ಬೆಳಗಾವಿ : ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿಯ ನಾಲ್ವರು ಭಕ್ತರ ಪೈಕಿ ಇಬ್ಬರ ದೇಹಗಳನ್ನು ದೆಹಲಿಯಿಂದ ನೇರವಾಗಿ ಬೆಳಗಾವಿಗೆ ಏರ್ ಲಿಫ್ಟ್ ಮಾಡಲಾಗುವುದು. ಇನ್ನಿಬ್ಬರ ಶವಗಳನ್ನು ದೆಹಲಿಯಿಂದ ಗೋವಾಗೆ ಏರ್ ಲಿಫ್ಟ್ ಮಾಡಿ, ಅಲ್ಲಿಂದ ಬೆಳಗಾವಿಗೆ ಆಂಬ್ಯುಲೆನ್ಸ್ ಮೂಲಕ ತರಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಹಿತಿ ನೀಡಿದರು.
ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಅವರು, "ಮಹಾದೇವಿ ಬಾವನೂರ ಹಾಗೂ ಅರುಣ ಕೋಪರ್ಡೆ ಅವರ ಶವಗಳು ಸರಿಯಾದ ಸಮಯಕ್ಕೆ ದೆಹಲಿಗೆ ತಲುಪಿವೆ. ಹಾಗಾಗಿ, ಮಧ್ಯಾಹ್ನದ ವಿಮಾನದಲ್ಲಿ ದೆಹಲಿಯಿಂದ ನೇರವಾಗಿ ಬೆಳಗಾವಿಗೆ ತರಲಾಗುತ್ತಿದೆ. 3.20ಕ್ಕೆ ವಿಮಾನ ದೆಹಲಿಯಿಂದ ಹೊರಟಿದ್ದು, ಸಂಜೆ 5.30ರ ವೇಳೆಗೆ ಬೆಳಗಾವಿಗೆ ಬಂದು ಮುಟ್ಟಲಿದೆ'' ಎಂದರು.
ಅದೇ ರೀತಿ ಜ್ಯೋತಿ ಹತ್ತರವಾಟ ಹಾಗೂ ಅವರ ಪುತ್ರಿ ಮೇಘಾ ಅವರ ಶವಗಳು ತಡವಾಗಿ ದೆಹಲಿ ತಲುಪಿದವು. ಹಾಗಾಗಿ, ದೆಹಲಿಯಿಂದ ಗೋವಾಗೆ ಸಂಜೆ 6ಕ್ಕೆ ಇನ್ನೊಂದು ವಿಮಾನದಲ್ಲಿ ಇವರಿಬ್ಬರ ಶವಗಳು ತಲುಪಲಿವೆ. ಬಳಿಕ ಗೋವಾದಿಂದ ಆಂಬ್ಯುಲೆನ್ಸ್ ಮೂಲಕ ಬೆಳಗಾವಿಗೆ ತರಲಾಗುತ್ತದೆ. ರಾತ್ರಿ 8.30ಕ್ಕೆ ಗೋವಾದಿಂದ ರಸ್ತೆ ಮಾರ್ಗವಾಗಿ ಬೆಳಗಾವಿಗೆ ಮೃತದೇಹಗಳನ್ನು ತರಲಾಗುತ್ತದೆ ಎಂದು ತಿಳಿಸಿದರು.