ಬೆಂಗಳೂರು: ಗೆಳೆಯನ ಜೊತೆಗಿರುವ ಫೋಟೋ ತೆಗೆದು ಪೋಷಕರಿಗೆ ತಿಳಿಸುವುದಾಗಿ ಬೆದರಿಸಿ ಯುವತಿಯಿಂದ 75 ಗ್ರಾಂ ಚಿನ್ನ ಸುಲಿಗೆ ಮಾಡಿದ್ದ ಡೆಲಿವರಿ ಬಾಯ್‌ವೊಬ್ಬನನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತೇಜಸ್ (19) ಬಂಧಿತ ಆರೋಪಿ.
ಸುಬ್ರಹ್ಮಣ್ಯಪುರದ ನಾಯ್ಡು ಬಡಾವಣೆಯ ನಿವಾಸಿಯಾಗಿರುವ ಆರೋಪಿ, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ವಿದ್ಯಾರ್ಥಿನಿಯ ಕುಟುಂಬ ಚಿಕ್ಕಲ್ಲಸಂದ್ರದಲ್ಲಿ ವಾಸವಾಗಿತ್ತು. ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಗೆ ಎರಡು ವರ್ಷಗಳ ಹಿಂದೆ ಆರೋಪಿ ಪರಿಚಯವಾಗಿದ್ದ. ಈ ಪರಿಚಯ ಕ್ರಮೇಣ ಸ್ನೇಹಕ್ಕೆ ತಿರುಗಿತ್ತು. ಗೆಳೆಯರಂತೆ ಇಬ್ಬರು ಓಡಾಡಿಕೊಂಡಿದ್ದರು. ಯುವತಿ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದ ಆರೋಪಿ, ಆಕೆ ಗೆಳೆಯನೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಸಂಗ್ರಹಿಸಿದ್ದಾನೆ. ಬಳಿಕ ಪ್ರೀತಿ ವಿಷಯ ಪೋಷಕರಿಗೆ ಹೇಳುವುದಾಗಿ ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದ್ದ.
ಮನೆಯವರಿಗೆ ವಿಷಯ ತಿಳಿದರೆ ಎಲ್ಲಿ ವ್ಯಾಸಂಗಕ್ಕೆ ಅಡ್ಡಿಯಾಗುತ್ತೋ ಎಂದು ಯುವತಿ ಹೆದರಿದ್ದಳು. ಜೂನ್‌ನಲ್ಲಿ ಯುವತಿಗೆ ಕರೆ ಮಾಡಿ ಪ್ರೀತಿಸುವ ವಿಷಯ ಪೋಷಕರಿಗೆ ಹೇಳಬಾರದೆಂದರೆ ಮನೆಯಲ್ಲಿರುವ ಚಿನ್ನಾಭರಣ ಹಾಗೂ ಹಣ ತಂದುಕೊಡುವಂತೆ ಒತ್ತಡ ಹೇರಿದ್ದ. ಆತನ ಆಣತಿಯಂತೆ ಮನೆಯಲ್ಲಿದ್ದ 75 ಗ್ರಾಂ ಚಿನ್ನಾಭರಣ ಹಾಗೂ 1.25 ಲಕ್ಷ ಹಣವನ್ನು ಹಂತ ಹಂತವಾಗಿ ಯುವತಿ ಕೊಟ್ಟಿದ್ದಳು. ಇತ್ತೀಚೆಗೆ ಯುವತಿ ತಾಯಿ ಸಂಬಂಧಿಕರೊಬ್ಬರ ಕಾರ್ಯಕ್ರಮಕ್ಕೆ ಹೋಗಲು ಕರ್ಬೋಡ್ನಲ್ಲಿದ್ದ ಚಿನ್ನಾಭರಣ ಇಲ್ಲದಿರುವುದನ್ನು ಕಂಡು ಮಗಳನ್ನು ಪ್ರಶ್ನಿಸಿದಾಗ ನಡೆದ ಘಟನೆಯನ್ನು ಆಕೆ ವಿವರಿಸಿದ್ದಾಳೆ.