ಕರ್ನಾಟಕ

karnataka

ETV Bharat / state

ಸಿಎಂ ಆಗಿದ್ದಾಗ್ಲೇ ಚನ್ನಪಟ್ಟಣಕ್ಕೆ ಏನೂ ಮಾಡದ ಕುಮಾರಣ್ಣ ಈಗೇನು ಮಾಡ್ತಾರೆ?: ಡಿ.ಕೆ.ಶಿವಕುಮಾರ್

ಆ ಕ್ಷೇತ್ರದಲ್ಲಿ ಅವರು ಎರಡು ಬಾರಿ ನಿಂತರು. ಅವರ ಧರ್ಮಪತ್ನಿಯನ್ನೂ ನಿಲ್ಲಿಸಿದರು. ಈಗ ನಿರೀಕ್ಷೆಯಂತೆ ತಮ್ಮ ಪುತ್ರನನ್ನೂ ನಿಲ್ಲಿಸಿದ್ದಾರೆ. ಸಿಎಂ ಆಗಿದ್ದಾಗಲೇ ಚನ್ನಪಟ್ಟಣಕ್ಕೆ ಏನೂ ಮಾಡದ ಕುಮಾರಣ್ಣ ಈಗೇನು ಮಾಡುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

DCM SLAMS HDK
ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)

By ETV Bharat Karnataka Team

Published : 4 hours ago

ಬೆಂಗಳೂರು: "ಮುಖ್ಯಮಂತ್ರಿಯಾಗಿದ್ದಾಗಲೇ ತಾನು ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ ಕ್ಷೇತ್ರದ ಜನರಿಗೆ ಕುಮಾರಣ್ಣ ಏನೂ ಮಾಡಲಿಲ್ಲ. ಈಗ ಈ ಕ್ಷೇತ್ರದ ಶಾಸಕ ಸ್ಥಾನವೂ ಇಲ್ಲದಿರುವಾಗ ಅವರು ಏನು ತಾನೇ ಮಾಡಲು ಸಾಧ್ಯ?" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಇಂದು ವಿಧಾನಸೌಧದ ಬಳಿ ಮಾತನಾಡಿದ ಅವರು,"ನಾವು ಚುನಾವಣೆಗಾಗಿ ಚನ್ನಪಟ್ಟಣದಲ್ಲಿ ಕೆಲಸ ಮಾಡುತ್ತಿಲ್ಲ. ಅಲ್ಲಿ ಶಾಸಕ ಸ್ಥಾನ ತೆರವಾದಾಗಿನಿಂದಲೂ ನಾನು ಹಾಗೂ ರಾಮಲಿಂಗಾರೆಡ್ಡಿ ಕೆಲಸ ಮಾಡುತ್ತಿದ್ದೇವೆ. ಆ ಕ್ಷೇತ್ರದ ಜನರ ಮನೆ ಬಾಗಿಲಿಗೆ ಸರ್ಕಾರ ಹೋಗಿ ಅವರ ಕಷ್ಟಗಳನ್ನು ಆಲಿಸಿದೆ. ಪಂಚಾಯತಿ ವ್ಯಾಪ್ತಿಯಲ್ಲಿ ಜನರ ಸಮಸ್ಯೆ ಕೇಳಲು ಕಾರ್ಯಕ್ರಮ ಮಾಡಿದಾಗ ಸುಮಾರು 22 ಸಾವಿರ ಕುಟುಂಬಗಳು ಅರ್ಜಿ ಸಲ್ಲಿಸಿವೆ" ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ (ETV Bharat)

"ತಮಗೆ ಮನೆ, ನಿವೇಶನ ನೀಡಿಲ್ಲ, ಬಗರ್ ಹುಕುಂ ಸಾಗುವಳಿ ಸಭೆ ಮಾಡಿಲ್ಲ, ರಸ್ತೆ ಇಲ್ಲ. ನಮ್ಮ ಕಷ್ಟ ಕೇಳಲು ಈ ಹಿಂದೆ ಶಾಸಕರಾಗಿದ್ದ ಕುಮಾರಣ್ಣ ಬಂದಿಲ್ಲ ಎಂದು ಜನರು ಸಮಸ್ಯೆ ಹೇಳಿಕೊಂಡರು. ಈ ಹಿನ್ನೆಲೆಯಲ್ಲಿ ನಾನು ಹಾಗೂ ರಾಮಲಿಂಗಾರೆಡ್ಡಿಯವರು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಚನ್ನಪಟ್ಟಣಕ್ಕೆ ₹500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿ ರಸ್ತೆ, ನೀರಾವರಿ ಯೋಜನೆಗೆ ಮುಂದಾಗಿದ್ದೇವೆ. ಇದರ ಜೊತೆಗೆ ಕ್ಷೇತ್ರದ ಜನರಿಗೆ 5 ಸಾವಿರ ಮನೆಗಳನ್ನು ಮಂಜೂರು ಮಾಡಲಾಗಿದೆ. ನಿವೇಶನ ಹಂಚಿಕೆ ಮಾಡಲು ಸರ್ಕಾರಿ ಜಾಗ ಗುರುತಿಸಿ ಬಡಾವಣೆ ನಿರ್ಮಾಣ ಕೆಲಸ ಮಾಡುತ್ತಿದ್ದೇವೆ" ಎಂದು ವಿವರಿಸಿದರು.

ವಕ್ಫ್ ಆಸ್ತಿ ವಿವಾದ:ವಕ್ಫ್ ಮಂಡಳಿ ಭೂ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, "ಬಿಜೆಪಿ ಅನಗತ್ಯವಾಗಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಬಿಜೆಪಿ ಅವಧಿಯಲ್ಲೂ ವಕ್ಫ್ ಮಂಡಳಿಯಿಂದ ರೈತರಿಗೆ ನೋಟಿಸ್ ನೀಡಲಾಗಿತ್ತು. ದಾಖಲಾತಿಗಳಲ್ಲಿ ಆಗಿರುವ ತಪ್ಪನ್ನು ಸರಿಪಡಿಸುವಂತೆ ನಾವು ಕಂದಾಯ ಇಲಾಖೆಗೆ ಸೂಚನೆ ನೀಡಿದ್ದೇವೆ. ರೈತರಿಗೆ ನೀಡಲಾಗಿರುವ ಭೂಮಿಯನ್ನು ರೈತರ ಭೂಮಿಯಾಗಿ ಮುಂದುವರಿಸಬೇಕು ಎಂದು ತಿಳಿಸಿದ್ದೇವೆ. ನಾವು ಯಾವುದೇ ರೈತರಿಗೆ ತೊಂದರೆ ನೀಡುವುದಿಲ್ಲ. ರೈತರ ಹಕ್ಕನ್ನು ಎತ್ತಿ ಹಿಡಿಯುತ್ತೇವೆ. ಇದು ಸರ್ಕಾರದ ತೀರ್ಮಾನವಾಗಿದ್ದು, ನಾವು ಅದಕ್ಕೆ ಬದ್ಧ" ಎಂದು ತಿಳಿಸಿದರು.

ಜಯನಗರಕ್ಕೆ ಅನುದಾನ ನೀಡಿಲ್ಲ ಎಂಬ ಆರೋಪದ ಕುರಿತು, "ಈಗ ಬಿಡುಗಡೆ ಮಾಡಿರುವುದು ಉಪಮುಖ್ಯಮಂತ್ರಿಗಳ ಹೆಚ್ಚುವರಿ ಅನುದಾನ ನಿಧಿಯ ಹಣ. ರಸ್ತೆ ಸಮಸ್ಯೆ ಇದೆ ಎಂದು ಎಲ್ಲಾ 27 ಕ್ಷೇತ್ರಗಳಿಗೂ ತಲಾ 10 ಕೋಟಿ ನೀಡಲಾಗಿದೆ. ಜಯನಗರ ಬಹಳ ಚಿಕ್ಕ ಕ್ಷೇತ್ರ. ಅಲ್ಲಿ ದೊಡ್ಡ ಮಟ್ಟದ ಹಾನಿಯಾಗಿಲ್ಲ. ಅವರಿಗೂ ಅನುದಾನ ನೀಡಬೇಕೆನ್ನುವ ಅರಿವು ನನಗಿದೆ. ಅವರು ನಮ್ಮ ಮೇಲೆ ದೊಡ್ಡ ಆರೋಪ ಮಾಡಿದ್ದರು. ಅವರ ಆರೋಪ ನೋಡಿಕೊಂಡು ಅನುದಾನ ಹೆಚ್ಚು ನೀಡಬೇಕೋ, ಕಡಿಮೆ ನೀಡಬೇಕೋ ಎಂದು ಆಲೋಚನೆ ಮಾಡಬೇಕಿದೆ" ಎಂದರು.

ಸಿನಿಮಾ ಶೂಟಿಂಗ್‌ಗೆ ಮರ ಕಡಿದ ವಿಚಾರ: ಹೆಚ್ಎಂಟಿ ಅರಣ್ಯ ಜಾಗದಲ್ಲಿ ಚಲನಚಿತ್ರ ಶೂಟಿಂಗ್‌ಗಾಗಿ ಮರ ಕಡಿದವರ ಬಗ್ಗೆ ಕ್ರಮ ಕೈಗೊಳ್ಳಲು ಅರಣ್ಯ ಸಚಿವರು ಬಿಬಿಎಂಪಿಗೆ ಸೂಚಿಸಿರುವ ಕುರಿತ ಪ್ರಶ್ನೆಗೆ, "ಈ ವಿಚಾರವಾಗಿ ನನಗೆ ಮಾಹಿತಿ ಇಲ್ಲ. ಬೇರೆ ಇಲಾಖೆಗಳ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ" ಎಂದು ಹೇಳಿದರು.

ದರ್ಶನ್‌ಗೆ ಜಾಮೀನು:"ನ್ಯಾಯಾಲಯದ ತೀರ್ಪನ್ನು ನಾವು ಪ್ರಶ್ನಿಸುವುದಿಲ್ಲ. ಸರ್ಕಾರ ತೀರ್ಪನ್ನು ಗೌರವದಿಂದ ಸ್ವಾಗತಿಸುತ್ತದೆ" ಎಂದು ಡಿಕೆಶಿ ತಿಳಿಸಿದರು.

ಇದನ್ನೂ ಓದಿ:ಯಾರ ಆಸ್ತಿಯನ್ನು ಯಾರು ತೆಗೆದುಕೊಳ್ಳಲು ಸಾಧ್ಯವಿಲ್ಲ: ಜೋಶಿಗೆ ಜಮೀರ್ ತಿರುಗೇಟು

ABOUT THE AUTHOR

...view details