ಬೆಂಗಳೂರು : ನಟ ಸುದೀಪ್ ಅವರು ನಿರ್ಮಾಪಕ ಎಂ. ಎನ್ ಸುರೇಶ್ ವಿರುದ್ಧ ಹೂಡಿರುವ ಮಾನಹಾನಿ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಐಪಿಸಿ ಸೆಕ್ಷನ್ 499 ಮತ್ತು 500ರ ಅಡಿ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಪ್ರಕರಣ ರದ್ದುಪಡಿಸುವಂತೆ ಕೋರಿ ಸುರೇಶ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠ ವಜಾ ಮಾಡಿದೆ.
ದೂರು ಮತ್ತು ಸ್ವಯಂಪ್ರೇರಿತ ಹೇಳಿಕೆಯಲ್ಲಿ ಅರ್ಜಿದಾರರ ವಿರುದ್ಧ ನಿರ್ದಿಷ್ಟ ಆರೋಪಗಳಿದ್ದು, ದೂರುದಾರರ ಪ್ರಕಾರ ಅವು ಸುದೀಪ್ ಅವರಿಗೆ ಮಾನಹಾನಿ ಉಂಟು ಮಾಡಿದ್ದು, ಸಮಾಜದಲ್ಲಿ ಅವರ ವರ್ಚಸ್ಸಿಗೆ ಹಾನಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ಸಮನ್ಸ್ ಜಾರಿ ಮಾಡಿರುವುದರಲ್ಲಿ ಯಾವುದೇ ಕಾನೂನಿನ ದೋಷಗಳು ಕಂಡು ಬಂದಿಲ್ಲ ಎಂದು ಪೀಠ ತಿಳಿಸಿದೆ.
ಸುದೀಪ್ ಪರವಾಗಿ ವಾದಿಸಿದ ವಕೀಲರು, ಸುರೇಶ್ ಅವರು ಮಾಧ್ಯಮಗೋಷ್ಠಿ ನಡೆಸುವ ಮೂಲಕ ಅರ್ಜಿದಾರರಿಗೆ ಮಾನಹಾನಿ ಮಾಡಿದ್ದಾರೆ. ಸುರೇಶ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಸ್ನೇಹಿತರು ಮತ್ತು ಬಂಧು-ಬಾಂಧವರು ಕರೆ ಮಾಡಿ ಹೇಳಿಕೆಯ ಸತ್ಯಾಸತ್ಯತೆ ಬಗ್ಗೆ ವಿಚಾರಿಸಿದ್ದಾರೆ. ಇದು ಸಮಾಜದಲ್ಲಿ ಅರ್ಜಿದಾರರ ಘನತೆಗೆ ಚ್ಯುತಿ ಉಂಟು ಮಾಡಿದೆ. ಆರೋಪಿಗಳಾದ ಎನ್. ಎಂ ಸುರೇಶ್ ಮತ್ತು ಎನ್. ಎಂ ಕುಮಾರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟರ್ ಹಾಕಿದ್ದು, ಅರ್ಜಿದಾರರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದು ಆಕ್ಷೇಪಿಸಿದ್ದರು.