ವಿಜಯಪುರ: ನಗರದಲ್ಲಿ ನಿನ್ನೆ ಕಾಣೆಯಾಗಿದ್ದ ಮೂವರೂ ಮಕ್ಕಳು ಚರಂಡಿ ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 11 ವರ್ಷದ ಅನುಷ್ಕಾ, 9 ವರ್ಷದ ವಿಜಯ್ ಹಾಗೂ 6 ವರ್ಷದ ಮಿಹಿರ್ ಎನ್ನುವ ಮಕ್ಕಳು ಮೃತ ದುರ್ದೈವಿಗಳಾಗಿದ್ದಾರೆ.
ನಿನ್ನೆ ಬೆಳಗ್ಗೆ ಗಚ್ಚಿನಕಟ್ಟಿ ಕಾಲೋನಿಯಲ್ಲಿ ಮಿಹಿರ್, ಅನುಷ್ಕಾ ಹಾಗೂ ವಿಜಯ್ ಆಟವಾಡಲೆಂದು ಮನೆಯಿಂದ ತೆರಳಿ ನಾಪತ್ತೆಯಾಗಿದ್ದರು. ಬಳಿಕ ಮನೆಯವರು ಸೇರಿದಂತೆ ನೆರೆಹೊರೆಯವರು ಮತ್ತು ಸ್ಥಳೀಯರು ಹುಡಕಾಟ ನಡೆಸಿದ್ದರು. ಹತ್ತಿರದಲ್ಲಿಯೇ ಶಾಂತಿನಿಕೇತನ ಶಾಲೆ, ಜ್ಯೋತಿ ಪೈಪ್‌ಫ್ಯಾಕ್ಟರಿ ಸೇರಿದಂತೆ ಮುಂತಾದ ಪ್ರದೇಶಗಳಲ್ಲಿನ ಸಿಸಿಟಿವಿಯಲ್ಲಿ ಬೆಳಗ್ಗೆ 11 ಗಂಟೆವರೆಗೆ ಮಕ್ಕಳ ಚಲನವಲನ ದಾಖಲಾಗಿತ್ತು ನಂತರದಲ್ಲಿ ಈ ಮಕ್ಕಳ ಸುಳಿವು ಲಭ್ಯವಾಗಿರಲಿಲ್ಲ. ಬಳಿಕ ಪೋಷಕರು ಎಪಿಎಂಸಿ ಪೊಲೀಸ್ ಠಾಣೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ತನಿಖೆ ಆರಂಭಿಸಿದ ಪೊಲೀಸರು ಮನೆಯ ಹತ್ತಿರದಲ್ಲಿನ ಶಾಂತಿನಿಕೇತನ ಶಾಲೆ ಎದುರಿನ ಚರಂಡಿ ನೀರು ಶುದ್ಧೀಕರಣ ಘಟಕವಾದ ಎಸ್.ಟಿ.ಪಿ ಪ್ಲ್ಯಾಂಟ್ಗೆ ತೆರಳಿ ವಿಚಾರಿಸಿದ್ದರು. ಆದರೆ, ಇದರ ನಿರ್ವಹಣೆಗೆ ಎಂದು ಇದ್ದವರು ಇಲ್ಲಿ ಮಕ್ಕಳು ಬಂದಿಲ್ಲ ಎಂದು ಉತ್ತರಿಸಿದ್ದರು. ಇಂದು ಮಧ್ಯಾಹ್ನವಾದರೂ ಮಕ್ಕಳು ಪತ್ತೆಯಾಗದ ಹಿನ್ನೆಲೆಯಲ್ಲಿ ಚರಂಡಿ ನೀರು ಶುದ್ಧೀಕರಣ ಪಕ್ಕದಲ್ಲಿನ ಸಿಮೆಂಟ್ ಇಟ್ಟಿಗೆ ತಯಾರಿಕಾ ಘಟಕದ ಮಾಲೀಕರು ಅನುಮಾನಗೊಂಡು ಎಸ್.ಟಿ.ಪಿ ಪ್ಲ್ಯಾಂಟ್ ಒಳ ರಸ್ತೆಗಳಲ್ಲಿ ಬಂದು ಹುಡುಕಾಟ ನಡೆಸಿದ ವೇಳೆ ಮಕ್ಕಳು ಶವವಾಗಿ ತೇಲುತ್ತಿದ್ದದ್ದು ಕಂಡು ಬಂದಿದೆ.