ಕರ್ನಾಟಕ

karnataka

ETV Bharat / state

ಎಸ್.ಎಂ.ಕೃಷ್ಣ ನನ್ನ ರಾಜಕೀಯ ಬೆಳವಣಿಗೆಗೆ ಕಾರಣ: ಡಿಸಿಎಂ ಡಿ.ಕೆ.ಶಿವಕುಮಾರ್ - DCM D K SHIVAKUMAR

ವಿಧಾನಸಭೆಯಲ್ಲಿಂದು ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ದಿ.ಎಸ್.ಎಂ.ಕೃಷ್ಣ ಕುರಿತು ಮಾತನಾಡಿದರು.

dcm-d-k-shivakumar
ವಿಧಾನಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತು (ETV Bharat)

By ETV Bharat Karnataka Team

Published : Dec 12, 2024, 10:09 PM IST

ಬೆಂಗಳೂರು/ಬೆಳಗಾವಿ ಸುವರ್ಣ ವಿಧಾನಸೌಧ: ಎಸ್.ಎಂ.ಕೃಷ್ಣ ಅವರು ತಂದೆಯ ಸ್ಥಾನದಲ್ಲಿ ನಿಂತು ರಾಜಕೀಯವಾಗಿ ನನ್ನ ಬೆಳವಣಿಗೆಗೆ ಕಾರಣರಾದರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಮಂಗಳವಾರ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೊಂದಿಗಿನ ಒಡನಾಟದ ಕುರಿತು ಇಂದು ಸದನದಲ್ಲಿ ಮಾತನಾಡಿದ ಅವರು, ಕೃಷ್ಣ ಅವರನ್ನು ಆಧುನಿಕ ಕರ್ನಾಟಕ ನಿರ್ಮಾಣದ ಮಹಾಶಿಲ್ಪಿ ಎಂದು ಬಣ್ಣಿಸಿದರು.

92 ವರ್ಷಗಳ ತುಂಬು ಜೀವನ ಸಾಗಿಸಿ ಎಸ್.ಎಂ.ಕೃಷ್ಣ ನಿಧನರಾಗಿದ್ದಾರೆ. ವಿವೇಕಾನಂದರ ವಾಣಿಯಂತೆ, ಸಾಧನೆ ಇಲ್ಲದೆ ಸಾಯುವುದು ಸಾವಿಗೆ ಅವಮಾನ, ಆದರ್ಶ ಇಲ್ಲದೇ ಬದುಕುವುದು ಬದುಕಿಗೆ ಅವಮಾನ. ರಾಜ್ಯದ ಅಭಿವೃದ್ದಿಗೆ ಎಸ್.ಎಂ.ಕೃಷ್ಣ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತಾದ ಬೃಹತ್ ಸಾಕ್ಷಿಗಳು ನಮ್ಮ ಕಣ್ಮುಂದಿವೆ ಎಂದರು.

ನಾನು ರಾಜಕೀಯವಾಗಿ ಗುರುತಿಸಿಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಜೊತೆಗೆ. ನನ್ನ ಮತ್ತು ಕೃಷ್ಣ ಅವರ ಸಂಬಂಧ ಬೇರೆ ಸ್ವರೂಪದಲ್ಲಿತ್ತು. ಬಂಗಾರಪ್ಪ ಹೊಸ ಪಕ್ಷ ಕಟ್ಟಿದಾಗ ನನ್ನನ್ನು ಕರೆಯಲಿಲ್ಲ. ಕಾಂಗ್ರೆಸ್​ನಲ್ಲೇ​ ಉಳಿದುಕೊಂಡೆ. ಬಿಜೆಪಿಯವರು ಆಗ ನನ್ನನ್ನು ಕರೆಯಲಿಲ್ಲ. ಅಂದಿನಿಂದ ಎಸ್.ಎಂ.ಕೃಷ್ಣ ತಂದೆಯ ಸ್ಥಾನದಲ್ಲಿ ನಿಂತು ರಾಜಕೀಯವಾಗಿ ನನ್ನ ಬೆಳವಣಿಗೆಗೆ ಕಾರಣರಾದರು. ನಂತರದ ಸಂದರ್ಭದಲ್ಲಿ ಅವರ ಕುಟುಂಬದೊಂದಿಗೆ ಸಂಬಂಧ ಬೆಳೆಯಿತು ಎಂದು ಹೇಳಿದರು.

ಎಸ್.ಎಂ.ಕೃಷ್ಣ ಅವರು ತಂದೆ ಮಗನನ್ನು ಪೋಷಿಸುವಂತೆ ನನ್ನನ್ನು ಬೆಂಬಲಿಸಿದರು. ನನಗೂ ಅವರಿಗೂ ಒಂದೆರೆಡು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಈಗಲೂ ಆ ನಿರ್ಧಾರಗಳು ಸರಿಯಲ್ಲ ಎಂದು ಹೇಳುತ್ತೇನೆ. ಉಳಿದಂತೆ ನಮ್ಮಿಬ್ಬರ ಸಂಬಂಧ ಅವಿನಾಭಾವ ಎಂದರು.

ಎಸ್.ಎಂ.ಕೃಷ್ಣ ಅವರ ಸಾವು ನನಗೆ ದುಃಖ ತಂದಿಲ್ಲ. ತುಂಬು ಜೀವನದಲ್ಲಿ ಮುರ‍್ನಾಲ್ಕು ತಿಂಗಳಷ್ಟೇ ಅವರು ಅನಾರೋಗ್ಯದಲ್ಲಿದ್ದರು. ಉಳಿದಂತೆ ಅವರ ಉಡುಪು, ಜೀವನಶೈಲಿ ಎಲ್ಲವೂ ವರ್ಣನೀಯವಾಗಿತ್ತು ಎಂದು ಹೇಳಿದರು.

ಎಸ್.ಎಂ.ಕೃಷ್ಣ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುವಾಗ ನಾನು ಮತ್ತು ಟಿ.ಬಿ.ಜಯಚಂದ್ರ ದೆಹಲಿಗೆ ಹೋಗಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆವು. ಅಲ್ಲಿ ಸದಸ್ಯರಾಗಿದ್ದ ಜಿ.ವೈ.ಕೃಷ್ಣನ್ ಅವರ ಬದಲಾಗಿ ಎಸ್.ಎಂ.ಕೃಷ್ಣ ಅವರಿಗೆ ರಾಜ್ಯಸಭಾ ಟಿಕೆಟ್ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿತ್ತು. ಅದಕ್ಕೆ ಆರಂಭದಲ್ಲಿ ಪಿ.ವಿ.ನರಸಿಂಹರಾವ್ ಒಪ್ಪಲಿಲ್ಲ, ಅನಂತರ ಒಪ್ಪಿದರು ಎಂದು ಹಿಂದೆ ನಡೆದ ಘಟನೆಯನ್ನು ಮೆಲುಕು ಹಾಕಿದರು.

ಎಸ್‌‍.ಎಂ.ಕೃಷ್ಣ ಅವರು ಪಕ್ಷದ ಅಧ್ಯಕ್ಷರಾಗಿ ಪಾಂಚಜನ್ಯ ಮೊಳಗಿಸಿ ಅಧಿಕಾರಕ್ಕೆ ಬಂದರು. ನಾನು ಪ್ರದೇಶ ಕಾಂಗ್ರೆಸ್‌‍ ಅಧ್ಯಕ್ಷನಾದಾಗ ಅವರು ಮಾರ್ಗದರ್ಶನ ಮಾಡಿದ್ದರು. ಎಸ್‌‍.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಬಜೆಟ್‌ 26 ಸಾವಿರ ಕೋಟಿ ರೂ ಇತ್ತು. ಈಗ 3.50 ಲಕ್ಷ ಕೋಟಿಗೆ ಏರಿಕೆಯಾಗಿದೆ. ಆಗ ಪಂಚಾಯಿತಿಗೆ ನೀಡಲಾಗುತ್ತಿದ್ದ ಅನುದಾನವನ್ನು 5 ಲಕ್ಷಕ್ಕೆ ಹೆಚ್ಚಿಸಿದರು. ರೈತರಿಗೆ ಶ್ರೀಗಂಧ ಬೆಳೆಯಲು ಅವಕಾಶ ಮಾಡಿಕೊಟ್ಟರು. ಅಬಕಾರಿ ಲಾಬಿಗೆ ಮಣಿಯದೆ ಪಾನೀಯ ನಿಗಮವನ್ನು ಸ್ಥಾಪಿಸಿದರು. ಅವರೆಂದೂ ಸ್ವಾರ್ಥಕ್ಕೆ, ಸ್ನೇಹ ಸಂಬಂಧಕ್ಕೆ ಅಧಿಕಾರ ದುರ್ಬಳಕೆ ಮಾಡಿಕೊಂಡವರಲ್ಲ ಎಂಬುದಕ್ಕೆ ಇದೇ ಸಾಕ್ಷಿ. ವರನಟ ಡಾ.ರಾಜ್‌ಕುಮಾರ್‌ ಅಪಹರಣವಾದಾಗ ಮುಖ್ಯಮಂತ್ರಿಯಾಗಿದ್ದ ಕೃಷ್ಣ ಟೆನ್ಷನ್‌ನಲ್ಲಿದ್ದರು. ಆಗ ಪೊಲೀಸರಿಗೆ ಮುಕ್ತ ಅವಕಾಶ ಮಾಡಿಕೊಡದೆ ಸಂಧಾನದ ಮೂಲಕ ಪ್ರಯತ್ನ ಮಾಡಲಾಯಿತು ಎಂಬುದನ್ನು ಡಿ.ಕೆ.ಶಿವಕುಮಾರ್‌ ನೆನಪು ಮಾಡಿಕೊಂಡರು.

ದೇಶಕ್ಕೆ ಮಾದರಿಯಾದ ಐಟಿ ನೀತಿ, ಗ್ರಾಮ ಪಂಚಾಯಿತಿಗಳ ಅನುದಾನವನ್ನು 1 ಲಕ್ಷದಿಂದ 5 ಲಕ್ಷ ರೂ.ಗೆ ಏರಿಕೆ, ಜಿಲ್ಲಾ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಬೇಲೂರು ಘೋಷಣೆ, ರೈತರಿಗೆ ಶ್ರೀಗಂಧ ಬೆಳೆಯಲು ಅವಕಾಶ, ಕರ್ನಾಟಕ ರಾಜ್ಯ ಪಾನೀಯ ನಿಗಮ ಸ್ಥಾಪನೆ, ಮಧ್ಯಾಹ್ನದ ಬಿಸಿಯೂಟ, ಬೆಂಗಳೂರು ಮೆಟ್ರೋ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಸೇರಿದಂತೆ ಹಲವು ಮಹತ್ತರ ಸಾಧನೆಗಳಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾರಣೀಕರ್ತರಾಗಿದ್ದಾರೆ. ಶಿಕ್ಷಣ ಸುಸಂಸ್ಕೃತ ಬದುಕಿಗೆ ನಾಂದಿಯಾಗುತ್ತದೆ ಎಂದು ಅವರು ನಂಬಿದ್ದರು. ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಮುಂದಾದರು. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರಂತೆ ವಿಕಾಸಸೌಧ ಹಾಗೂ ಉದ್ಯೋಗ ಸೌಧಗಳನ್ನು ಸಹ ನಿರ್ಮಿಸಿದರು ಎಂದು ಹೇಳಿದರು.

ಮೆಟ್ರೋ ರೈಲು ಯೋಜನೆ ಜಾರಿಗೆ ತರಲು ಕೂಡ ಅವರೂ ಕಾರಣಕರ್ತರಾಗಿದ್ದರು ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಶಾಲೆ ಬಿಡುವ ಮಕ್ಕಳನ್ನು ಮರಳಿ ತರುವ ಉದ್ದೇಶದಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆ ಪ್ರಾರಂಭಿಸಿದರು. ನಾನು ವಿರೋಧ ಪಕ್ಷದ ನಾಯಕ ಸ್ಥಾನ ಬೇಡ ಎಂದಾಗ ಬೈಯ್ದು ಬುದ್ಧಿಮಾತು ಹೇಳಿದರು. ಅವರ ಆಡಳಿತಾವಧಿಯಲ್ಲಿ ಸಾಕ್ಷಿ ಬಿಟ್ಟುಹೋಗಿದ್ದಾರೆ. ಅವರ ಆದರ್ಶ ನಮಗೆ ದಾರಿದೀಪ. ಕಾವೇರಿ ವಿಚಾರದಲ್ಲಿ ಪಾದಯಾತ್ರೆ ಮಾಡಿ ಆನಂತರದ ಬೆಳವಣಿಗೆಯಲ್ಲಿ ರಾಜೀನಾಮೆ ಕೊಡುವುದಾಗಿ ಹೇಳಿದರು. ಅದನ್ನು ತಡೆದು ಮುಖ್ಯಮಂತ್ರಿ ಸ್ಥಾನದಲ್ಲೇ ಇರಿಸುವ ಪ್ರಯತ್ನ ಮಾಡಿದೆ. ನನಗೆ ಕೋಟು ಹಾಕುವುದನ್ನು ಕಲಿಸಿದವರೇ ಎಸ್‌‍.ಎಂ.ಕೃಷ್ಣ. ಶಿಸ್ತುಬದ್ಧ ಜೀವನ, ಸಂಸ್ಕಾರ, ಸಂಸ್ಕೃತಿ ಎಲ್ಲವೂ ಅವರಲ್ಲಿತ್ತು ಎಂದು ಹೇಳಿದರು.

ಇದನ್ನೂ ಓದಿ:ಸಿಲಿಕಾನ್​​ ಸಿಟಿಗೆ ಬುನಾದಿ ಹಾಕಿದ ನಾಯಕ SM ಕೃಷ್ಣ: ಸಾವಿರ ಕೋಟಿಯಿಂದ ಲಕ್ಷ ಕೋಟಿ ವರೆಗಿನ ರಾಜ್ಯದ ಐಟಿಗಾಥೆ!

ABOUT THE AUTHOR

...view details