ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಕೆರೆ ಒತ್ತುವರಿ ಯಾವುದೇ ಮುಲಾಜಿಲ್ಲದೆ ತೆರವು : ಡಿ ಕೆ ಶಿವಕುಮಾರ್ - Lake encroachment - LAKE ENCROACHMENT

ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬೆಂಗಳೂರು ಕೆರೆ ಒತ್ತುವರಿ ಕುರಿತು ಮಾತನಾಡಿದರು. ಬೆಂಗಳೂರು ನಗರದ ಶಾಸಕರ ಸಭೆಯಲ್ಲಿ ಕೆರೆ ಒತ್ತುವರಿ ತೆರವುಗೊಳಿಸುವ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದರು.

Assembly
ವಿಧಾನಸಭೆ (ETV Bharat)

By ETV Bharat Karnataka Team

Published : Jul 23, 2024, 4:42 PM IST

ಬೆಂಗಳೂರು :ಬೆಂಗಳೂರು ಕೆರೆ ಒತ್ತುವರಿಯನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಇಂದು ವಿಧಾನಸಭೆಯಲ್ಲಿ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಎಸ್. ಆರ್ ವಿಶ್ವನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನ ಮಂಡಲದ ಅಧಿವೇಶನ ಮುಗಿದ ಬಳಿಕ ನಡೆಸಲಿರುವ ಬೆಂಗಳೂರು ನಗರದ ಶಾಸಕರ ಸಭೆಯಲ್ಲಿ ಕೆರೆ ಒತ್ತುವರಿ ತೆರವುಗೊಳಿಸುವ ಬಗ್ಗೆಯೂ ಚರ್ಚೆ ಮಾಡಲಾಗುವುದು ಎಂದರು.

ತೀವ್ರ ಬರದ ಹಿನ್ನೆಲೆಯಲ್ಲಿ ಕಳೆದ ಬೇಸಿಗೆಯಲ್ಲಿ ಬೆಂಗಳೂರಿನ ಏಳು ಸಾವಿರ ಕೊಳವೆ ಬಾವಿಗಳು ಬತ್ತಿದ್ದವು. ಅಂತರ್ಜಲ ಸಂರಕ್ಷಣೆಗೆ ಕೆರೆಗಳನ್ನು ಉಳಿಸಬೇಕಾಗಿದೆ. ಬೆಂಗಳೂರು ಅಭಿವೃದ್ಧಿ ಕುರಿತಂತೆ ಜು. 27 ರಿಂದ ಸಭೆ ಕರೆದಿದ್ದು, ಕೆರೆಗಳನ್ನು ಉಳಿಸುವ ಬಗ್ಗೆ ಚರ್ಚಿಸಿ ತೀರ್ಮಾನಿಸೋಣ ಎಂದು ಹೇಳಿದರು.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ, ಬೆಂಗಳೂರಿನ ಹೆಸರುಘಟ್ಟ ಕೆರೆಗೆ 0.50 ಟಿಎಂಸಿ ಅಡಿ ನೀರನ್ನು ದೊಡ್ಡಬಳ್ಳಾಪುರ ತಾಲೂಕಿನ ಮಾಡೇಶ್ವರ ಗ್ರಾಮದ ಸಮೀಪ ನಿರ್ಮಿಸಿರುವ ವಿತರಣಾ ತೊಟ್ಟಿ -5 ರಿಂದ ಬಲ್ಕ್ ಪೂರೈಕೆ ಮಾಡಲು ವಿಶ್ವೇಶ್ವರಯ್ಯ ಜಲ ನಿಗಮದಿಂದ ಯೋಜಿಸಲಾಗಿದೆ.

ಈ ಕಾಮಗಾರಿ 2025ರ ಅಕ್ಟೋಬರ್ 31ಕ್ಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಅವಧಿಯಲ್ಲೇ ಹೆಸರುಘಟ್ಟ ಕೆರೆಗೆ ನೀರು ತುಂಬಿಸುವ ಫೀಡರ್ ಪೈಪ್ಲೈನ್ ಕಾಮಗಾರಿಯನ್ನು ಬೆಂಗಳೂರು ಜಲಮಂಡಳಿ ವತಿಯಿಂದ ಕೈಗೊಳ್ಳಲಾಗುವುದು ಎಂದು ಹೇಳಿದರು.

ಹೆಸರುಘಟ್ಟ ಕೆರೆಯಲ್ಲಿ ಹೂಳೆತ್ತುವ ಕಾರ್ಯ ಕೈಗೊಂಡಿಲ್ಲ. ಹೆಸರುಘಟ್ಟ ನೀರು ಸರಬರಾಜು ಯೋಜನೆಯನ್ನು ಪುನಶ್ಚೇತನಗೊಳಿಸುವ ಕಾಮಗಾರಿಯನ್ನು ಬೆಂಗಳೂರು ಜಲಮಂಡಳಿ ವತಿಯಿಂದ ಕೈಗೊಳ್ಳಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಅದರಲ್ಲಿಯೇ ಹೂಳೆತ್ತಲು ಅವಕಾಶವಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ವಿಶ್ವನಾಥ್, ಎತ್ತಿನಹೊಳೆ ಯೋಜನೆಗೆ ಹಣದ ಹೊಳೆಯೇ ಹರಿದಿದೆ. ಆದರೂ ಕಾಮಗಾರಿ ಮಾತ್ರ ಮಂದಗತಿಯಲ್ಲಿ ಸಾಗಿದೆ. ಹೆಸರುಘಟ್ಟ ಕೆರೆಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಸುರೇಶ್ ಕುಮಾರ್ ಮಾತನಾಡಿ, ಬೆಂಗಳೂರು ಜಲ ಮಂಡಳಿಗೆ ಕೆರೆ ಸಂರಕ್ಷಣೆ ಜವಾಬ್ದಾರಿ ವಹಿಸಿ ಎಂಬ ಸಲಹೆ ಮಾಡಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಎತ್ತಿನಹೊಳೆ ಯೋಜನೆಯ ಕಾಮಗಾರಿಯು ಕಳಪೆಯಾಗಿದೆ. ಪ್ರಾಯೋಗಿಕವಾಗಿ ನೀರು ಪೂರೈಸಿದಾಗ ಕಳೆಪೆಯಾಗಿರುವುದು ಕಂಡುಬಂದಿದೆ. 8 ಸಾವಿರ ಕೋಟಿ ರೂ.ಗಳ ಈ ಯೋಜನೆ ಒಂದು ಲಕ್ಷ ಕೋಟಿ ರೂ.ಗೆ ತಲುಪಿದರೂ ಆಶ್ಚರ್ಯ ಪಡಬೇಕಿಲ್ಲ ಎಂದರು.

ಇದನ್ನೂ ಓದಿ :ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮಳೆ ಹಾನಿ ವಿಚಾರ ; ಪರಿಹಾರ ಹೆಚ್ಚಳಕ್ಕೆ ಬಿ ವೈ ವಿಜಯೇಂದ್ರ ಆಗ್ರಹ - rain damage compensation

ABOUT THE AUTHOR

...view details