ಮಂಗಳೂರು:ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಹತ್ಯೆಗೈದು ಬಳಿಕ ಪತ್ನಿಯ ಕೊಲೆಗೆ ಯತ್ನಿಸಿದ್ದ ಅಪರಾಧಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ. ಮುಲ್ಕಿಯ ತತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡು ನಿವಾಸಿ ಹಿತೇಶ್ ಶೆಟ್ಟಿಗಾರ್ ಅಲಿಯಾಸ್ ಹಿತೇಶ್ ಕುಮಾರ್ (43) ಮರಣದಂಡನೆಗೊಳಗಾದ ಅಪರಾಧಿ.
ತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡಿನಲ್ಲಿ 2022 ಜೂನ್ 23ರಂದು ಸಂಜೆ ಆರೋಪಿಯು ತನ್ನ 14, 11 ಮತ್ತು 4 ವರ್ಷದ ಮಕ್ಕಳನ್ನು ಮನೆಯ ಬಳಿ ಇರುವ ಬಾವಿಗೆ ತಳ್ಳಿ ಕೊಲೆ ಮಾಡಿದ್ದನು. ಕೆಲಸದಿಂದ ಮನೆಗೆ ಬಂದು ಮಕ್ಕಳನ್ನು ಹುಡುಕುತ್ತಿದ್ದ ಹೆಂಡತಿ ಲಕ್ಷ್ಮೀಯವರನ್ನು ಕೂಡಾ ಅದೇ ಬಾವಿಗೆ ತಳ್ಳಿ ಕೊಲ್ಲಲು ಯತ್ನಿಸಿದ್ದ.
ಆರೋಪಿಯು ತನ್ನ ಉದಾಸೀನ ಪ್ರವೃತ್ತಿಯಿಂದ ಯಾವುದೇ ಕೆಲಸಕ್ಕೆ ಹೋಗದೇ ಹೆಂಡತಿ, ಮಕ್ಕಳನ್ನು ಸಾಕಲು ಕಷ್ಟವಾಗುತ್ತದೆ ಎಂದು ಈ ಕೃತ್ಯ ಎಸಗಿದ್ದನು. ಹೆಂಡತಿ ಮಕ್ಕಳನ್ನು ಸಾಯಿಸಿದ್ದಲ್ಲಿ ತಾನು ಹೇಗೆ ಬೇಕಾದರೂ ಜೀವಿಸಬಹುದೆಂದು ಯೋಚಿಸಿ ಈ ಕೃತ್ಯ ಎಸಗಿದ್ದ.
ಬಾವಿಗೆ ಬಿದ್ದ ಮಕ್ಕಳು ಬಾವಿಯೊಳಗಿನ ಹಗ್ಗದಲ್ಲಿ ನೇತಾಡುವುದನ್ನು ನೋಡಿದ ಆರೋಪಿ ತಂದೆ ಕತ್ತಿ ತಂದು ಹಗ್ಗವನ್ನು ತುಂಡರಿಸಿದ್ದನು. ಹೆಂಡತಿಯನ್ನು ಬಾವಿಗೆ ದೂಡುವ ವೇಳೆ ಪತ್ನಿ ಈತನ ಕೈಯನ್ನು ಗಟ್ಟಿ ಹಿಡಿದ ಪರಿಣಾಮ ಈತನೂ ಬಾವಿಗೆ ಬಿದ್ದಿದ್ದ. ಬಳಿಕ ನೆರೆಹೊರೆಯವರು ಬಂದು ಇಬ್ಬರನ್ನು ಬಾವಿಯಿಂದ ಮೇಲಕ್ಕೆತ್ತಿದ್ದರು.