 ವರ್ಷಗಳ ಹಿಂದೆ ಬಸ್ ಬಿಟ್ಟಿದ್ದರು. ಆದರೆ, ಇದ್ದಕ್ಕಿದ್ದಂತೆ ಮತ್ತೆ ಬಸ್ ಸಂಚಾರವನ್ನು ನಿಲ್ಲಿಸಿದ್ದಾರೆ. ಪಡಿತರ ತರಲು 8 ಕಿ.ಮೀ ಕ್ರಮಿಸಬೇಕು. ಬಸ್ ಸಂಪರ್ಕ ಇಲ್ಲದ ಕಾರಣ ಕೆಲಸ ಅರಸಿ ಬೇರೆ ಕಡೆ ಹೋಗುವವರಿಗೂ ಸಮಸ್ಯೆ ತಂದೊಡ್ಡಿದೆ.