ಕಾರವಾರ: ಅನಾರೋಗ್ಯದಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಜನರು ಕಟ್ಟಿಗೆಯಲ್ಲಿ ಕಟ್ಟಿಕೊಂಡು ಊರಿಗೆ ಸಾಗಿಸಿದ ಘಟನೆ ಕಾರವಾರ ನಗರಸಭೆ ವ್ಯಾಪ್ತಿಯ ಗುಡ್ಡಳ್ಳಿಯಲ್ಲಿ ಭಾನುವಾರ ನಡೆಯಿತು.
ವಾರ್ಡ್ ನಂ 31ರ ಗುಡ್ಡೆಹಳ್ಳಿಯ ರಾಮಾ ಮುನ್ನಾಗೌಡ(75) ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದರು. ಭಾನುವಾರ ಮುಂಜಾನೆ ಕುಟುಂಬಸ್ಥರು ಆಂಬ್ಯುಲೆನ್ಸ್ ಮೂಲಕ ಗುಡ್ಡದವರೆಗೆ ಮೃತದೇಹವನ್ನು ಕೊಂಡೊಯ್ದರು. ಆದರೆ ಅಲ್ಲಿಂದ ಗುಡ್ಡೆಹಳ್ಳಿಗೆ ರಸ್ತೆ ಇಲ್ಲ. ಹೀಗಾಗಿ, ಗ್ರಾಮಸ್ಥರೆಲ್ಲರೂ ಸೇರಿಕೊಂಡು ಮೃತದೇಹವನ್ನು ಕಟ್ಟಿಗೆಗೆ ಕಟ್ಟಿ ನಾಲ್ಕು ಕಿ.ಮೀ ಹೆಗಲ ಮೇಲೆ ಹೊತ್ತುಕೊಂಡೇ ರವಾನಿಸಿದ್ದಾರೆ.
ರಸ್ತೆ ಇಲ್ಲದೆ ಜನರ ಪರದಾಟ:"ಅರಣ್ಯ ಪ್ರದೇಶವನ್ನೊಳಗೊಂಡು ಗುಡ್ಡದ ತುದಿಯಲ್ಲಿರುವ ಗುಡ್ಡೆಹಳ್ಳಿಗೆ ಪ್ರತಿನಿತ್ಯ ಚಾರಣಿಗರು ಆಗಮಿಸುತ್ತಾರೆ. ಸುಮಾರು 350ಕ್ಕೂ ಹೆಚ್ಚು ಜನರಿರುವ ಈ ಊರಿಗೆ ತೆರಳಲು ಸಮರ್ಪಕ ರಸ್ತೆ ಇಲ್ಲ. ನಗರದಿಂದ ಅರ್ಧ ಕಿ.ಮೀ ದೂರದಿಂದಲೇ ಕಾಲ್ನಡಿಗೆಯಲ್ಲಿ ಪ್ರತಿನಿತ್ಯ ಗ್ರಾಮಸ್ಥರು ತೆರಳಬೇಕು. ಗ್ರಾಮದಲ್ಲಿ ಯಾರೇ ಅನಾರೋಗ್ಯಕ್ಕೊಳಗಾದರೂ ಜೋಳಿಗೆ ಕಟ್ಟಿಕೊಂಡೇ ಆಸ್ಪತ್ರೆಗೆ ಸಾಗಿಸಬೇಕು. ಮಳೆಗಾಲದಲ್ಲಿ ಗ್ರಾಮಸ್ಥರ ವ್ಯಥೆ ಹೇಳತೀರದು" ಎಂದು ಗ್ರಾಮಸ್ಥರಾದ ಮಂಜುನಾಥ ಗೌಡ ಅಳಲು ತೋಡಿಕೊಂಡರು.
ಮೃತದೇಹವನ್ನು ಕಟ್ಟಿಗೆಗೆ ಕಟ್ಟಿ ಹೊತ್ತು ಸಾಗಿಸಿದ ಗ್ರಾಮಸ್ಥರು (ETV Bharat) ಮೃತ ರಾಮಾ ಮುನ್ನಾಗೌಡ ಅವರ ಮಗ ರಮೇಶ ಮಾತನಾಡಿ, "ನಗರ ವ್ಯಾಪ್ತಿಯಲ್ಲಿದ್ದರೂ ಸರಿಯಾದ ರಸ್ತೆ ಇಲ್ಲ. ಗ್ರಾಮದಲ್ಲಿ ಯಾರೇ ಅನಾರೋಗ್ಯಕ್ಕೆ ತುತ್ತಾದರೂ ಜೋಳಿಗೆ ಕಟ್ಟಿಕೊಂಡೇ ಆಸ್ಪತ್ರೆಗೆ ತೆರಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಆಸ್ಪತ್ರೆಗೆ ಸಾಗಿಸುವ ಮುನ್ನವೇ ರೋಗಿಗಳು ಮೃತಪಟ್ಟ ಉದಾಹರಣೆಗಳಿವೆ. ಆದರೂ ರಸ್ತೆ ಸೌಲಭ್ಯ ಕಲ್ಪಿಸಿಲ್ಲ" ಎಂದು ದೂರಿದರು.
ನಗರಸಭಾ ಸದಸ್ಯ ರವಿರಾಜ್ ಅಂಕೋಲೇಕರ್ ಪ್ರತಿಕ್ರಿಯಿಸಿ, "ಮಾಜಿ ಶಾಸಕಿ ರೂಪಾಲಿ ನಾಯ್ಕ ಅವಧಿಯಲ್ಲಿ 1.5 ಕಿ.ಮೀ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಇನ್ನೂ ರಸ್ತೆ ನಿರ್ಮಾಣ ಆಗಿಲ್ಲ. ಈ ಬಗ್ಗೆ ಹಿಂದಿನ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸಿಲ್ಲ. ಲೋಕೋಪಯೋಗಿ ಇಲಾಖೆಯಲ್ಲಿ ವಿಚಾರಿಸಿದಾಗ ಗುತ್ತಿಗೆದಾರರು ಮಳೆಗಾಲ ಮುಗಿದ ಬಳಿಕ ಕಾಮಗಾರಿ ಪ್ರಾರಂಭಿಸುತ್ತಾರೆ ಎಂದು ಹೇಳುತ್ತಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಅನುದಾನಕ್ಕಾಗಿ ಮನವಿ ಮಾಡಲಾಗಿದೆ. ಸದ್ಯ ಮಂಜೂರಾದ ಕಾಮಗಾರಿಯನ್ನು ಗುತ್ತಿಗೆದಾರರು ಪ್ರಾರಂಭಿಸದೇ ಇದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.
ಇದನ್ನೂ ಓದಿ:ತುಮಕೂರು: ಆಂಬ್ಯುಲೆನ್ಸ್ ಸಿಗದೇ ತಂದೆ ಮೃತದೇಹ ಬೈಕ್‌ನಲ್ಲೇ ಸಾಗಿಸಿದ ಪುತ್ರರು! - Two sons shifted father dead body