ಕರ್ನಾಟಕ

karnataka

ETV Bharat / state

ಎತ್ತಿನಹೊಳೆ ಯೋಜನೆಯಿಂದ 7 ಜಿಲ್ಲೆಗಳಿಗೆ ಅನುಕೂಲ: ಸಂಪೂರ್ಣ ಮಾಹಿತಿ ನೀಡಿದ ಡಿಸಿಎಂ - Yettinhole Project - YETTINHOLE PROJECT

ರಾಜ್ಯದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ ಮತ್ತು ತುಂಗಭದ್ರಾ ಡ್ಯಾಂಗೆ ತುರ್ತು ಗೇಟ್ ಅಳವಡಿಸಿರುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

YETTINHOLE PROJECT
ಎತ್ತಿನಹೊಳೆ ಯೋಜನೆ (ETV Bharat)

By ETV Bharat Karnataka Team

Published : Sep 2, 2024, 5:07 PM IST

Updated : Sep 2, 2024, 6:36 PM IST

ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)

ಬೆಂಗಳೂರು:ರಾಜ್ಯದ 7 ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೆರೆ ತುಂಬಿಸುವ ಮಹಾತ್ವಾಕಾಂಕ್ಷೆಯ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳಿಗೆ ಗೌರಿ ಹಬ್ಬದ ದಿನ ಸೆ.6 ರಂದು ಮಧ್ಯಾಹ್ನ 12.05 ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಈ ಯೋಜನೆಯಿಂದ 24.01 ಟಿಎಂಸಿ ಪ್ರಮಾಣದ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಕೆಲ ತಾಲೂಕುಗಳಿಗೆ ಉಪಯೋಗವಾಗಲಿದೆ. ಅನೇಕ ನಾಯಕರು ಈ ಯೋಜನೆಗೆ ಹೋರಾಟ ಮಾಡಿದ್ದರು. ಹಲವು ಪಕ್ಷಗಳು ಇದಕ್ಕೆ ಸಹಕಾರ ನೀಡಿವೆ. ಕಳೆದ ಒಂದು ವರ್ಷದಿಂದ ಈ ಯೋಜನೆಯನ್ನು ಸವಾಲಾಗಿ ಸ್ವೀಕರಿಸಿದ್ದೆ. ಈ ಯೋಜನೆಯ ಕಾಮಗಾರಿಗಳ ಪರೀಕ್ಷಾರ್ಥ ಕಾರ್ಯಾಚರಣೆ ಮಾಡಿದ್ದೇನೆ ಎಂದು ಹೇಳಿದರು.

ಈ ಯೋಜನೆಗಳ ವಿಚಾರವಾಗಿ ಅನೇಕ ಟೀಕೆಗಳು ಬರುತ್ತಿದ್ದವು. ಟೀಕೆಗಳು ಬರಲಿ. ಈ ಯೋಜನೆಯಲ್ಲಿ ನೀರು ಪಂಪ್ ಮಾಡುವ ಮೂಲಕ ಕಾಲುವೆಗಳಿಗೆ ಹರಿಸುತ್ತಿದ್ದೇವೆ. ಈ ಯೋಜನೆ ಮಾರ್ಗದ ಮಧ್ಯೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗಗಳಲ್ಲಿ ಸ್ವಲ್ಪ ಸಮಸ್ಯೆ ಇದ್ದು, ಅವುಗಳನ್ನು ಬಗೆಹರಿಸಿದ್ದೇವೆ. ಈ ಜಾಗ ಹಸ್ತಾಂತರವಾದ ಬಳಿಕ ಪ್ರಮುಖ ಕಾಲುವೆಗಳಿಗೆ ನೀರು ಹರಿಯಲಿದೆ. ಈಗ ತಾತ್ಕಾಲಿಕವಾಗಿ ವಾಣಿ ವಿಲಾಸ ಅಣೆಕಟ್ಟಿಗೆ ನೀರು ಹರಿಸಲಾಗುತ್ತಿದೆ. ಯೋಜನೆಯ 7 ವಿಯರ್​ಗಳು ನೀರನ್ನು ಎತ್ತುತ್ತಿವೆ ಎಂದು ತಿಳಿಸಿದರು.

ಯೋಜನೆಯ ಉದ್ದೇಶ:ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶ ಹಾಗೂ 6,657 ಗ್ರಾಮಗಳ ಸುಮಾರು 75.59 ಲಕ್ಷ (Projected population for 2023-24) ಜನರಿಗೆ ಮತ್ತು ಜಾನುವಾರುಗಳಿಗೆ 14.056 ಟಿ.ಎಂ.ಸಿ ಕುಡಿಯುವ ನೀರನ್ನು ಒದಗಿಸುವುದು. ಜೊತೆಗೆ 05 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ತುಮಕೂರು ವ್ಯಾಪ್ತಿಯಲ್ಲಿ ಬರುವ 527 ಕೆರೆಗಳಿಗೆ 9.953 ಟಿ.ಎಂ.ಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ ಶೇ. 50 ರಷ್ಟು ತುಂಬಿಸಿ ಅಂತರ್ಜಲ ಮರುಪೂರಣ ಮಾಡಲು 23,251.66 ಕೋಟಿ ರೂ.ಗಳ ಮೊತ್ತದ ರಾಜ್ಯದ ಮಹತ್ವಾಕಾಂಕ್ಷೆಯ ಕುಡಿಯುವ ನೀರಿನ ಯೋಜನೆ ಇದಾಗಿದೆ ಎಂದು ಡಿಸಿಎಂ ವಿವರಿಸಿದರು.

2014ರಲ್ಲಿ ಆರಂಭಗೊಂಡ ಯೋಜನೆಯ ಮೊದಲನೇ ಹಂತದ ಏತ ಮತ್ತು ವಿದ್ಯುತ್ ಪೂರೈಕೆಯ ಕಾಮಗಾರಿಗಳ ಅನುಷ್ಠಾನದಲ್ಲಿ ಬಹುದಿನಗಳಿಂದ ಉದ್ಭವಿಸಿದ್ದ ಅಡಚಣೆಗಳನ್ನು ನಿವಾರಿಸಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಪ್ರಸ್ತುತ ವಿಯರ್-1,2,4,5,6,7&8 ರಿಂದ ಒಟ್ಟಾರೆ 79.50 ಕ್ಯುಮೆಕ್ಸ್ (2800.00 ಕ್ಯೂಸೆಕ್​​) ನೀರನ್ನೆತ್ತಿ ವಿತರಣಾ ತೊಟ್ಟಿ-3 ರವರೆಗೆ (Delivery Chamber-3) ಪೂರೈಸಿ ತದನಂತರ ವಿತರಣಾ ತೊಟ್ಟಿ-3 ರಿಂದ ನೀರನ್ನೆತ್ತಿ ವಿತರಣಾ ತೊಟ್ಟಿ- 4ರ ಮುಖಾಂತರ ಗುರುತ್ವ ಕಾಲುವೆಗೆ 79.50 ಕ್ಯುಮೆಕ್ಸ್‌ (2800.00 ಕ್ಯೂಸೆಕ್​) ನೀರನ್ನು ಹರಿಸಲು ಯೋಜಿಸಲಾಗಿದೆ. ಗುರುತ್ವ ಕಾಲುವೆಯು ಒಟ್ಟು 190 ಕಿ.ಮೀ ಉದ್ದವಿದ್ದು, ಈ ಪೈಕಿ 164.47 ಕಿ.ಮೀ ಪೂರ್ಣಗೊಂಡಿದ್ದು, 25.87 ಕಿ.ಮೀ ಪ್ರಗತಿಯಲ್ಲಿರುತ್ತದೆ. ಗುರುತ್ವ ಕಾಲುವೆಯ ಆರಂಭಿಕ 42.00 ಕಿ.ಮೀ ವರಗಿನ ಕಾಮಗಾರಿಗಳು ಯಾವುದೇ ಅಡೆತಡೆಯಿಲ್ಲದೇ ಪೂರ್ಣಗೊಂಡಿದ್ದು, ನಂತರದ ಕಾಮಗಾರಿಗಳು ಅರಣ್ಯ ಮತ್ತು ಭೂಸ್ವಾಧೀನ ಸಮಸ್ಯೆಯಿಂದಾಗಿ ಪೂರ್ಣಗೊಂಡಿರದ ಕಾರಣ, ಗುರುತ್ವ ಕಾಲುವೆಯ 32.50 ಕಿ.ಮೀನಲ್ಲಿರುವ ನಾಲಾ ಎಸ್ಕೇಪ್ ಮೂಲಕ ಸುಮಾರು 132.50 ಕಿಮೀ ದೂರದಲ್ಲಿರುವ ವಾಣಿ ವಿಲಾಸ ಸಾಗರಕ್ಕೆ ವೇದಾ ವ್ಯಾಲಿಯ ಮೂಲಕ ತಾತ್ಕಾಲಿಕವಾಗಿ 1500 ಕ್ಯೂಸೆಕ್​ ನೀರನ್ನು ಹರಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು. 2027 ಕ್ಕೆ ಉಳಿದ ಕಡೆ ನೀರು ತರುತ್ತೇವೆ ಎಂದು ತಿಳಿಸಿದರು.

ಯೋಜನೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಹಮ್ಮಿಕೊಂಡಿರುವ ಗುರಿ: 2025 ರ ಅಂತ್ಯಕ್ಕೆ ಎಲ್ಲ ಲಿಫ್ಟ್ ಕಾಮಗಾರಿಗಳನ್ನು ಪೂರ್ಣಗೊಳಿಸಿ 85 ಕ್ಯೂಸೆಕ್​ ​ ನೀರನ್ನು ಮೇಲೆತ್ತಿ ಗುರುತ್ವ ಕಾಲುವೆ ಸರಪಳಿ 100.00 ಕಿ.ಮೀವರೆಗೆ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿನ ನಾಲೆಗೆ ಹರಿಸುವುದು ಹಾಗೂ ಲಕ್ಕೇನಹಳ್ಳಿ ಸಮತೋಲನಾ ಜಲಾಶಯದ ನಿರ್ಮಾಣ ಕಾಮಗಾರಿ ಪ್ರಾರಂಭಿಸುವುದು. 2025-26ನೇ ಸಾಲಿಗೆ: ದಿನಾಂಕ:01.11.2025ರ ಅಂತ್ಯಕ್ಕೆ ಗುರುತ್ವ ಕಾಲುವೆ 100.00 ಕಿ.ಮೀ ನಿಂದ 261.69 ಕಿ.ಮೀ ವರೆಗೆ (ಪಾವಗಡ ಮಧುಗಿರಿ ಫೀಡರ್ ಹಾಗೂ ಗೌರಿಬಿದನೂರು ಮತ್ತು ಟಿ.ಜಿ ಹಳ್ಳಿ-ರಾಮನಗರ ಫೀಡರ್ ಒಳಗೊಂಡಂತೆ) ನಾಲೆಗೆ ನೀರು ಹರಿಸುವುದು ಮತ್ತು ಲಕ್ಕೇನಹಳ್ಳಿ ಸಮತೋಲನಾ ಜಲಾಶಯದ ಶೇ.50 ರಷ್ಟು ಕಾಮಗಾರಿಯನ್ನು ಆರ್ & ಆರ್ ಸಹಿತ 31.03.2026 ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು.

2026-27ನೇ ಸಾಲಿಗೆ: ದಿನಾಂಕ :01.11.2026ರ ಅಂತ್ಯಕ್ಕೆ ಗುರುತ್ವ ಕಾಲುವೆ ಸರಪಳಿ: 261.69 ಕಿ.ಮೀ ನಂತರದ ಎಲ್ಲಾ ಫೀಡರ್ ಕಾಮಗಾರಿಗಳನ್ನು ಪೂರ್ಣಗೊಳಿಸಿ (ಲಿಫ್ಟ್ ಕಾಮಗಾರಿ ಒಳಗೊಂಡಂತೆ) ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವುದು ಹಾಗೂ ಲಕ್ಕೇನಹಳ್ಳಿ ಸಮತೋಲನಾ ಜಲಾಶಯದ ಬಾಕಿ ಶೇ.50 ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಈ ಯೋಜನೆಯನ್ನು 2027ರ ಅಂತ್ಯಕ್ಕೆ ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

ತುಂಗಭದ್ರಾ ಅಣೆಕಟ್ಟು ಭರ್ತಿ:ತುಂಗಭದ್ರಾ ಅಣೆಕಟ್ಟು ಮತ್ತೆ ತುಂಬುತ್ತಿರುವುದು ಸಂತಸದ ವಿಚಾರ. 105.79 ಸಾಮರ್ಥ್ಯದ ಅಣೆಕಟ್ಟಿನಲ್ಲಿ ಪ್ರಸ್ತುತ ಸುಮಾರು 98 ಟಿಎಂಸಿ ನೀರು ಸಂಗ್ರಹಗೊಂಡಿದೆ. ನಿವೃತ್ತ ಎಂಜಿನಿಯರ್ ಕನ್ನಯ್ಯ ನಾಯ್ಡು ಅವರ ಮಾರ್ಗದರ್ಶನದಲ್ಲಿ ಸುಮಾರು 108 ಜನ ಹಗಲು ರಾತ್ರಿ ಅಧಿಕಾರಿಕಾರಿಗಳು, ಕಾರ್ಮಿಕ ವರ್ಗ ಕೆಲಸ ಮಾಡಿದ್ದಾರೆ. ಇವರಿಗೆ ಗೌರವ ಸಲ್ಲಿಸಿ ಪ್ರಶಸ್ತಿ ಪತ್ರ ನೀಡಬೇಕು ಎಂದು ಸರ್ಕಾರ ನಿರ್ಧರಿಸಿದೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿ‌ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

"ತುಂಗಭದ್ರಾ ಕ್ರಸ್ಟ್ ಗೇಟ್ ಅವಘಡ ಸಂಭವಿಸಿದಾಗ ಸಾಕಷ್ಟು ಜನ ನೀರನ್ನು ಹೊರಗೆ ಬಿಡಬೇಡಿ ಎಂದರು. ನಾನು ತಂತ್ರಜ್ಞರ ಬಳಿ ಚರ್ಚೆ ನಡೆಸಿ ಅಣೆಕಟ್ಟಿನ ಉಳಿವಿಗಾಗಿ ಕಠಿಣ ನಿರ್ಧಾರ ತೆಗೆದುಕೊಂಡೆ. ರೈತರು ಬೆಳೆ ಹಾಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರೂ ನೀರನ್ನು ಹೊರಗೆ ಬಿಡಬೇಕಾಯಿತು. ಅವಘಡ ನಡೆದ 3 ಗಂಟೆಗಳಲ್ಲಿ ಗೇಟಿನ ವಿನ್ಯಾಸವನ್ನು ಮೂರು ಎಂಜಿನಿಯರಿಂಗ್ ಸಂಸ್ಥೆಗಳಿಗೆ ನೀಡಿ ತಯಾರಿಸಲು ಸೂಚನೆ ನೀಡಿದೆವು. ಈ ಕಾರ್ಯವನ್ನು ಇಡೀ ದೇಶವೇ ಗಮನಿಸುತ್ತಿತ್ತು. ಕೇವಲ 4 ದಿನಗಳಲ್ಲಿ ನೂತನ ಗೇಟ್ ಅನ್ನು ಅಳವಡಿಸಲಾಯಿತು. ಶೇ.50 ರಷ್ಟು ನೀರು ಪೋಲಾಯಿತು ಎಂದು ಹೇಳಿದರು.

ಎತ್ತಿನಹೊಳೆ ಕಾರ್ಯಕ್ರಮ ಮುಗಿದ ತಕ್ಷಣ ತುಂಗಭದ್ರಕ್ಕೂ ಬಾಗಿನ ಅರ್ಪಿಸಲಾಗುವುದು. ಆ ಭಾಗದ ರೈತರ ಪ್ರಾರ್ಥನೆಗೆ ಫಲ ಸಿಕ್ಕಿದೆ. ವಿರೋಧ ಪಕ್ಷಗಳ ನಾಯಕರು ಮಾಡಿದ ಟೀಕೆಗಳನ್ನು ಮಾಧ್ಯಮಗಳು ಜನರಿಗೆ ತಿಳಿಸಬೇಕು, ಜೊತೆಗೆ ನಮ್ಮ ಕೆಲಸವನ್ನೂ ಪ್ರಚಾರ ಮಾಡಬೇಕು. ಗೇಟ್ ತುಂಡಾದ ಅವಘಡ ಸಂಭವಿಸಿದ ಮೇಲೆ ಸೆಕ್ಷನ್ 38, 39 ಅಣೆಕಟ್ಟು ಸಂರಕ್ಷಣಾ ಕಾಯ್ದೆ ಪ್ರಕಾರ, ನೂತನವಾಗಿ ಸಂರಕ್ಷಣಾ ಪರಿಶೀಲನಾ ಸಮಿತಿಯನ್ನು ಸಿಡ್ಬ್ಲೂಸಿ ಮಾಜಿ ಅಧ್ಯಕ್ಷರಾಗಿದ್ದ ಎ.ಕೆ.ಬಜಾಜ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಈಗಾಗಲೇ ಸಮಿತಿ ಕೆಲಸ ಮಾಡುತ್ತಿದೆ. ತುಂಗಭದ್ರಾ ಗೇಟುಗಳ ವಿಚಾರವಾಗಿ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.

ಕಬಿನಿ ಅಣೆಕಟ್ಟು ಕೂಡ ಅಪಾಯದಲ್ಲಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿದ್ದವು. ಆ ನಂತರ ಈ ಸಮಿತಿ ಅಲ್ಲಿಗೂ ತೆರಳಿ ನೀರಿನ ಆಳಕ್ಕೆ ಇಳಿದು ಪರಿಶೀಲನೆ ನಡೆಸಿದೆ. ನನ್ನ ಸೂಚನೆಗಳನ್ನು ಕಾಯಬೇಡಿ, ಯಾವುದಾದರೂ ತೊಂದರೆ ಇದ್ದರೆ ಕೂಡಲೇ ಕಾರ್ಯಪ್ರವೃತ್ತರಾಗಿ ಎಂದು ಸೂಚಿಸಿದ್ದೇನೆ. ಈ ಸಮಿತಿ ವರದಿ ನೀಡುವ ತನಕ ಇದರ ಬಗ್ಗೆ ನಾನು ಮಾಹಿತಿ ನೀಡಲು ಆಗುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಸಿಎಂ ಕುರ್ಚಿ ಖಾಲಿಯಿಲ್ಲ, ದೇಶಪಾಂಡೆ ಸಿಎಂ ಸ್ಥಾನಕ್ಕೆ ಆಸೆ ಪಡುವುದು ತಪ್ಪಲ್ಲ: ಡಿ.ಕೆ.ಶಿವಕುಮಾರ್ - D K Shivakumar

Last Updated : Sep 2, 2024, 6:36 PM IST

ABOUT THE AUTHOR

...view details