ಕರ್ನಾಟಕ

karnataka

ETV Bharat / state

ವಿಶ್ವಕರ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ ಬೇಡಿಕೆ: ಒಂದು ವಾರ ಕಾಲಾವಕಾಶ ಪಡೆದ ಸಚಿವ ರಾಮಲಿಂಗಾರೆಡ್ಡಿ - ಬೆಂಗಳೂರು

ವಿಶ್ವಕರ್ಮ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಬಿಜೆಪಿ ಸದಸ್ಯರು ವಿಧಾನ ಪರಿಷತ್​ನಲ್ಲಿ ಬೇಡಿಕೆ ಮುಂದಿಟ್ಟಿದ್ದಾರೆ.

vishwakarma-development-authority
ವಿಶ್ವಕರ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ ಬೇಡಿಕೆ: ವಾರದ ಕಾಲಾವಕಾಶ ಪಡೆದ ಸಿಚಿವ ರಾಮಲಿಂಗಾರೆಡ್ಡಿ

By ETV Bharat Karnataka Team

Published : Feb 14, 2024, 3:52 PM IST

Updated : Feb 14, 2024, 10:18 PM IST

ವಿಶ್ವಕರ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ ಬೇಡಿಕೆ

ಬೆಂಗಳೂರು: ತಿಂತಿಣಿ ಮೌನೇಶ್ವರ ದೇವಾಲಯವನ್ನು ಪ್ರಧಾನವಾಗಿಸಿಕೊಂಡು ಶಿರಸಂಗಿ ಕಾಳಮ್ಮ, ಕಾಲಜ್ಞಾನಿ ಸಿದ್ದಪ್ಪಾಜಿ ಮತ್ತು ವೀರಬ್ರಹ್ಮೇಶ್ವರಸ್ವಾಮಿ ದೇವಾಲಯವನ್ನು ಒಳಗೊಂಡ ಅಭಿವೃದ್ಧಿ ಪ್ರಾಧಿಕಾರ ರಚನೆ ಸಂಬಂಧ ಇನ್ನೊಂದು ವಾರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಬೇಡಿಕೆ ಪರಿಗಣನೆ ಸಾಧ್ಯತೆ ಕುರಿತು ಮಾಹಿತಿ ನೀಡುವುದಾಗಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ವಿಧಾನ ಪರಿಷತ್ ಕಲಾಪದಲ್ಲಿಂದು ನಿಯಮ 330ರ ಅಡಿ ತಿಂತಿಣಿ ಮೌನೇಶ್ವರ, ಶಿರಸಂಗಿ ಕಾಳಮ್ಮ, ಕಾಲಜ್ಞಾನಿ ಸಿದ್ದೇಶ್ವರ ಮತ್ತು ವೀರಬ್ರಹ್ಮೇಶ್ವರ ಸ್ವಾಮಿಯೊಳಗೊಂಡು ನಾಲ್ಕು ದೇವಸ್ಥಾನ ಸೇರಿಸಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಎಂದು ಬಿಜೆಪಿ ಸದಸ್ಯ ಕೆ.ಪಿ.ನಂಜುಂಡಿ ಸರ್ಕಾರದ ಗಮನ ಸೆಳೆದರು. ನಮ್ಮ ಸಮಾಜದ ಕುಲದೇವರನ್ನು ರಕ್ಷಿಸಿಕೊಡಿ, ಅರುಣ್ ಯೋಗಿರಾಜ್ ರಾಮ ವಿಗ್ರಹ ನಿರ್ಮಿಸಿ ದೇಶದ ಹೀರೋ ಆದರು. ಆದರೆ ನಮ್ಮ ಸಮುದಾಯ ಮಾತ್ರ ಕಡೆಗಣಿಸಲ್ಪಟ್ಟಿದೆ.
ತಿಂತಿಣಿ, ಶಿರಸಂಗಿ ದೇವಾಲಯ ಮುಜರಾಯಿ ಇಲಾಖೆಗೆ ಬರಲಿದೆ. ಇನ್ನೆರಡು ದೇವಾಲಯ ಖಾಸಗಿಯಾಗಿದೆ. ಅದನ್ನು ಸರ್ಕಾರ ತೆಗೆದುಕೊಳ್ಳಬೇಕು ಎನ್ನುವ ಮನವಿಯೊಂದಿಗೆ ವಿಶ್ವಕರ್ಮ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಬೇಡಿಕೆಯಿಟ್ಟರು.

ಈ ವೇಳೆ ಮಾತನಾಡಿದ ಹೆಚ್.ವಿಶ್ವನಾಥ್, "ಆಡು ಕಾಯುವವನು ನಾಡು ಆಡಬೇಕು ಎಂದು ಮೌನೇಶ್ವರರ ದೇವಾಲಯದ ಮುಂದೆ ಬರೆಯಲಾಗಿದೆ. ಇಂದು ಆಡು ಕಾಯುವವ ನಾಡು ಆಳುತ್ತಿಲ್ಲವಾ? ಮೌನೇಶ್ವರರು ಹೇಳಿದ್ದು ನಿಜವಾಗಿಲ್ಲವಾ? ಅವರ ದೇವಾಲಯ ಅಭಿವೃದ್ಧಿ ಅಗತ್ಯ" ಎಂದು ಪ್ರತಿಪಾದಿಸಿದರು.

ಬಿಜೆಪಿ ಸದಸ್ಯ ಹನುಮಂತ ನಿರಾಣಿ ಕೂಡ ನಂಜುಂಡಿ ಅವರ ಬೇಡಿಕೆಯನ್ನು ಸಮರ್ಥಿಸಿಕೊಂಡರು. ತಿಂತಿಣಿ ಮೌನೇಶ್ವರ, ಶಿರಸಂಗಿ ಕಾಳಮ್ಮ ಬಹಳ ಖ್ಯಾತಿ ಗಳಿಸಿದೆ. ಇದರ ಜೊತೆ ಕಾಲಜ್ಞಾನಿ ಸಿದ್ದೇಶ್ವರ, ವೀರಬ್ರಹ್ಮೇಶ್ವರ ಸ್ವಾಮಿ ಸೇರಿಸಿ, ಪ್ರಾಧಿಕಾರ ರಚನೆ ಬೇಡಿಕೆಗೆ ಸಹಮತವಿದೆ. ಈ ಧಾರ್ಮಿಕ ಕ್ಷೇತ್ರಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು.

ಚರ್ಚೆಗೆ ಉತ್ತರಿಸಿದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, "ಬೆಳಗಾವಿ ಶಿರಸಂಗಿ ಕಾಳಿಕಾದೇವಿ ಸಿ ಗ್ರೇಡ್ ದೇವಾಲಯವಾಗಿದೆ. ತಿಂತಿಣ ಎ ಗ್ರೇಡ್ ದೇವಾಲಯ ಸಿದ್ದಪ್ಪಾಜಿ ಮತ್ತು ವೀರಬ್ರಹ್ಮೇಶ್ವರ ದೇವಾಲಯ ನಮಗೆ ಸಂಬಂಧಿಸಿಲ್ಲ. ಅವು ಖಾಸಗಿ ದೇವಾಲಯ. ಅದನ್ನು ಪಡೆಯಲು ಹೋದರೆ ದೊಡ್ಡ ವಿವಾದ ಆಗಲಿದೆ. ಈ ಎರಡೂ ದೇವಾಲಯ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿದಲ್ಲಿ ಅಭಿವೃದ್ಧಿ ಮಾಡಲು ಸಿದ್ದ" ಎಂದು ಹೇಳಿದರು.

"ಪ್ರಾಧಿಕಾರ ರಚನೆಗೆ ಬಹಳ ದೊಡ್ಡ ಪ್ರಮಾಣದ ಹಣ ಬೇಕು. ಲಕ್ಷಾಂತರ ಜನ ಹೋಗುವ ಕಡೆ ಪ್ರಾಧಿಕಾರ ಮಾಡಲಾಗುತ್ತದೆ. ಕೆಲವೆಡೆ 10 ಲಕ್ಷದಿಂದ ಕೋಟಿವರೆಗೂ ಜನ ಭೇಟಿ ನೀಡುವರು. ಇವುಗಳಿಗೆ ಆದ್ಯತೆ ನೀಡಬೇಕು. ಹೆಚ್ಚು ಜನ ಸೇರುವ ದೇವಾಲಯಗಳಲ್ಲಿ ಆದ್ಯತೆ ಮೇಲೆ ಸೌಲಭ್ಯ ಕಲ್ಪಿಸಲು ಮಾಸ್ಟರ್ ಪ್ಲಾನ್ ರೂಪಿಸಲು ಸೂಚಿಸಲಾಗುತ್ತದೆ. ನಮ್ಮ ಇಲಾಖೆಯ ಅಡಿ ಬರುವ ಎರಡು ದೇವಾಲಯ ಅಭಿವೃದ್ಧಿಗೆ ನಾವು ಸಿದ್ಧ. ಖಾಸಗಿಯಾಗಿರುವ ಎರಡು ದೇವಾಲಯದ ಆಡಳಿತ ಮಂಡಳಿ ಜೊತೆ ನೀವೇ ಮಾತನಾಡಿ ನಂತರ ನಮಗೆ ತಿಳಿಸಿ. ಎರಡು ದೇವಾಲಯಕ್ಕೆ ಬೇಕಾದ ಅನುಕೂಲ, ಸೌಲಭ್ಯ, ಅನುದಾನ ನೀಡಲು ಬದ್ದ" ಎಂದು ತಿಳಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, "ಎ ಗ್ರೇಡ್ ದೇವಾಲಯಕ್ಕೆ ಆದ್ಯತೆ ಎಂದಿದ್ದೀರಿ, ನಾಲ್ಕು ದೇವಾಲಯದಲ್ಲಿ ಒಂದು ಎ ಗ್ರೇಡ್ ಇದೆ. ಅದನ್ನು ಕೇಂದ್ರವಾಗಿಟ್ಟುಕೊಂಡು ಇತರ ದೇವಾಲಯ ಸೇರಿಸಿ ಪ್ರಾಧಿಕಾರ ಮಾಡಿ" ಎಂದು ಸಲಹೆ ನೀಡಿದರು. "ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ" ಎಂದು ಪ್ರತಿಪಕ್ಷ ಸಚೇತಕ ರವಿಕುಮಾರ್ ಮನವಿ ಮಾಡಿದರು. ಕಾಂಗ್ರೆಸ್ ಸದಸ್ಯ ಎಂ.ಆರ್.ಸೀತಾರಾಂ, "ಪ್ರವಾಸೋದ್ಯಮ ಇಲಾಖೆಯಡಿ ಪರಿಗಣಿಸಿ ದೇವಾಲಯ ಅಭಿವೃದ್ಧಿಪಡಿಸಿ" ಎಂದರು.

ಸದಸ್ಯರ ಸಲಹೆಗಳನ್ನು ಆಲಿಸಿ ಉತ್ತರಿಸಿದ ಸಚಿವ ರಾಮಲಿಂಗಾರೆಡ್ಡಿ, "ಪ್ರಾಧಿಕಾರ ರಚನೆಯ ಬೇಡಿಕೆಯನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗುತ್ತದೆ. ಕೇವಲ ದೇವಾಲಯ ಇದ್ದರೆ ಸಾಲದು, ಸ್ಥಳಾವಕಾಶದ ಅಗತ್ಯತೆ ಇದೆ. ಹಾಗಾಗಿ ಈ ಬಗ್ಗೆ ಮುಂದಿನ ವಾರ ಸ್ಟಷ್ಟ ಉತ್ತರ ನೀಡಲಾಗುತ್ತದೆ. ಇಲಾಖಾ ಆಯುಕ್ತರು, ಪ್ರಧಾನ ಕಾರ್ಯದರ್ಶಿ ಜೊತೆ ಮಾತನಾಡಿ ಮಾಹಿತಿ ನೀಡಲಾಗುತ್ತದೆ" ಎಂದು ಭರವಸೆ ನೀಡಿದರು.

ಇದನ್ನೂ ಓದಿ:ವಯಸ್ಸು ಆದರೆ ರಾಜಕೀಯ ನಿವೃತ್ತಿ ಪಡೆದು ಕುಟುಂಬದ ಜೊತೆ ಕಾಲ ಕಳೆಯಬೇಕು: ರಿಜ್ವಾನ್ ಅರ್ಷದ್

Last Updated : Feb 14, 2024, 10:18 PM IST

ABOUT THE AUTHOR

...view details