ಕರ್ನಾಟಕ

karnataka

ETV Bharat / state

ಜನ ವಿರೋಧಿಸಿದರೂ ನೀರಿನ ದರ ಏರಿಕೆ ಅನಿವಾರ್ಯ: ಡಿಸಿಎಂ ಡಿ.ಕೆ.ಶಿವಕುಮಾರ್ - Bengaluru Water Price - BENGALURU WATER PRICE

ಡಿಸಿಎಂ ಡಿ.ಕೆ.ಶಿವಕುಮಾರ್ ನೀರಿನ ದರ ಏರಿಸುವ ಕುರಿತು ಮಾತನಾಡಿದ್ದಾರೆ. ಜನ ವಿರೋಧ ವ್ಯಕ್ತಪಡಿಸಲಿ, ಮಾಧ್ಯಮದವರು ಬೈಯಲಿ, ಪ್ರತಿಪಕ್ಷಗಳು ಟೀಕಿಸಲಿ. ನಾನು ನೀರಿನ ದರ ಹೆಚ್ಚಳ ಮಾಡುತ್ತೇನೆ ಎಂದರು.

DCM D K Shivakumar
ಕಾವೇರಿ ನೀರು ಸಂಪರ್ಕ ಅಭಿಯಾನ, ಮಳೆ ನೀರು ಕೊಯ್ಲು ಜಾಗೃತಿ ಅಭಿಯಾನ, ವರುಣ ಮಿತ್ರ ತರಬೇತಿ ಕಾರ್ಯಕ್ರಮಕ್ಕೆ ವಿಧಾನಸೌಧ ಮೆಟ್ಟಿಲುಗಳ ಮುಂಭಾಗ ಚಾಲನೆ (ETV Bharat)

By ETV Bharat Karnataka Team

Published : Aug 22, 2024, 4:22 PM IST

Updated : Aug 22, 2024, 5:37 PM IST

ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿದರು (ETV Bharat)

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ 12-13 ವರ್ಷಗಳಿಂದ ನೀರಿನ ದರ ಹೆಚ್ಚಿಸಿಲ್ಲ. ಆದರೂ ಬಿಡಬ್ಲ್ಯೂಎಸ್‌ಎಸ್​ಬಿ ಕಷ್ಟಪಟ್ಟು ನಿರ್ವಹಣೆ ಮಾಡುತ್ತಿದೆ. ಹೀಗಾಗಿ, ಯಾರೇ ಆಕ್ಷೇಪ ವ್ಯಕ್ತಪಡಿಸಿದರೂ ನೀರಿನ ದರ ಏರಿಕೆ ಅನಿವಾರ್ಯ. ಅದನ್ನು ಮಾಡಿಯೇ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಬೆಂಗಳೂರಿಗೆ ಹೊಂದಿಕೊಂಡಿರುವ 110 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ ಅಭಿಯಾನ, ಮಳೆ ನೀರು ಕೊಯ್ಲು ಜಾಗೃತಿ ಅಭಿಯಾನ, ವರುಣ ಮಿತ್ರ ತರಬೇತಿ ಕಾರ್ಯಕ್ರಮಕ್ಕೆ ವಿಧಾನಸೌಧ ಮೆಟ್ಟಿಲುಗಳ ಮುಂಭಾಗ ಇಂದು ಚಾಲನೆ ನೀಡಿ ಅವರು ಮಾತನಾಡಿದರು.

ರಾಜಧಾನಿಯ 1.40 ಕೋಟಿ ಜನಸಂಖ್ಯೆಗೆ ನೀರು ಒದಗಿಸಲೇಬೇಕು. ಇದಕ್ಕಾಗಿ ಸಾಲ ಮಾಡಿ, ಸಂಪರ್ಕ ಜಾಲವನ್ನು ಹೆಚ್ಚಿಸದ ಹೊರತು ನೀರು ಕೊಡಲು ಕಷ್ಟವಾಗುತ್ತದೆ. ದರ ಹೆಚ್ಚಳ ಮಾಡದಿದ್ದರೆ ನೀರು ಸರಬರಾಜು ಕಂಪನಿ ಉಳಿಯುವುದಿಲ್ಲ, ನೌಕರರು ಬದುಕಲೂ ಆಗುವುದಿಲ್ಲ. ಸಂಸ್ಥೆಗೆ ವಿದ್ಯುತ್ ಬಿಲ್ ಕಟ್ಟಲು ಆಗುತ್ತಿಲ್ಲ. ಎಲ್ಲರಿಗೂ ನೀರಿನ ದರ ಹೆಚ್ಚಳ ಮಾಡುವುದಿಲ್ಲ. ಎಷ್ಟು ಏರಿಕೆ ಮಾಡಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಚರ್ಚೆ ಮಾಡಲಿ, ಧರಣಿ ಮಾಡಲಿ ನಾನು ಇದಕ್ಕೆ ಬದ್ಧ ಎಂದರು.

ಪ್ರತ್ಯೇಕ ವಿದ್ಯುತ್ ತಯಾರಿಕಾ ಕಂಪನಿ: 14 ವರ್ಷಗಳಲ್ಲಿ ಸಾಕಷ್ಟು ಬಾರಿ ವಿದ್ಯುತ್ ಬಿಲ್ ಹೆಚ್ಚಳವಾಗಿದೆ. ಇದಕ್ಕಾಗಿ ಇಲಾಖೆಯದ್ದೇ ಪ್ರತ್ಯೇಕ ಕಂಪನಿ ಸ್ಥಾಪಿಸಿ ನೀವೇ ಸೋಲಾರ್ ಸೇರಿದಂತೆ ಇತರೇ ಮೂಲಗಳಿಂದ ವಿದ್ಯುತ್ ತಯಾರಿಸಿದರೆ ಹಣ ಉಳಿತಾಯವಾಗುತ್ತದೆ. ಬೆಂಗಳೂರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಜಂಟಿಯಾಗಿ ಈ ಕಾರ್ಯಕ್ರಮ ರೂಪಿಸಬಹುದು. ದೂರಾಲೋಚನೆ ಇಟ್ಟುಕೊಂಡು ಈಗಾಗಲೇ ಕಂಪನಿ ಸಿದ್ಧಪಡಿಸಲಾಗಿದೆ. ಪಾವಗಡದಲ್ಲಿ ಸೋಲಾರ್ ಪಾರ್ಕ್ ಮಾಡಿದ ಕಾರಣಕ್ಕೆ ಮೂರುವರೆ ರೂಪಾಯಿಗೆ ವಿದ್ಯುತ್ ಸಿಗುತ್ತಿದೆ. ಆಗ ಹಲವರು ತಲೆಕೆಟ್ಟಿದೆಯಾ ಎಂದು ಆಡಿಕೊಂಡರು. ಇದರಿಂದ ಸರಬರಾಜು ಮಾಡುವ ಖರ್ಚು ಉಳಿತಾಯವಾಗಿದೆ ಎಂದು ತಿಳಿಸಿದರು.

ಕಾವೇರಿ ನೀರು ಸಂಪರ್ಕ ಅಭಿಯಾನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ (ETV Bharat)

ನಾನಿರುವ ತನಕ ಖಾಸಗೀಕರಣ ಆಗಲ್ಲ: ಬಿಡಬ್ಲ್ಯೂಎಸ್​ಎಸ್​​ಬಿ ನನ್ನ ಬಳಿಯೇ ಇರುವ ಕಾರಣ ಅನೇಕರು ನೂತನ ಯೋಜನೆ ಕುರಿತು ಚರ್ಚೆ ನಡೆಸಲು ಬಂದರು. ಈ ಹಿಂದೆ ಇಂಧನ ಇಲಾಖೆಯಲ್ಲಿ ಇದ್ದಾಗಲೂ ಇದೇ ಪ್ರಸ್ತಾವನೆ ಬಂದಿತ್ತು. ಮುಂಬೈ ಸೇರಿದಂತೆ ಇತರೆಡೆ ಅದಾನಿ ಹಾಗೂ ಇತರೇ ಕಂಪೆನಿಗಳು ವಿದ್ಯುತ್ ಸರಬರಾಜು ಮಾಡುತ್ತಿವೆ. ನಾನು ಇರುವ ತನಕ ಇದೆಲ್ಲವೂ ಸಾಧ್ಯವಿಲ್ಲ. ಈ ವಿಚಾರ ಇಲ್ಲಿಗೆ ಬಿಟ್ಟುಬಿಡಿ, ಇದರ ಸುದ್ದಿಗೆ ಬರಬೇಡಿ ಎಂದು ವಾಪಸ್ ಕಳುಹಿಸಿದೆ ಎಂದರು.

ಜಲ ಹಾಗೂ ಇಂಧನ ಇವೆರಡೂ ಬಹಳ ಮುಖ್ಯವಾದವುಗಳು. ಈ ಹಿಂದೆ ನಾನು ಇಂಧನ ಸಚಿವನಾಗಿದ್ದೆ. ಈಗ ನೀರಾವರಿ ಸಚಿವನಾಗಿದ್ದೇನೆ. ಜೆ.ಹೆಚ್.ಪಟೇಲ್ ಅವರ ಕಾಲದಲ್ಲಿ ನೀರು ಸರಬರಾಜನ್ನು ಖಾಸಗಿಯವರಿಗೆ ನೀಡಬೇಕು ಎನ್ನುವ ಪ್ರಸ್ತಾವನೆ ಬಂದಿತ್ತು. ನಂತರ ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗಲೂ ಈ ಬಗ್ಗೆ ದೊಡ್ಡ ಚರ್ಚೆಯಾಯಿತು.‌

ಸದನದಲ್ಲಿ ನಾಣಯ್ಯನವರು ವ್ಯಾಪಕವಾಗಿ ಚರ್ಚೆ ಮಾಡಿದರು. ಆಗ ಎಸ್.ಎಂ.ಕೃಷ್ಣ ಅವರು ನನ್ನನ್ನು ಹೊರದೇಶಕ್ಕೆ ಕಳುಹಿಸಿ ನೀರು ಸರಬರಾಜನ್ನು ಖಾಸಗಿಕರಣದ ಬಗ್ಗೆ ಅಧ್ಯಯನ ಮಾಡುವಂತೆ ತಿಳಿಸಿದ್ದರು. ನಾನು ಫ್ರಾನ್ಸ್ ಹಾಗೂ ಇತರ ದೇಶಗಳಿಗೆ ಹೋಗಿದ್ದೆ. ಅಲ್ಲಿ ಒಂದು ಪದ್ಧತಿಯಲ್ಲಿ ಮಾಡುತ್ತಿದ್ದಾರೆ. ನಮ್ಮಲ್ಲಿರುವ ಬಿಡಬ್ಲ್ಯೂಎಸ್​ಎಸ್​ಬಿ ಇಂಜಿನಿಯರ್ ಗಳು ಹೊರದೇಶದಲ್ಲಿರುವ ಇಂಜಿನಿಯರ್​ಗಳಿಗಿಂತ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಎಸ್.ಎಂ.ಕೃಷ್ಣ ಅವರಿಗೆ ಹೇಳಿದೆ.

ಗಿಡಕ್ಕೆ ನೀರು ಹಾಕುತ್ತಿರುವ ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)

ಅಲ್ಲಿಂದ ಬಂದವರು ನಮ್ಮವರ ಬಳಿಯೇ ಕೆಲಸ ಮಾಡಿಸುತ್ತಾರೆ. ನೀರಿನ ಪೈಪ್​ಲೈನ್ ಬದಲಾಯಿಸಿ ಹೊಸ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿ ಶೇ.30ರಷ್ಟು ಹೆಚ್ಚು ವೆಚ್ಚ ಕೇಳುತ್ತಾರೆ. ಆ ವ್ಯವಸ್ಥೆ ನಮ್ಮ ರಾಜ್ಯಕ್ಕೆ ಅನುಕೂಲಕರವಾಗಿಲ್ಲ. ದೆಹಲಿ, ಮುಂಬೈಗೆ ಸೂಕ್ತವಾಗಿದೆ ಎಂದು ವರದಿ ನೀಡಿದೆ. ಖಾಸಗೀಕರಣದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾದ ಕಾರಣಕ್ಕೆ ಪ್ರಸ್ತಾವನೆ ಕೈ ಬಿಡಲಾಯಿತು ಎಂದು ತಿಳಿಸಿದರು.

ಮೇಕೆದಾಟು-ನ್ಯಾಯ ಸಿಗುವ ನಂಬಿಕೆ ಇದೆ: ನಾನು ಅಧಿಕಾರವಹಿಸಿಕೊಂಡ ತಕ್ಷಣ 6 ಎಂಎಲ್ ಡಿ ನೀರು ಸರಬರಾಜನ್ನು ಹೆಚ್ಚಳ ಮಾಡಲಾಗಿದೆ. ತಮಿಳುನಾಡಿಗೆ ನಿಗದಿತ ನೀರಿಗಿಂತ 100 ಟಿಎಂಸಿ ಹೆಚ್ಚುವರಿ ಕಾವೇರಿ ನೀರನ್ನು ಹರಿಸಲಾಗಿದೆ. ನಮ್ಮಲ್ಲಿ ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ನಮ್ಮಲ್ಲಿ ಮತ್ತೊಂದು ಅಣೆಕಟ್ಟು ಇದ್ದಿದ್ದರೆ ಅವರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಮೇಕೆದಾಟು ಯೋಜನೆ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇನೆ ಎಂದು ಹೇಳಿದರು.

ಕೆಆರ್​ಎಸ್​ಯಿಂದಲೇ ನೇರವಾಗಿ ನಗರಕ್ಕೆ ನಿಗದಿಯಾದ ನೀರನ್ನು ತರಬಹುದು ಎಂದು ಒಂದಷ್ಟು ಜನ ವರದಿ ಕೊಟ್ಟಿದ್ದಾರೆ. ಶರಾವತಿಯಿಂದ ನೀರು ತರಬೇಕು ಎನ್ನುವ ಆಲೋಚನೆಯಿದೆ. ಅಲ್ಲಿನ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎತ್ತಿನಹೊಳೆ ಯೋಜನೆ ರಾಜಕಾರಣದಿಂದ ಅಲ್ಲಲ್ಲಿ ಬೇರೆ, ಬೇರೆ ಕಡೆ ತಿರುವು ಪಡೆದುಕೊಂಡಿದೆ. ಇದನ್ನೂ ಸಹ ಒಂದು ಹಂತಕ್ಕೆ ತಲುಪಿಸಿದ್ದೇನೆ. ಕಾವೇರಿ 5ನೇ ಹಂತದ ಕಾಮಗಾರಿಗೆ ನಿಂತಿದ್ದು, ಮತ್ತೆ ಚಾಲನೆ ಮಾಡಲಾಗುವುದು ಎಂದು ತಿಳಿಸಿದರು.

ಕಾಲುವೆಗಳಲ್ಲಿ ನೀರನ್ನು ಕೊನೆಯ ಹಂತಕ್ಕೆ ತಲುಪಿಸಬೇಕು ಎಂದು ಕಾಲುವೆಗಳ ಅಕ್ಕಪಕ್ಕ ಅರ್ಧ ಕಿ. ಮೀ ವ್ಯಾಪ್ತಿಯಲ್ಲಿ ಯಾವುದೇ ಬೋರ್​ವೆಲ್​ಗಳನ್ನು ಹಾಕುವಂತಿಲ್ಲ ಹಾಗೂ ಪಂಪ್ ಮೂಲಕ ನೀರನ್ನು ಎತ್ತುವಂತಿಲ್ಲ ಎನ್ನುವ ಕಾನೂನು ತರಲಾಗಿದೆ ಎಂದು ಹೇಳಿದರು.

ನಾನು ಸೇರಿದಂತೆ ಹಿರಿಯ ಅಧಿಕಾರಿಗಳು ಇಲಾಖೆಗೆ ಇಂದು ಬರುತ್ತೇವೆ, ನಾಳೆ ಹೋಗುತ್ತೇವೆ. ಆದರೆ ಇಲಾಖೆಯ ಎಂಜಿನಿಯರ್​ಗಳು, ನೌಕರರು ಸಂಸ್ಥೆಗೆ ಯಾವ ರೀತಿಯ ಶಾಶ್ವತ ಪರಿಹಾರ ಬೇಕು ಎನ್ನುವ ಬಗ್ಗೆ ವರದಿ ತಯಾರಿಸಿ ನನಗೆ ನೀಡಿ. ನೀವುಗಳು ಇಲ್ಲದಿದ್ದರೆ ಬೆಂಗಳೂರಿಗೆ ಹೊಸ ರೂಪ ಬರಲು ಸಾಧ್ಯವಿಲ್ಲ. ಈ ಇಲಾಖೆಯವರು ಹಗಲು ರಾತ್ರಿ ಒತ್ತಡದಲ್ಲಿಯೇ ಕೆಲಸ ಮಾಡಬೇಕಾದ ಪರಿಸ್ಥಿತಿಯಿದೆ ಎಂದರು.

ಅಂತರ್ಜಲ ಹೆಚ್ಚಳ ಮಾಡಲು ಕೆರೆ ಅಭಿವೃದ್ದಿ ಸಮಿತಿ ಜೊತೆ ಕೆಲಸ ಮಾಡಬೇಕಿದೆ. ಕಳೆದ ವರ್ಷದ ಬರಗಾಲದ ಸಮಯದಲ್ಲಿ ಬೆಂಗಳೂರಿನಲ್ಲಿ 7 ಸಾವಿರ ಬೋರ್​ವೆಲ್​ಗಳು ಬತ್ತಿ ಹೋಗಿದ್ದರೂ ಕೂಡ ಹೆಚ್ಚು ಶ್ರಮ ಹಾಕಿ ಕೆಲಸ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ಬರದಂತೆ ನೋಡಿಕೊಂಡ ನೌಕರರಿಗೆ ಆಭಾರಿಯಾಗಿದ್ದೇನೆ. ನೀರುಗಂಟಿಯಿಂದ ಹಿಡಿದು ಪ್ರತಿಯೊಬ್ಬ ನೌಕರನಿಗೂ ಮನಃಪೂರ್ವಕ ಅಭಿನಂದನೆಗಳು ಎಂದು ಹೇಳಿದರು.

ಬೆಂಗಳೂರು ಜಲ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ರಾಮಪ್ರಶಾತ್ ಮನೋಹರ್, ಬಿಡಿಎ ಆಯುಕ್ತ ಜಯರಾಮ್, ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್, ಬಿಎಂಆರ್​ಡಿಎ ಎಂಡಿ, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್ ಉಪಸ್ಥಿತರಿದ್ದರು.

ಇದನ್ನೂ ಓದಿ:ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ: ಡಿ.ಕೆ.ಶಿವಕುಮಾರ್​ - DCM D K Shivakumar

Last Updated : Aug 22, 2024, 5:37 PM IST

ABOUT THE AUTHOR

...view details