ಕರ್ನಾಟಕ

karnataka

ETV Bharat / state

ಮಾರ್ಚ್​ ಅಂತ್ಯದವರೆಗೆ 2ನೇ ಬೆಳೆಗೆ ನೀರು ಒದಗಿಸಲು ತೀರ್ಮಾನ: ಸಚಿವ ಶಿವರಾಜ್ ತಂಗಡಗಿ

ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾರ್ಚ್​ ಅಂತ್ಯದವರೆಗೆ ಕುಡಿಯುವ ನೀರು ಸೇರಿದಂತೆ ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರು ಒದಗಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಶಿವರಾಜ್​ ತಂಗಡಗಿ ಹೇಳಿದ್ದಾರೆ.

ಸಚಿವ ಶಿವರಾಜ್ ತಂಗಡಗಿ
ಸಚಿವ ಶಿವರಾಜ್ ತಂಗಡಗಿ (ETV Bharat)

By ETV Bharat Karnataka Team

Published : Nov 22, 2024, 10:40 AM IST

ಬೆಂಗಳೂರು:"ಕುಡಿಯುವ ನೀರು ಸೇರಿದಂತೆ ಹಿಂಗಾರು ಹಂಗಾಮಿನ ಬೆಳೆಗಳಿಗೆ ಮಾರ್ಚ್​ ಅಂತ್ಯದವರೆಗೆ ನೀರು ಒದಗಿಸಲು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ" ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಶಿವರಾಜ್​ ತಂಗಡಗಿ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಗುರುವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, "ಎರಡನೇ ಬೆಳೆಗೆ ಮಾರ್ಚ್ ತಿಂಗಳ ಅಂತ್ಯದವರೆಗೆ ನೀರು ಒದಗಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿ.1ರಿಂದ ಡಿಸೆಂಬರ್​ 15ರವರೆಗೆ 1,500, ಡಿ.16ರಿಂದ 31ರವರೆಗೆ 2,000 ಕ್ಯೂಸೆಕ್​ನಂತೆ ನೀರು ಹರಿಸಲಾಗುವುದು. ಜ.1ರಿಂದ 31 ವರೆಗೆ 3,800 ಕ್ಯೂಸೆಕ್​​​ನಂತೆ, ಫೆ.1ರಿಂದ 28ರವರಗೆ 3,800 ಕ್ಯೂಸೆಕ್​ ಹಾಗೂ ಮಾರ್ಚ್​ 1ರಿಂದ 31ರವರೆಗೆ 3,800 ಕ್ಯೂಸೆಕ್​​​ನಂತೆ ಮತ್ತು ಕುಡಿಯುವ ನೀರಿಗಾಗಿ ಏ.1ರಿಂದ ಹತ್ತರವರೆಗೆ 1,650 ಕ್ಯೂಸೆಕ್​​ನಂತೆ ನೀರು ಹರಿಸಲಾಗುವುದು" ಎಂದು ತಿಳಿಸಿದರು.

ಸಚಿವ ಶಿವರಾಜ್ ತಂಗಡಗಿ (ETV Bharat)

"ಎಡದಂಡೆ ವಿಜಯನಗರ ಕಾಲುವೆಗೆ ಏಪ್ರಿಲ್​ 11ರಿಂದ ಮೇ 10ರವರೆಗೆ 150 ಕ್ಯೂಸೆಕ್​​​ನಂತೆ ವಿತರಣಾ ಕಾಲುವೆ ಒಂದರಿಂದ 11ರವರೆಗೆ ಅಥವಾ ಈ ಕಾಲುವೆಗೆ ನೀರಿನ ಲಭ್ಯತೆ ಇರುವವರೆಗೆ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ" ಎಂದರು.

"ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1ರಿಂದ 10ರವರೆಗೆ ನೀರು ನಿಲುಗಡೆ, 11ರಿಂದ 31ರವರೆಗೆ 800 ಕ್ಯೂಸೆಕ್​ನಂತೆ, ಜ.1ರಿಂದ ಹತ್ತರವರೆಗೆ ನೀರು ನಿಲುಗಡೆ ಮತ್ತು 11ರಿಂದ 31ರವರೆಗೆ 800 ಕ್ಯೂಸೆಕ್​ನಂತೆ ನೀರನ್ನು ಹರಿಸಲಾಗುತ್ತದೆ. ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿಸೆಂಬರ್​​ 1ರಿಂದ 15ರವರೆಗೆ 400 ಕ್ಯೂಸೆಕ್​​ನಂತೆ, 16ರಿಂದ 31ರವರೆಗೆ 600 ಕ್ಯೂಸೆಕ್​ನಂತೆ, ಜ.1ರಿಂದ ಫೆ.28ರವರೆಗೆ 650 ಕ್ಯೂಸೆಕ್‌ನಂತೆ ಹಾಗೂ ಮಾರ್ಚ್ ಒಂದರಿಂದ 31ರವರೆಗೆ ಬಲದಂಡೆ ಕೆಳಮಟ್ಟದ ಕಾಲುವೆಗೆ ನೀರು ಬಿಡಲಾಗುವುದು" ಎಂದು ತಿಳಿಸಿದರು.

"ಉಳಿದಂತೆ, ರಾಯಬಸವಣ್ಣ ಕಾಲುವೆಗೆ ಡಿಸೆಂಬರ್​ 10ರಿಂದ ಜನವರಿ 10ರವರೆಗೆ ನೀರು ನಿಲುಗಡೆ ಮತ್ತು ಜನವರಿ 11ರಿಂದ ಮೇ 31ರವರೆಗೆ 250ನಂತೆ ನೀರು ಹರಿಸಲಾಗುವುದು. ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1ರಿಂದ ನೀರು ಹರಿಸಲಾಗುತ್ತದೆ. ಇದರಲ್ಲಿ ಕಾಲುವೆಯ ಲಭ್ಯತೆಯು ಇರುವ ತನಕ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ" ಎಂದು ಸಚಿವರು ವಿವರಿಸಿದರು.

"19ನೇ ಕ್ರೆಸ್ಟ್​​​ ಗೇಟ್​​ ಮುರಿದು ಹೋಗಿ ಬಳಿಕ ಎರಡನೇ ಬಾರಿ ಅಣೆಕಟ್ಟು ಭರ್ತಿಯಾಗಿರುವುದು ಇತಿಹಾಸ. ಈ ಹಿಂದೆ ಸಿದ್ದರಾಮಯ್ಯನವರು ಅಣೆಕಟ್ಟೆಗೆ ಭೇಟಿ ನೀಡಿದ ವೇಳೆ ಡ್ಯಾಮ್ ಮತ್ತೆ ತುಂಬಲಿದ್ದು ರೈತರಿಗೆ ಎರಡನೇ ಬೆಳೆಗೆ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಮಳೆರಾಯನ ಕೃಪೆಯಿಂದ ಇಂದು ಎರಡನೇ ಬೆಳೆಗೆ ನೀರು ಒದಗಿಸಲಾಗುತ್ತಿದೆ" ಎಂದರು.

ನೀರಾವರಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಸಲ್ಲ:"ನೀರಾವರಿ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಬಿಜೆಪಿ ಶಾಸಕರು ತುಂಗಭದ್ರಾ ಅಣೆಕಟ್ಟು ಯಾರ ನಿಯಂತ್ರಣದಲ್ಲಿದೆ ಎಂಬುದನ್ನು ತಿಳಿದು ಮಾತನಾಡಲಿ"ಎಂದು ತಂಗಡಗಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

"19ನೇ ಕ್ರಸ್ಟ್ ಗೇಟ್ ಮುರಿದು ಹೋದ ಸಂದರ್ಭದಲ್ಲಿ ವಿಪಕ್ಷದ ನಾಯಕರು ಇಲ್ಲ ಸಲ್ಲದ ಆರೋಪ ಮಾಡಿದ್ದರು. ಆದರೆ ಇಂದಿನ ಸರ್ಕಾರದ ಅವಧಿಯಲ್ಲಿ ಅಣೆಕಟ್ಟೆಯ ಗೇಟ್​ಗಳನ್ನ ಬದಲಾಯಿಸಬೇಕು ಎಂದು ಪರಿಣಿತರು ವರದಿ ನೀಡಿದರು. ಆದರೆ ಆ ಕೆಲಸವನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಿಲ್ಲ. ಈಗ ನಮ್ಮ ಮೇಲೆ ಆರೋಪ ಮಾಡುತ್ತಾರೆ" ಎಂದು ಟೀಕಿಸಿದರು.

ಗೇಟ್​ ಮರು ಜೋಡಣೆಗೆ ಒಪ್ಪದ ಬೋರ್ಡ್:"19ನೇ ಟ್ರಸ್ಟ್​​ ಗೇಟ್​ ಮುರಿದು ಹೋದಾಗ ಬದಲಿ ಗೇಟ್​ ಅಳವಡಿಸಲು ಟಿಬಿ ಬೋರ್ಡ್​ನವರು ಒಪ್ಪಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವರು ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೂಚನೆಯಂತೆ ನಾವೇ ಖುದ್ದು ಜಿಂದಾಲ್ ಕಂಪನಿ ಅವರನ್ನು ಸಂಪರ್ಕಿಸಿ ಗೇಟ್​​ನ ಡಿಸೈನ್ ಸಿದ್ಧಪಡಿಸುವಂತೆ ಕೇಳಿಕೊಂಡೆವು. ಆ ಬಳಿಕವೂ ಬೋರ್ಡ್​ನವರು ಒಪ್ಪದಿದ್ದಾಗ ಅವರನ್ನು ಮನವೊಲಿಸಿ ಹರಿದು ಹೋಗುತ್ತಿದ್ದ 35 ಟಿಎಂಸಿ ನೀರನ್ನು ಗೇಟ್ ಅಳವಡಿಸುವ ಮೂಲಕ ತಡೆಯಲಾಯಿತು" ಎಂದು ಹೇಳಿದರು.

"ಡ್ಯಾಮ್​ನ​ ಸಂಪೂರ್ಣ ನಿರ್ವಹಣೆ ಬೋರ್ಡ್​ನವರಾಗಿದ್ದ ಕಾರಣ ಗೇಟ್ ಅಳವಡಿಕೆಯ ವೆಚ್ಚವನ್ನು ಅವರೇ ಭರಿಸಬೇಕಿತ್ತು. ಆದರೆ ರಾಜ್ಯ ಸರ್ಕಾರವೇ ಹಣವನ್ನು ತಕ್ಷಣವೇ ಬಿಡುಗಡೆ ಮಾಡಿದೆ. ಇದೆಲ್ಲವನ್ನೂ ಬದಿಗೊತ್ತಿ ಬಿಜೆಪಿಯವರು ಈ ಬಗ್ಗೆ ಜನರಿಗೆ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಿದ್ದರು. ಕೆಲವರಂತೂ ಗೇಟ್ ಕಿತ್ತುಹೋದ ವೇಳೆ ಅಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕೆಂದು ಪರಿಜ್ಞಾನವೇ ಇಲ್ಲದವರಂತೆ ವರ್ತಿಸಿದ್ದರು. ಆದರೆ ಇಂದು ಸಲಹಾ ಸಮಿತಿ ಸಭೆ ವೇಳೆ ಬಿಜೆಪಿ ಶಾಸಕರಾದ ಶಿವರಾಜ್ ಪಾಟೀಲ್ ಅವರು ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ್ದೇನೆ" ಎಂದರು.

ಇದನ್ನೂ ಓದಿ:ಜನರಿಗೆ ಹೊರೆಯಾಗದಂತೆ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಪರಿಷ್ಕರಣೆಗೆ ಚಿಂತನೆ: ಸಚಿವ ದಿನೇಶ್ ಗುಂಡೂರಾವ್

ABOUT THE AUTHOR

...view details