ಕರ್ನಾಟಕ

karnataka

ETV Bharat / state

ಬೆಳ್ಳಂದೂರು ರಸ್ತೆ ನಿರ್ಮಾಣಕ್ಕಾಗಿ ಬಿಬಿಎಂಪಿಗೆ ಭೂಮಿ ನೀಡಲು ರಕ್ಷಣಾ ಇಲಾಖೆ ಒಪ್ಪಿಗೆ: ಡಿಸಿಎಂ - DDCM D K Shivakumar

ಬೆಂಗಳೂರಿನ ಎಎಸ್​ಸಿ ಸೆಂಟರ್ ಮತ್ತು ಕಾಲೇಜಿನ ಕಮಾಂಡೆಂಟ್ ಲೆಫ್ಟಿನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್ ಅವರ ಜತೆ ಡಿಸಿಎಂ ಡಿ.ಕೆ.ಶಿವಕುಮಾರ್​ ವಿಧಾನಸೌಧದಲ್ಲಿ ಶನಿವಾರ ಸಮಾಲೋಚನೆ ನಡೆಸಿದರು.

DCM D.K.Sivakumar
ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)

By ETV Bharat Karnataka Team

Published : Sep 28, 2024, 3:49 PM IST

Updated : Sep 28, 2024, 5:03 PM IST

ಬೆಂಗಳೂರು: "ಲೋವರ್ ಆಗರಂನಿಂದ ಸರ್ಜಾಪುರವರೆಗೂ ರಸ್ತೆ ಅಗಲೀಕರಣಕ್ಕೆ 12.34 ಎಕರೆ ಜಮೀನನ್ನು ರಕ್ಷಣಾ ಇಲಾಖೆ ಬಿಬಿಎಂಪಿಗೆ ನೀಡಿದೆ. ಇನ್ನೂ 10.77 ಎಕರೆ ನೀಡಲು ತಾತ್ವಿಕ ಒಪ್ಪಿಗೆ ನೀಡಿದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಬೆಂಗಳೂರಿನ ಎಎಸ್​ಸಿ ಸೆಂಟರ್ ಮತ್ತು ಕಾಲೇಜಿನ ಕಮಾಂಡೆಂಟ್ ಲೆಫ್ಟಿನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್ ಅವರ ಜತೆ ಡಿಸಿಎಂ ಅವರು ವಿಧಾನಸೌಧದಲ್ಲಿ ಶನಿವಾರ ಈ ಬಗ್ಗೆ ಸಮಾಲೋಚನೆ ನಡೆಸಿದರು. ನಂತರ ಮಾತನಾಡಿದ ಶಿವಕುಮಾರ್, "ಎಂ.ಜಿ.ರಸ್ತೆಯಿಂದ ಬೆಳ್ಳಂದೂರು ಭಾಗಕ್ಕೆ ತೆರಳಲು ಸುಮಾರು 1 ಗಂಟೆ ಸಮಯ ಬೇಕಾಗಿತ್ತು. ಈ ರಸ್ತೆ ನಿರ್ಮಾಣವಾದ ನಂತರ 5-8 ನಿಮಿಷಗಳ ಅಂತರದಲ್ಲಿ ಕ್ರಮಿಸಬಹುದು. ನಾನು ಹಾಗೂ ಮುಖ್ಯಮಂತ್ರಿಗಳು ಕೇಂದ್ರ ರಕ್ಷಣಾ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆವು. ನಮ್ಮ ಮನವಿಗೆ ಕೇಂದ್ರ ರಕ್ಷಣಾ ಸಚಿವಾಲಯ ಸ್ಪಂದಿಸಿ, ಒಟ್ಟು 22 ಎಕರೆ ಜಾಗವನ್ನು ರಸ್ತೆಗಾಗಿ ಬಿಟ್ಟುಕೊಡಲು ತೀರ್ಮಾನಿಸಿ ಸಹಕಾರ ನೀಡಿದೆ" ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)

"ಈ ರಸ್ತೆ ನಿರ್ಮಾಣದ ಮೊದಲ ಹಂತದ 3.50 ಕಿ.ಮೀ ಕಾಮಗಾರಿಗೆ 35 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿದೆ. ಟ್ರಿನಿಟಿ ಸರ್ಕಲ್, ಈಜಿಪುರ ಸೇರಿದಂತೆ ಒಂದಷ್ಟು ಕಡೆ ನೂತನ ರಸ್ತೆ ನಿರ್ಮಾಣಕ್ಕೆ ಇನ್ನು 10.77 ಎಕರೆ ಜಾಗವನ್ನು ರಕ್ಷಣಾ ಇಲಾಖೆ ನೀಡಬೇಕಿದೆ. ಇದರಿಂದ ಐಟಿ ಹಬ್​ಗೆ ತೆರಳಲು ಇದ್ದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ" ಎಂದರು.

"ಈಗಾಗಲೇ ರಕ್ಷಣಾ ಇಲಾಖೆಯವರು 12.34 ಎಕರೆ ಜಾಗವನ್ನು ಬಿಬಿಎಂಪಿಗೆ ಹಸ್ತಾಂತರಿಸಿದ್ದಾರೆ. ಇದಕ್ಕಾಗಿ ನಮಗೆ ಸಹಕಾರ ಕೊಟ್ಟ ಲೆಫ್ಟಿನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್ ಅವರು ಇದೇ 30 ರಂದು ನಿವೃತ್ತಿಯಾಗುತ್ತಿದ್ದು, ಅವರನ್ನು ನಮ್ಮ ಕಚೇರಿಗೆ ಆಹ್ವಾನಿಸಿ ಅಭಿನಂದಿಸಿದ್ದೇವೆ" ಎಂದು ತಿಳಿಸಿದರು.

ಬೆಂಗಳೂರಿನ ನಾಗರಿಕರಿಗೆ, ವಿಶೇಷವಾಗಿ ಐಟಿ ಹಬ್​ಗೆ ತೆರಳುವವರಿಗೆ ಹಾಗೂ ಪೂರ್ವ ಬೆಂಗಳೂರಿಗರಿಗೆ ಈ ಯೋಜನೆಯಿಂದ ಸಾಕಷ್ಟು ಅನುಕೂಲವಾಗಲಿದೆ. ನಾನು ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿ ತೆಗೆದುಕೊಂಡ ನಂತರ ಬೆಳ್ಳಂದೂರು ಹಾಗೂ ಸುತ್ತಮುತ್ತಲ ಐಟಿ ಹಬ್ ಭಾಗದ ಜನರ ಸಮಸ್ಯೆ ಆಲಿಸಿದ್ದೆ. ಅಲ್ಲಿನ ಸಂಚಾರ ದಟ್ಟಣೆ ವಿಚಾರವಾಗಿ ನಿತ್ಯ 8-10 ಇ-ಮೇಲ್​ಗಳು ನನಗೇ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ನಾನು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆವು. ಈ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದಂತಾಗಿದೆ" ಎಂದು ಹೇಳಿದರು.

ಹೆಬ್ಬಾಳದ ಬಳಿಯ ಹೋಪ್ ಡೈರಿ ಫಾರ್ಮ್ ಬಳಿ ಟನಲ್ ರಸ್ತೆಯ ಪ್ರವೇಶಕ್ಕೆ ಜಾಗ ಅಗತ್ಯವಿದೆ. ಇದಕ್ಕೆ ಎರಡು ಎಕರೆ ಜಾಗ ಬಿಟ್ಟುಕೊಡಬೇಕು ಎಂಬ ಪ್ರಸ್ತಾವನೆ ನೀಡಲಿದ್ದೇವೆ ಎಂದು ಹೇಳಿದರು.

ಗಾಂಧಿಭವನದಿಂದ ಗಾಂಧಿ ಪ್ರತಿಮೆವರೆಗೆ ನಡಿಗೆ:"ಮಹಾತ್ಮಗಾಂಧಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ರು. ಅವರು ಎಐಸಿಸಿ ನಾಯಕತ್ವ ವಹಿಸಿ 100 ವರ್ಷ ಆಗ್ತಿದೆ. ಅಕ್ಟೋಬರ್ 2ರಂದು ಗಾಂಧಿ ಜಯಂತಿ ಇದೆ. ಸರ್ಕಾರ ಈ ವರ್ಷ ಹಬ್ಬದ ರೀತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಅ. 2ರಂದು ಸ್ವಚ್ಛತಾ ಅಭಿಯಾನ ಪ್ರಾರಂಭಿಸಿದ್ದೇವೆ. ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಗಾಂಧಿ ನಡಿಗೆ ನಡೆಸುತ್ತೇವೆ. ಬೆಂಗಳೂರಲ್ಲಿ ಗಾಂಧಿಭವನದಿಂದ ಗಾಂಧಿ ಪ್ರತಿಮೆವರೆಗೆ ಒಂದು ಕಿ.ಮೀ ನಡಿಗೆಯನ್ನು ಮಾಡುತ್ತೇವೆ. ಜಿಲ್ಲಾ ಕೇಂದ್ರಗಳಲ್ಲಿ ಸಚಿವರು ಭಾಗವಹಿಸುತ್ತಾರೆ. ಬಿಳಿ ಬಟ್ಟೆ, ಟೋಪಿ ಹಾಕಿ ಹೆಜ್ಜೆ ಹಾಕಲಿದ್ದಾರೆ. ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತೇವೆ. ಬ್ಯಾಂಕ್ವೆಟ್ ಹಾಲ್​ನಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸುತ್ತೇವೆ. ಗಾಂಧಿ ಆದರ್ಶಗಳನ್ನು ಯುವಪೀಳಿಗೆಗೆ ತಿಳಿಸಬೇಕು. ಆ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ" ಎಂದರು.

ಇದನ್ನೂ ಓದಿ:ಕರ್ನಾಟಕದ ಅಭಿವೃದ್ಧಿಯೇ ಕ್ವಿನ್ ಸಿಟಿ ಯೋಜನೆಯ ಮೂಲ ಆಶಯ : ಡಿಸಿಎಂ ಡಿ ಕೆ ಶಿವಕುಮಾರ್ - DCM D K Shivakumar

Last Updated : Sep 28, 2024, 5:03 PM IST

ABOUT THE AUTHOR

...view details