ಡಿಸಿಎಂ ಡಿ ಕೆ ಶಿವಕುಮಾರ್ (ETV Bharat) ಬೆಂಗಳೂರು :ರಾಹುಲ್ ಗಾಂಧಿ ಹೆಸರನ್ನು ಪ್ರಜ್ವಲ್ ರೇವಣ್ಣ ವಿಡಿಯೋ ಸಂದೇಶದಲ್ಲಿ ಪ್ರಸ್ತಾಪಿಸಿದ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ. ಕೆ ಶಿವಕುಮಾರ್ ಅವರು,ಕಾಲ ಎಲ್ಲದಕ್ಕೂ ಉತ್ತರ ನೀಡುತ್ತೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಮೇ 31ಕ್ಕೆ ವಾಪಸ್ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ಅವರಿಗೆ ಬೇರೆ ಏನು ಆಯ್ಕೆಗಳಿತ್ತು. ಕಾನೂನು ಪ್ರಕಾರ ಏನು ಕ್ರಮ ಆಗಬೇಕು ಅದು ಆಗಲಿದೆ ಎಂದು ತಿಳಿಸಿದರು.
ಪ್ರಜ್ವಲ್ ರೇವಣ್ಣ ವಿಡಿಯೋ ಸಂದೇಶದಲ್ಲಿ ಇದು ಕಾಂಗ್ರೆಸ್ ಪಿತೂರಿ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಪಾಪ ಅವರು ಏನು ಬೇಕಾದರೂ ಹೇಳಿಕೊಳ್ಳಲಿ. ಬಾಯಿಗೆ ಬೀಗ ಹಾಕೋದಕ್ಕೆ ಆಗುವುದಿಲ್ಲ. ಅವರ ಬಾಯಲ್ಲಿ ಏನು ಬೇಕಾದರೂ ಮಾತನಾಡಲಿ ಎಂದು ತಿಳಿಸಿದರು.
ಪ್ರಜ್ವಲ್ ರೇವಣ್ಣ ಹೇಳಿದ್ದೇನು? :ವಿದೇಶದಿಂದ ವಿಡಿಯೋ ಬಿಡುಗಡೆ ಮಾಡಿದ ಪ್ರಜ್ವಲ್, ಏಪ್ರಿಲ್ 26ರಂದು ಚುನಾವಣೆ ನಡೆದ ಸಂದರ್ಭದಲ್ಲಿ ನನ್ನ ವಿರುದ್ದ ಯಾವುದೇ ಪ್ರಕರಣಗಳಿರಲಿಲ್ಲ. ಎಸ್ಐಟಿ ಸಹ ರಚನೆಯಾಗಿರಲಿಲ್ಲ. 26ನೇ ತಾರೀಖಿನಂದು ನಾನು ವಿದೇಶಕ್ಕೆ ತೆರಳುವುದು ಮೊದಲೇ ನಿಗದಿಯಾಗಿತ್ತು. ಆದ್ದರಿಂದ ನಾನು ಹೋದೆ. ಅದಾದ 2-3 ದಿನಗಳ ಬಳಿಕ ನನಗೆ ಸುದ್ದಿ ಮಾಧ್ಯಮಗಳಲ್ಲಿ ನೋಡಿದಾಗ ವಿಚಾರ ಗೊತ್ತಾಯಿತು ಮತ್ತು ಎಸ್ಐಟಿಯಿಂದ ನೋಟಿಸ್ ಕೂಡಾ ನೀಡುವ ಕೆಲಸ ಆಯಿತು.
ನೋಟಿಸ್ಗೂ ಸಹ ನಾನು 7 ದಿನಗಳ ಕಾಲಾವಕಾಶ ನೀಡುವಂತೆ ನನ್ನ ಎಕ್ಸ್ ಖಾತೆಯ ಮೂಲಕ ಹಾಗೂ ನನ್ನ ವಕೀಲರ ಮೂಲಕ ಮನವಿ ಮಾಡಿದ್ದೆ. ನಾನು ಕಾಲಾವಕಾಶ ಕೇಳಿದ ಮಾರನೇ ದಿನದಿಂದಲೇ ರಾಹುಲ್ ಗಾಂಧಿ ಸೇರಿದಂತೆ ಕೆಲ ಕಾಂಗ್ರೆಸ್‌ನ ನಾಯಕರು ಈ ವಿಚಾರವನ್ನ ವೇದಿಕೆಗಳಲ್ಲಿ ಮಾತನಾಡುವ ಮೂಲಕ ಪ್ರಚಾರಕ್ಕೆ ಬಳಸಿಕೊಂಡರು. ರಾಜಕೀಯ ಪಿತೂರಿ ಮಾಡುವ ಕೆಲಸ ಮಾಡಿದರು. ಇದೆಲ್ಲವನ್ನೂ ನೋಡಿ ನಾನು ಖಿನ್ನನಾಗಿ, ಯಾರ ಸಂಪರ್ಕಕ್ಕೂ ಸಿಗದೇ ಉಳಿದೆ. ಆದ್ದರಿಂದ ನಾನು ಎಲ್ಲರ ಕ್ಷಮೆ ಕೇಳುತ್ತೇನೆ ಎಂದು ಪ್ರಜ್ವಲ್ ರೇವಣ್ಣ ತಾವು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :Watch.. ಮೇ 31ರಂದು ವಿಚಾರಣೆಗೆ ಹಾಜರಾಗುತ್ತೇನೆ: ವಿದೇಶದಿಂದ ವಿಡಿಯೋ ಮೂಲಕ ಪ್ರಜ್ವಲ್ ರೇವಣ್ಣ ಹೇಳಿಕೆ - MP Prajwal Revanna