ಕರ್ನಾಟಕ

karnataka

ETV Bharat / state

ಬೆಳಗಾವಿಯಿಂದಲೇ ಹೊಸ ಅಧ್ಯಾಯ ಪ್ರಾರಂಭ: ಡಿಸಿಎಂ ಡಿ.ಕೆ. ಶಿವಕುಮಾರ್​ ಘೋಷಣೆ - DCM DK SHIVAKUMAR

ಬೆಳಗಾವಿ ಕಾಂಗ್ರೆಸ್​ ಅಧಿವೇಶನದ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್​ ಬೆಳಗಾವಿಯಲ್ಲೇ ಪ್ರತಿಕ್ರಿಯಿಸಿದ್ದು, ಹೊಸ ಅಧ್ಯಾಯ ಬೆಳಗಾವಿಯಿಂದಲೇ ಪ್ರಾರಂಭವಾಗಲಿದೆ" ಎಂದಿದ್ದಾರೆ.

DCM DK SHIVAKUMAR
ಬೆಳಗಾವಿ ಸಾಂಬ್ರಾ ವಿಮಾಣ ನಿಲ್ದಾಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್​ ಘೋಷಣೆ (ETV Bharat)

By ETV Bharat Karnataka Team

Published : Dec 23, 2024, 12:52 PM IST

ಬೆಳಗಾವಿ: "ಅಂದು ಮಹಾತ್ಮ ಗಾಂಧಿ, ಇಂದು ಮಲ್ಲಿಕಾರ್ಜುನ ಖರ್ಗೆ ಸಾಹೇಬ್ರು ಕಾಂಗ್ರೆಸ್​ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದಾರೆ. ಈಗ ಹೊಸ ಯುಗದಲಲ್ಲಿ ಹೇಗೆ ಪಕ್ಷ ತೆಗೆದುಕೊಂಡು ಹೋಗಬೇಕು ಎಂಬ ಬಗ್ಗೆ ದೇಶದ ಎಲ್ಲ ನಾಯಕರು ಬೆಳಗಾವಿಗೆ ಬಂದು ಚರ್ಚಿಸಲಿದ್ದಾರೆ‌. ಹೊಸ ಅಧ್ಯಾಯ ಬೆಳಗಾವಿಯಿಂದಲೇ ಪ್ರಾರಂಭವಾಗಲಿದೆ" ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್​ ಹೇಳಿದರು.

ಬೆಳಗಾವಿಯ ಸಾಂಬ್ರಾ ವಿಮಾಣ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಬೆಳಗಾವಿ ಕಾಂಗ್ರೆಸ್​ ಅಧಿವೇಶನ ದೇಶದ ಒಂದು ಇತಿಹಾಸ. ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ ಮತ್ತು ಇದು ದೇಶಕ್ಕೆ‌ ದೊಡ್ಡ ಶಕ್ತಿ. ಅವತ್ತು ಜವಾಹರಲಾಲ್ ನೆಹರು, ಗಂಗಾಧರ್ ರಾವ್ ದೇಶಪಾಂಡೆ ಇಬ್ಬರು ಜನರಲ್ ಸೆಕ್ರೆಟರಿಗಳಿದ್ದರು. ಇವರಿಬ್ಬರು ಗಾಂಧೀಜಿಯವರನ್ನು ಕರೆದುಕೊಂಡು ಬಂದು ಅಧ್ಯಕ್ಷರಾಗಿ ಮಾಡಿ ಕಾಂಗ್ರೆಸ್ ಅಧಿವೇಶನ ನಡೆಸಿದ್ದರು' ಎಂದು ತಿಳಿಸಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ (ETV Bharat)

'ಇಲ್ಲಿಂದ ಸ್ವಾತಂತ್ರ್ಯ ಚಳವಳಿ ಆರಂಭವಾಯಿತು. ಅದರಂತೆ ನಾವು ಬೆಳಗಾವಿಯಿಂದಲೇ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೆವು. ಗಾಂಧಿ ಬಾವಿಯ ನೀರನ್ನು ಚೆಲ್ಲಿ, ಕಸ ಗುಡಿಸಿದ ಮೇಲೆ ರಾಜ್ಯದಲ್ಲಿ 136 ಸೀಟ್ ಬಂದಿವೆ. ಮತ್ತೆ ಬೆಳಗಾವಿಯಿಂದಲೇ ದೇಶಕ್ಕೆ, ರಾಜ್ಯಕ್ಕೆ ಮುಂದೆ ಜನರನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎನ್ನುವ ಕುರಿತು ಸಮಾವೇಶ ನಡೆಯಲಿದೆ" ಡಿಸಿಎಂ ಮಾಹಿತಿ ನೀಡಿದರು.

"ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಕ್ಕೆ ಪಕ್ಷಾತೀತವಾಗಿ ಎಲ್ಲರಿಗೂ ಆಹ್ವಾನವಿದೆ. ಇದೊಂದು ಸಂಪೂರ್ಣ ಸರ್ಕಾರಿ ಕಾರ್ಯಕ್ರಮ ಆಗಿರಲಿದೆ. ಸ್ಪೀಕರ್, ಸಭಾಪತಿ, ಎಲ್ಲಾ ಪಕ್ಷದ ಶಾಸಕರು, ಸಂಸದರನ್ನು ಆಹ್ವಾನಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರು ಮತ್ತು ಗಂಗಾಧರರಾವ್ ದೇಶಪಾಂಡೆ ಅವರ ಕುಟುಂಬಕ್ಕೂ ಆಹ್ವಾನ ಮಾಡುತ್ತಿದ್ದೇವೆ" ಎಂದರು.

"ಕಾಂಗ್ರೆಸ್​​ ಅಧಿವೇಶನದ ಶತಮಾನೋತ್ಸವಕ್ಕೆ ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷರು, 140 ಸಂಸದರು, ಕಾಂಗ್ರೆಸ್​​ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಸೇರಿ 500 ನಾಯಕರು ಬೆಳಗಾವಿಗೆ ಬರಲಿದ್ದಾರೆ. ಸಭೆಗೆ ವರ್ಕಿಂಗ್​ ಕಮಿಟಿಯವರಿಗೆ ಮಾತ್ರ ಅವಕಾಶವಿದೆ. ಎರಡನೇ ದಿನದ ಸಮಾವೇಶಕ್ಕೆ ಅವರೆಲ್ಲಾ ಬರಲಿದ್ದಾರೆ" ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್​ ಅಧಿವೇಶನದ ಶತಮಾನೋತ್ಸವ; 39ನೇ ಕಾಂಗ್ರೆಸ್​​ ಅಧಿವೇಶನಕ್ಕೆ ಸಾಕ್ಷಿಯಾಗಿದ್ದ ಬೆಳಗಾವಿ ವೀರಸೌಧ ಶತಮಾನೋತ್ಸವ ಆಚರಣೆಗೆ ಸಿದ್ಧಗೊಳ್ಳುತ್ತಿದೆ. ಈ ಐತಿಹಾಸಿಕ ಸಮಾರಂಭಕ್ಕೆ ಸಕಲ ತಯಾರಿ ನಡೆದಿದೆ.

1924ರ ಡಿ.26, 27ರಂದು ಎರಡು ದಿನಗಳ ಕಾಲ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಆ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಮಹಾತ್ಮ ಗಾಂಧೀಜಿ. ಬಾಪೂಜಿ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್​ನ ಏಕೈಕ ಅಧಿವೇಶನ ಇದಾಗಿತ್ತು. ಬೆಳಗಾವಿ ಟಿಳಕವಾಡಿ ಪ್ರದೇಶದ ಸ್ಥಳದಲ್ಲಿ ವಿಜಯನಗರ ಎಂದು ನಾಮಕರಣ ಮಾಡಿದ್ದ ಜಾಗದಲ್ಲಿ ಅಧಿವೇಶನ ಜರುಗಿತ್ತು. ಅಲ್ಲಿಯೇ ಬಾವಿಯೊಂದನ್ನು ನಿರ್ಮಿಸಲಾಗಿತ್ತು. ಈಗಲೂ‌ ಅದು ಅಧಿವೇಶನಕ್ಕೆ ಸಾಕ್ಷಿಯಾಗಿ ನಿಂತಿದೆ. ಈ ನಿಟ್ಟಿನಲ್ಲಿ ಇದೇ 26ರಂದು ಶತಮಾನೋತ್ಸವ ಕಾರ್ಯಕ್ರಮ‌ ಇದೇ ಸ್ಥಳದಲ್ಲಿ ನಡೆಯಲಿದ್ದು, ಅದಕ್ಕಾಗಿ ಸುಸಜ್ಜಿತ ವೇದಿಕೆ ಹಾಕಲಾಗುತ್ತಿದೆ.

ಇದನ್ನೂ ಓದಿ:ಅಂದ ಚೆಂದಗೊಳ್ಳುತ್ತಿದೆ ವೀರಸೌಧ: ಗಾಂಧೀಜಿ ಹಳೇ ಫೋಟೋಗಳಿಗೆ ಎಐ ಟಚ್: ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಹೇಗಿದೆ ತಯಾರಿ..?

ABOUT THE AUTHOR

...view details