ಕರ್ನಾಟಕ

karnataka

ETV Bharat / state

ಮೂಲಸೌಕರ್ಯ ಕಲ್ಪಿಸದ ಖಾಸಗಿ ಲೇಔಟ್​ಗಳ ಡೆವಲಪರ್​ಗಳಿಗೆ ನೋಟಿಸ್ ನೀಡಲು ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚನೆ - DCM DK Sivakumar - DCM DK SIVAKUMAR

ಮೂಲಸೌಕರ್ಯ ಕಲ್ಪಿಸದ ಖಾಸಗಿ ಲೇಔಟ್​ಗಳ ಡೆವಲಪರ್​ಗಳಿಗೆ ನೋಟಿಸ್ ನೀಡಲು ಡಿಸಿಎಂ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

private layouts  Bengaluru  DK Sivakumar
ಮೂಲಸೌಕರ್ಯ ಕಲ್ಪಿಸದ ಖಾಸಗಿ ಲೇಔಟ್​ಗಳ ಡೆವಲಪರ್​ಗಳಿಗೆ ನೋಟಿಸ್ ನೀಡಲು ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚನೆ (ETV Bharat)

By ETV Bharat Karnataka Team

Published : May 21, 2024, 8:56 AM IST

ಬೆಂಗಳೂರು:ಮೂಲಸೌಕರ್ಯ ವ್ಯವಸ್ಥೆಗಳನ್ನು ಸರಿಯಾಗಿ ನೀಡದ ಖಾಸಗಿ ಲೇಔಟ್​ಗಳ ಡೆವಲಪರ್​ಗಳಿಗೆ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ರಾಚೇನಹಳ್ಳಿ ಕೆರೆಯ ಬಳಿ ರಾಜಕಾಲುವೆ ಪರಿಶೀಲಿಸಿದ ನಂತರ ಮಾತನಾಡಿದ ಅವರು, ''ಖಾಸಗಿ ಲೇಔಟ್​ಗಳಲ್ಲಿ ನೀರು ಹರಿಯಲು ಸೂಕ್ತ ವ್ಯವಸ್ಥೆ ರೂಪಿಸದ ಕಾರಣ ಮನೆಗಳಿಗೆ ನೀರು ನುಗ್ಗಿದೆ. ಮಳೆ ನೀರು ಹಾಗೂ ಕೊಳಚೆ ನೀರನ್ನು ಒಟ್ಟಿಗೆ ಬಿಟ್ಟಿರುವ ಕಾರಣಕ್ಕೆ ಸಮಸ್ಯೆಗಳು ಉಂಟಾಗುತ್ತಿವೆ. ಲೇಔಟ್​ಗಳನ್ನು ರೂಪಿಸುವಾಗ ಸೂಕ್ತ ವ್ಯವಸ್ಥೆ ಮಾಡದಿರುವುದು ಡೆವಲಪರ್​ಗಳ ತಪ್ಪು. ಜನರಿಂದ ಹಣ ಪಡೆದು ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡದೇ ಇರುವ ಕಾರಣಕ್ಕೆ ಜನ ತೊಂದರೆ ಅನುಭವಿಸುತ್ತಿದ್ದಾರೆ. ಡೆವಲಪರ್​ಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಲ್ಲ. ಅವರಿಂದ ಆಗಿರುವ ತೊಂದರೆ ನಿವಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು'' ಎಂದರು.

ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಸ್ಥಳಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. (ETV Bharat)

ಬೆಂಗಳೂರಿನ ಜನತೆಗೆ ತೊಂದರೆ ಆಗಬಾರದು:''ಪರಿಹಾರ ನೀಡಬೇಕು ಎಂಬ ಉದ್ದೇಶದಿಂದಲೇ ತೊಂದರೆಯಾದ ಜಾಗಗಳಿಗೆ ಭೇಟಿ ನೀಡಿದ್ದೇನೆ. ಕೇವಲ ಕಿವಿಯಲ್ಲಿ ಕೇಳಬಾರದು, ಕಣ್ಣಲ್ಲಿ ನೋಡಬೇಕು ಎಂದು ಅಧಿಕಾರಿಗಳ ಜೊತೆ ಬಂದಿದ್ದೇನೆ. ಪ್ರತಿವರ್ಷ ಎಲ್ಲೆಲ್ಲಿ ಮಳೆಯಿಂದ ತೊಂದರೆ ಆಗುತ್ತದೆಯೋ ಆ ಪ್ರದೇಶಗಳನ್ನು ಗುರುತಿಸಿ ಹಂತ, ಹಂತವಾಗಿ ಅಭಿವೃದ್ಧಿ ಮಾಡಲಾಗುವುದು'' ಎಂದು ತಿಳಿಸಿದರು.

ರಾಜಕಾಲುವೆ ಒತ್ತುವರಿ ವಿಚಾರವಾಗಿ ಪ್ರತಿಕ್ರಿಯಿಸಿ, ''ಎಲ್ಲೆಲ್ಲಿ ಖಾಸಗಿ ಲೇಔಟ್​ನವರು ಒತ್ತುವರಿ ಮಾಡಿದ್ದಾರೋ ಅಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಎಸ್​ಟಿಪಿ ಅಳವಡಿಕೆ ಮಾಡದವರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು'' ಎಂದು ತಿಳಿಸಿದರು.

ಸ್ಕೈ ಡೆಕ್ ನಿರ್ಮಾಣದ ಬಗ್ಗೆ ಮಾತನಾಡಿ, ''ಬೆಂಗಳೂರಿಗೆ ಒಂದು ಒಳ್ಳೆಯ ಪ್ರವಾಸಿ ಕೇಂದ್ರ ಬೇಕು ಎನ್ನುವ ಆಲೋಚನೆ ನಮ್ಮಲಿದೆ. ಅಧಿಕಾರಿಗಳು ಯೋಜನಾ ವರದಿ ನೀಡಿದ್ದಾರೆ. ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಂಡಿದ್ದು, ಪಾರ್ಕಿಂಗ್, ಜಾಗದ ಲಭ್ಯತೆ ಮತ್ತಿತರ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಲಾಗುವುದು'' ಎಂದರು.

ಮೂಲಸೌಕರ್ಯ ಕಲ್ಪಿಸದ ಖಾಸಗಿ ಲೇಔಟ್​ಗಳ ಡೆವಲಪರ್​ಗಳಿಗೆ ನೋಟಿಸ್ ನೀಡಲು ಡಿಸಿಎಂ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. (ETV Bharat)

ಡಿಸಿಎಂ ನಗರ ಪ್ರದಕ್ಷಿಣೆ:ಮಳೆಗಾಲ ಆರಂಭದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಸ್ಥಳಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಯಲಹಂಕದ ರಮಣಶ್ರೀ ಗಾರ್ಡೇನಿಯಾ ಲೇಔಟ್​ಗೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳ ಜೊತೆ ಚರ್ಚೆ ನಡೆಸಿದರು.

ಕಳೆದ ಎರಡು ವರ್ಷಗಳ ಹಿಂದೆ ಈ ಭಾಗದಲ್ಲಿ ಕಾಲುವೆ ಇರಲಿಲ್ಲ. ಪಾಲಿಕೆ ವತಿಯಿಂದ ಕಾಲುವೆ ನಿರ್ಮಿಸಿ ಅದನ್ನು ಮುಂದೆ ತೆಗೆದುಕೊಂಡು ಹೋಗದೆ ಇಲ್ಲಿಗೆ ನಿಲ್ಲಿಸಿದ್ದಾರೆ. ಇದರಿಂದಾಗಿ ಸಣ್ಣ ಮಳೆಗೆ ಮನೆಗಳ ಒಳಗೆ ನೀರು ನುಗ್ಗಿದೆ. ಈ ಕಾಲುವೆ ಮುಂದೆ ವಿಸ್ತರಣೆ. ಮಳೆ ನೀರು ಕಾಲುವೆ ಹಾಗು ಚರಂಡಿಯನ್ನು ಪ್ರತ್ಯೇಕವಾಗಿ ಮಾಡಬೇಕು. ಇಲ್ಲಿರುವ ಕೆರೆಗೆ ಕೊಳಚೆ ನೀರು ಬಿಡಬಾರದು ಎಂದು ಸ್ಥಳೀಯ ನಿವಾಸಿಗಳು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​, ''ಮುಂದೆ ಅರಣ್ಯ ಇಲಾಖೆ ಜಾಗ ಇರುವ ಕಾರಣ, ಅವರು ಕಾಲುವೆಯನ್ನು ಮುಂದೆ ವಿಸ್ತರಿಸಲು ಅನುಮತಿ ನೀಡಿರಲಿಲ್ಲ. ಇಂದು ಬೆಳಗ್ಗೆ ಪಾಲಿಕೆ ಅಧಿಕಾರಿಗಳು ಅರಣ್ಯ ಅಧಿಕಾರಿಗಳ ಜೊತೆ ಸಭೆ ಮಾಡಿದ್ದು, ಕಾಲುವೆ ಮುಂದಕ್ಕೆ ತೆಗೆದುಕೊಂಡು ಹೋಗಲು ಅನುಮತಿ ಪಡೆಯಲಾಗಿದೆ. ಮಳೆ ನೀರು ಹಾಗೂ ಚರಂಡಿ ನೀರು ಹರಿಯಲು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗುವುದು. ಆದಷ್ಟು ಬೇಗ ಈ ಕಾಮಗಾರಿ ಪೂರ್ಣಗೊಳಿಸಲಾಗುವುದು'' ಎಂದು ಭರವಸೆ ನೀಡಿದರು.

''ಇನ್ನು ಬೆಂಗಳೂರಿನ ಯಾವುದೇ ಕೆರೆಗಳಿಗೆ ಕೊಳಚೆ ನೀರು ಹರಿಸುವುದಿಲ್ಲ. ಸಂಸ್ಕರಿಸಿದ ನೀರನ್ನು ಮಾತ್ರ ಬಿಡಲಾಗುವುದು. ಈ ಬಾರಿ ಏಳು ಸಾವಿರ ಕೊಳವೆ ಬಾವಿ ಬತ್ತಿದ ಪರಿಣಾಮ ನೀರಿನ ಸಮಸ್ಯೆ ಎದುರಾಗಿದ್ದು, ಮುಂದೆ ಇಂತಹ ಸಮಸ್ಯೆ ಬಾರದಂತೆ ಎಚ್ಚರ ವಹಿಸಲಾಗುವುದು'' ಎಂದು ತಿಳಿಸಿದರು.

ನಂತರ ಉಪಮುಖ್ಯಮಂತ್ರಿಗಳು ರಾಚೇನಹಳ್ಳಿ ಕೆರೆ ಪಕ್ಕದಲ್ಲಿರುವ ಜವಾಹರ್ ಲಾಲ್ ನೆಹರು ಆಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ (JNCSAR)ದಲ್ಲಿ ಹಾದುಹೋಗಿರುವ ರಾಜಕಾಲುವೆ ಪರಿಶೀಲನೆ ನಡೆಸಿದರು. ಈ ರಾಜಕಾಲುವೆ ತಡೆಗೋಡೆ ಎತ್ತರ ನಿರ್ಮಾಣ ಕಾಮಗಾರಿ ಪರಿಶೀಲನೆ ನಡೆಸಿದರು. "ಮುಂದಿನ ಒಂದು ತಿಂಗಳ ಒಳಗಾಗಿ ಈ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅಷ್ಟರ ಒಳಗಾಗಿ ಮತ್ತೆ ಮಳೆ ಬಂದರೆ ಪ್ರವಾಹ ಪರಿಸ್ಥಿತಿ ತಡೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ನಂತರ ಉಪಮುಖ್ಯಮಂತ್ರಿಗಳು ಗೆದ್ದಲಹಳ್ಳಿ ಬಳಿ ರಾಜಕಾಲುವೆ ಕಾಮಗಾರಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಸ್ಥಳೀಯ ನಿವಾಸಿಗಳು, "ಪ್ರತಿ ಬಾರಿ ಮಳೆ ಬಂದರೂ ಇಲ್ಲಿ ಮನೆಯೊಳಗೆ ನೀರು ನುಗ್ಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಿ ಎಂದು ಮನವಿ ಮಾಡಿದರು.

ಇದನ್ನೂ ಓದಿ:ಸರ್ಕಾರಕ್ಕೆ ವರ್ಷದ ಹರುಷ: ಸಿಎಂ - ಡಿಸಿಎಂ ಪರಸ್ಪರ ಶುಭಾಶಯ ವಿನಿಮಯ - One Year for Congress Govt

ABOUT THE AUTHOR

...view details