ಬೆಂಗಳೂರು:ಭಾರತೀಯ ಭೌತಶಾಸ್ತ್ರಜ್ಞ ಸರ್.ಚಂದ್ರಶೇಖರ ವೆಂಕಟರಾಮನ್ 1928ರ ಫೆಬ್ರವರಿ 28ರಂದು ಮಹತ್ವದ ವಿಚಾರವನ್ನು ಘೋಷಿಸಿದರು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಭಾರತದಲ್ಲಿ ಪ್ರತೀ ವರ್ಷವೂ ಫೆಬ್ರವರಿ 28ರಂದು ಆಚರಿಸಲಾಗುತ್ತದೆ. ದೇಶಾದ್ಯಂತ ಈ ದಿನದಂದು ಒಂದು ನಿರ್ದಿಷ್ಟ ಥೀಮ್ ಅಡಿಯಲ್ಲಿ ವಿಜ್ಞಾನ ಕೇಂದ್ರಿತ ಸಮಾರಂಭಗಳನ್ನು ಆಯೋಜಿಸಲಾಗುತ್ತದೆ ಎಂದು ರಕ್ಷಣಾ ಮತ್ತು ಬಾಹ್ಯಾಕಾಶ ವಿಶ್ಲೇಷಕ ಗಿರೀಶ್ ಲಿಂಗಣ್ಣ ಹೇಳಿದರು.
ಈ ದಿನ ಜಾಗತಿಕ ವಿಜ್ಞಾನ ಸಮುದಾಯಕ್ಕೆ 'ರಾಮನ್ ಎಫೆಕ್ಟ್' ಅನ್ವೇಷಣೆಯ ಪರಿಚಯವಾಯಿತು. ಸಿ.ವಿ.ರಾಮನ್ ಅವರ ಮಹತ್ತರ ಅನ್ವೇಷಣೆಗೆ 1930ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಯಿತು. ಕೇಂದ್ರ ಸಂಸ್ಕೃತಿ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ವಿಜ್ಞಾನ ವಸ್ತು ಸಂಗ್ರಹಾಲಯಗಳ ರಾಷ್ಟ್ರೀಯ ಸಮಿತಿ 1986ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಕಮ್ಯುನಿಕೇಶನ್ಗೆ ಫೆಬ್ರವರಿ 28 ಅನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಘೋಷಿಸುವಂತೆ ಕರೆ ನೀಡಿತು.
ರಾಮನ್ ಪರಿಣಾಮದ ಸಂಶೋಧನೆಯನ್ನು ಗೌರವಿಸಲು ಮತ್ತು ಭಾರತೀಯರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುವ ಸಲುವಾಗಿ ಎನ್‌ಸಿಎಸ್‌ಟಿಸಿ ಈ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಈ ಸಲಹೆಗೆ ಸಮ್ಮತಿ ಸೂಚಿಸಿದ ಭಾರತ ಸರ್ಕಾರ, ಫೆಬ್ರವರಿ 28 ಅನ್ನು ಅಧಿಕೃತವಾಗಿ ವಿಜ್ಞಾನ ದಿನವನ್ನಾಗಿ ಘೋಷಿಸಿತು.
ವಿಜ್ಞಾನದ ಮಹತ್ವದೆಡೆಗೆ ಬೆಳಕು ಚೆಲ್ಲುವುದು ಮತ್ತು ದೈನಂದಿನ ಜೀವನದಲ್ಲಿ ವಿಜ್ಞಾನ ಹೇಗೆ ಬಳಕೆಯಾಗುತ್ತದೆ ಎನ್ನುವುದನ್ನು ತಿಳಿಸುವುದು, ಯುವ ಜನರನ್ನು ವಿಜ್ಞಾನ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದು ಮತ್ತು ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉದ್ಯೋಗವನ್ನು ಆರಿಸಿಕೊಳ್ಳುವಂತೆ ಉತ್ತೇಜಿಸುವುದು, ಯುವ ಜನತೆಯಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಮತ್ತು ಜನಸಾಮಾನ್ಯರಲ್ಲೂ ವೈಜ್ಞಾನಿಕ ಅನ್ವೇಷಣೆಗಳ ಕುರಿತು ಮನೋಭಾವನೆ ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನದ ಗುರಿ.
2024ರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು 'ವಿಕಸಿತ ಭಾರತಕ್ಕಾಗಿ ಸ್ವದೇಶಿ ತಂತ್ರಜ್ಞಾನಗಳು' ಎಂಬ ಥೀಮ್ ಅಡಿಯಲ್ಲಿ ಆಚರಿಸಲಾಗುತ್ತಿದೆ. ಇದು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದ ಗುರಿಗೆ ಪೂರಕವಾಗಿದೆ.