ಕರ್ನಾಟಕ

karnataka

ETV Bharat / state

ರೈತರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹ: ಬೆಳಗಾವಿಯಲ್ಲಿ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ - Massive protest by Farmers

ಮಳೆಯನ್ನೂ ಲೆಕ್ಕಿಸದೇ ಬೃಹತ್​ ಪ್ರತಿಭಟನಾ ರ‍್ಯಾಲಿ ನಡೆಸಿದ ರೈತರು, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.

Farmers submitted request letter to DC
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ರೈತರು (ETV Bharat)

By ETV Bharat Karnataka Team

Published : Jul 22, 2024, 8:11 PM IST

ರೈತರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹ: ಬೆಳಗಾವಿಯಲ್ಲಿ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ (ETV Bharat)

ಬೆಳಗಾವಿ: ಮೂರು ಕೃಷಿ ಕಾಯ್ದೆ ರದ್ದತಿ, ರೈತರ ಸಾಲಮನ್ನಾ ಸೇರಿದಂತೆ‌ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸುರಿಯುವ ಮಳೆಯನ್ನೂ ಲೆಕ್ಕಿಸದೇ ಪ್ರತಿಭಟನಾ ರ‍್ಯಾಲಿ ನಡೆಸಿದ ರೈತ ಸಂಘದ ಕಾರ್ಯಕರ್ತೆಯರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಂದ ಬೃಹತ್​ ಪ್ರತಿಭಟನೆ (ETV Bharat)

ಕಬ್ಬಿನ ಬಾಕಿ ಬಿಲ್ ತಕ್ಷಣ ಜಮಾ ಮಾಡಬೇಕು. ಬೆಳೆ ಪರಿಹಾರ ಹಣ ಜಮೆ ಆಗದೇ ಇರುವ ರೈತರಿಗೆ ತಕ್ಷಣ ಜಮಾ ಮಾಡಬೇಕು. ರೈತರ ವಾಹನಗಳನ್ನು ಪೊಲೀಸರು ಅನಗತ್ಯವಾಗಿ ಅಡ್ಡಗಟ್ಟಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದು, ಅದನ್ನು ನಿಲ್ಲಿಸಬೇಕು. ಸರ್ವೇ ಇಲಾಖೆಯಲ್ಲಿ ಮನಸ್ಸಿಗೆ ಬಂದಷ್ಟು ದುಡ್ಡು ತೆಗೆದುಕೊಂಡು ನಕ್ಷೆಯನ್ನು ಸಂಪೂರ್ಣ ತಪ್ಪಾಗಿ ತಯಾರಿಸುತ್ತಿದ್ದಾರೆ. ಅದಕ್ಕೆ ಡಿಡಿಎಲ್ಆರ್ ಬೆಂಬಲ ನೀಡುತ್ತಿದ್ದು, ಅವರ ಮೇಲೆ ಕಾನೂನುಕ್ರಮ ಕೈಗೊಳ್ಳಬೇಕು. ಅದೇ ರೀತಿ ರೈತರಿಗೆ ಕೃಷಿ ಇಲಾಖೆಯಿಂದ ಮೊದಲಿನ ಹಾಗೆ ಸಹಾಯಧನ ನೀಡಬೇಕು. ರೈತರ ಕೃಷಿ ಪಂಪ್​ಸೆಟ್​ಗಳಿಗೆ ಹಗಲು 7 ತಾಸು ತ್ರಿಫೇಸ್ ವಿದ್ಯುತ್ ನೀಡಬೇಕು. ರಾತ್ರಿ ವೇಳೆ ಸಂಜೆ 6 ರಿಂದ ಬೆಳಗಿನ 7 ರವರೆಗೆ ವಿದ್ಯುತ್ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, "ಪ್ರವಾಹ ಸಂದರ್ಭದಲ್ಲಿ ಅಗತ್ಯವಿರುವ ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಬೇಡಿಕೆಗಳ ಕುರಿತು ಸಂಬಂಧಿತರ ಜತೆ ಚರ್ಚಿಸುತ್ತೇನೆ" ಎಂದು ಭರವಸೆ ನೀಡಿದರು.

ಇದಕ್ಕೂ‌ ಮೊದಲು ಮಾಧ್ಯಮಗಳ ಜೊತೆಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ, "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ರೈತ ವಿರೋಧಿ ಸರ್ಕಾರವಾಗಿದೆ. ಎಂಎಸ್​ಪಿ ಜಾರಿಗೊಳಿಸುವುದಾಗಿ ನರೇಂದ್ರ ಮೋದಿ 2014 ರಿಂದ ಹೇಳುತ್ತಿದ್ದಾರೆ. ಈ ಬಾರಿಯ ಬಜೆಟ್​ನಲ್ಲಾದರೂ ಅದು ಜಾರಿಯಾಗಲಿ ಎಂದು ಒತ್ತಾಯಿಸುತ್ತೇವೆ. ಕರ್ನಾಟಕದಲ್ಲಿ ರಾಜ್ಯದ ರೈತರ ಸ್ಥಿತಿಯನ್ನು ಸರ್ಕಾರ ಅರ್ಥೈಸಿಕೊಂಡಿಲ್ಲ. ರಾಜ್ಯದ ರೈತರನ್ನು ಮರೆತ ಮುಖ್ಯಮಂತ್ರಿಗಳು ಹಗರಣದಲ್ಲಿ ಸಿಲುಕಿದ್ದಾರೆ" ಎಂದು ಆರೋಪಿಸಿದರು.

"ಕಳೆದ ವರ್ಷ ಕರ್ನಾಟಕ ಭೀಕರ ಬರದಿಂದ ತತ್ತರಿಸಿತ್ತು. ಆದರೆ, ಸಂಕಷ್ಟದಲ್ಲಿರುವ ರೈತರಿಗೆ ಬೆಳೆವಿಮೆ ಸಿಕ್ಕಿಲ್ಲ. ಮಲ್ಟಿನ್ಯಾಷನಲ್, ಕಾರ್ಪೋರೇಟ್ ಕಂಪನಿಗಳಿಗೆ ಕೇಂದ್ರವು ಅಪಾರ ಪ್ರಮಾಣದಲ್ಲಿ ಸಾಲ ಕೊಟ್ಟಿದೆ. ಅದು ಮನಸ್ಸು ಮಾಡಿದ್ದರೆ ಇಡೀ ದೇಶದ ರೈತರ ಸಾಲಮನ್ನ ಮಾಡಬಹುದಿತ್ತು. ಆದರೆ, ಸರ್ಕಾರಕ್ಕೆ ಕಾಳಜಿ ಇಲ್ಲ. ಕರ್ನಾಟಕದ ವಿಧಾನಸಭೆ ಈಗ ಕಳ್ಳರ ಸಂತೆಯಾಗಿದೆ. ಇವರು ಕಳ್ಳರೆಂದು ಅವರು ಕಳ್ಳರೆಂದು ಇವರಿಗೆ ಅವರು, ಅವರಿಗೆ ಇವರು ಹೇಳುತ್ತಿದ್ದಾರೆ. ನೀವಿಬ್ಬರೂ ವಿಧಾನಸೌಧ ಖಾಲಿ ಮಾಡಿಬಿಡಿ" ಎಂದು ಕೋಡಿಹಳ್ಳಿ ಚಂದ್ರಶೇಖರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಗದಾಡಿ, ಜಿಲ್ಲಾಧ್ಯಕ್ಷ ಶಂಕರ ಮದಳ್ಳಿ, ರಾಜು ಮರವೆ, ರವಿ ಅಂಗಡಿ ಸೇರಿ ಮತ್ತಿತರರು ಇದ್ದರು.

ಕೋಡಿಹಳ್ಳಿ ಚಂದ್ರಶೇಖರ ಕಾಲಿಗೆ ಬಿದ್ದು ಗೋಳಾಡಿದ ರೈತ:ಪ್ರತಿಭಟನೆ ಸಮಯದಲ್ಲಿ ಕೋಡಿಹಳ್ಳಿ ಚಂದ್ರಶೇಖರ ಅವರ ಕಾಲಿಗೆ ಬಿದ್ದು ಸಮಸ್ಯೆ ಇತ್ಯರ್ಥ ಪಡಿಸಬೇಕೆಂದು ರೈತನೊಬ್ಬ ಕಣ್ಣೀರು ಹಾಕಿದ ಘಟನೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದೆ‌. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಬಳಿಕ ಧರಣಿ ಆರಂಭಿಸಿದ ರೈತ ಕಣ್ಣೀರು ಹಾಕಿ, ಕೋಡಿಹಳ್ಳಿ ಅವರ ಕಾಲಿಗೆ ಬಿದ್ದು ಗೋಳಾಡಿದನು. ಕಂಕಣವಾಡಿ ಗ್ರಾಮದ ರೈತ ಅಜ್ಜಪ್ಪ ಉಪ್ಪಾರ ಕಣ್ಣೀರು ಹಾಕಿದವರು.

ಅಜ್ಜಪ್ಪ ಕುಟುಂಬಕ್ಕೆ ಸೇರಿದ 9.38 ಎಕರೆ ಜಮೀನು ಇದೆ. ಅದರ ಪೈಕಿ ಎರಡು ಎಕರೆ ಭೂಮಿಯನ್ನು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಹಾನಿ ಮಾಡಿದ್ದಾರೆ. ನನ್ನ ಎರಡು ಎಕರೆ ಜಮೀನು ನೀಡುವಂತೆ ರೈತ ಅಜ್ಜಪ್ಪ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು. ಈ ವೇಳೆ ಹದಿನೈದು ದಿನ ಸಮಯಾವಕಾಶ ನೀಡುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು. ಅದರೆ, ಇದಕ್ಕೆ ಒಪ್ಪತ ರೈತ ಅಣ್ಣಪ್ಪ ಕಣ್ಣೀರು ಹಾಕಿ, ಗೋಳಾಡಿ ಸಮಸ್ಯೆ ಇತ್ಯರ್ಥ ಪಡಿಸುವಂತೆ ಕೋಡಿಹಳ್ಳಿ ಬಳಿ ಒತ್ತಾಯಿಸಿದರು. ನಂತರ ಕೋಡಿಹಳ್ಳಿ ಚಂದ್ರಶೇಖರ್​ ಅವರು ಆ ರೈತನಿಗೆ ಸಮಾಧಾನಪಡಿಸಿದರು.

ಇದನ್ನೂ ಓದಿ:ಶ್ರವಣಬೆಳಗೊಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶೀಘ್ರ ವೈದ್ಯರ ನೇಮಕಕ್ಕೆ ಆಗ್ರಹ - Community Health Center

ABOUT THE AUTHOR

...view details