ದಾವಣಗೆರೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದಾರೆ. ಕೇಂದ್ರ ಹಣಕಾಸು ಸಚಿವೆ ಲೆಕ್ಕಾಚಾರದ ಮೇಲೆ ಬೆಣ್ಣೆನಗರಿ ಮಂದಿಯ ನಿರೀಕ್ಷೆ ಬೆಟ್ಟದಷ್ಟಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಪ್ರತಿ ಬಜೆಟ್ನಲ್ಲೂ ದಾವಣಗೆರೆ ಜನರಿಗೆ ನಿರಾಸೆ ಮೂಡಿಸಿಕೊಂಡು ಬರಲಾಗಿತ್ತು. ಈ ಬಜೆಟ್ನಲ್ಲೂ ದಾವಣಗೆರೆಗೆ ಶೂನ್ಯ ಕೊಡುಗೆ ನೀಡಲಾಗಿದೆ. ನಿರ್ಮಲಾ ಸೀತಾರಾಮನ್ ಅವರು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದರೂ, ಕರ್ನಾಟಕಕ್ಕೆ ಪ್ರಾಶಸ್ತ್ಯ ಕೊಡಲಿಲ್ಲ" ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾಮಿನಾಥನ್ ವರದಿ ಜಾರಿ ಆಗಿಲ್ಲ, ಎಂಎಸ್ಪಿ ಬೆಲೆ ಖಾತ್ರಿ ಕನಸು :ಇಂದು ನಿರ್ಮಲಾ ಸೀತಾರಾಮನ್ ಅವರು ಮಂಡನೆ ಮಾಡಿರುವ ಬಜೆಟ್ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ. ರೈತ ಮುಖಂಡ ಬಲ್ಲೂರು ರವಿಕುಮಾರ್ ಪ್ರತಿಕ್ರಿಯಿಸಿ, "ಬಜೆಟ್ನಲ್ಲಿ ಸ್ವಾಮಿನಾಥನ್ ವರದಿ ಜಾರಿ ಆಗ್ಬೇಕಿತ್ತು. ಎಂಎಸ್ಪಿ ಬೆಲೆ ಖಾತ್ರಿ ಮಾಡ್ಬೇಕಿತ್ತು. ಅದನ್ನು ಈ ಬಜೆಟ್ನಲ್ಲಿ ಘೋಷಣೆ ಮಾಡಿಲ್ಲ. ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಹೋದ್ರು, ಅದರೆ ಕೊಟ್ಟಿದ್ದು ಬಿಹಾರಕ್ಕೆ ಸೇರಿದ್ದಂತೆ ಉತ್ತರ ಭಾರತದ ರಾಜ್ಯಗಳಿಗೆ. ಬಿಹಾರಕ್ಕೆ ಆಹಾರ ಸಂಸ್ಕರಣಾ ಘಟಕ, ಐಟಿ ಕೇಂದ್ರ ಕೊಟ್ಟಿದ್ದಾರೆ. ಮೂರು ಬಜೆಟ್ ಮಂಡನೆ ಮಾಡಲು ಶಕ್ತಿ ಕೊಟ್ಟಿದ್ದು ನಮ್ಮ ರಾಜ್ಯ. ದಾವಣಗೆರೆ ರೈತರಿಗೆ ಸಂಸ್ಕರಣಾ ಘಟಕ ಬೇಕಾಗಿತ್ತು, ಕೈಗಾರಿಕೆಗಳು, ಕಾಟನ್ ಇಂಡಸ್ಟ್ರೀಸ್, ಮೆಕ್ಕೆಜೋಳ, ಭತ್ತ, ತರಕಾರಿ, ಕಬ್ಬು ಸಂಸ್ಕರಣಾ ಘಟಕಗಳು ಬೇಕು. ಅವು ಯಾವುವನ್ನೂ ಕೊಡಲಿಲ್ಲ. ರೈತರು ಕೂಲಿ ಕಾರ್ಮಿಕರು ಬದುಕುವುದೇ ಕಷ್ಟ ಆಗಿದೆ" ಎಂದರು.
ಬಜೆಟ್ ಕುರಿತು ದಾವಣಗೆರೆ ರೈತರ ಪ್ರತಿಕ್ರಿಯೆ (ETV Bharat) ಹೋರಾಟಗಾರ ಕಾಂಮ್ರೇಡ್ ವಾಸು ಆವರಗೆರೆ ಅವರು ಪ್ರತಿಕ್ರಿಯಿಸಿ "ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಿದ್ದಾರೆ. ಅವರ ಒಲವು ದಕ್ಷಿಣ ರಾಜ್ಯಗಳ ಬದಲು ಉತ್ತರ ಭಾರತದ ಕಡೆ ಹೆಚ್ಚು ಇದೆ. ದಾವಣಗೆರೆಗೆ ವಿಮಾನ ನಿಲ್ಧಾಣ ಇದ್ದಿದ್ದರೆ ಕಾರ್ಖಾನೆಗಳು, ಕೈಗಾರಿಕೆಗಳು ಬರುತ್ತಿದ್ದವು. ಅದು ಮರೀಚಿಕೆಯಾಗಿದೆ. ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಹೋದ ಹಣಕಾಸು ಮಂತ್ರಿ ರಾಜ್ಯದ ಬಗ್ಗೆ ಅಸಡ್ಡೆ ತೋರಿದ್ದಾರೆ. ಈ ಬಜೆಟ್ನಲ್ಲಿ ರಾಜ್ಯ ಹಾಗು ನಮ್ಮ ಜಿಲ್ಲೆ ದಾವಣಗೆರೆಯನ್ನು ಕಡೆಗಾಣಿಸಿದ್ದಾರೆ. ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರ ಸಹಾಯಧನ, ಪಿಂಚಣಿ ಏರಿಕೆ ಆಗಿಲ್ಲ. ಬಿಸಿಯೂಟದ ಯೋಜನೆ ಎಲ್ಲಿದೆಯೋ ಅಲ್ಲಿಯೇ ಇದೆ. ಕಾರ್ಮಿಕರಿಗೆ, ರೈತರಿಗೆ ಭದ್ರತೆ ನೀಡುವಲ್ಲಿ ಈ ಬಜೆಟ್ ವಿಫಲ ಆಗಿದೆ. ದಾವಣಗೆರೆಗೆ ಮೆಡಿಕಲ್ ಕಾಲೇಜು, ಐಟಿ ಹಬ್ ಬೇಕಿತ್ತು. ಅದು ಕೂಡ ಈ ಬಜೆಟ್ನಲ್ಲಿ ಘೋಷಣೆ ಆಗಲಿಲ್ಲ. ಕಾರ್ಮಿಕರಿಗೆ, ರೈತರಿಗೆ ಪೆನ್ಷನ್ ಕೂಡ ಮರೀಚಿಕೆಯಾಗಿದೆ" ಎಂದರು.
ಮಂಡನೆ ಮಾಡಿರುವ ಬಜೆಟ್ ಕಟ್ಟಕಡೆಯವರಿಗೆ ತಲುಪುವುದಿಲ್ಲ :ಕೇಂದ್ರ ಸರ್ಕಾರದ ಬಜೆಟ್ನ್ನು ಸ್ವಾಗತ ಮಾಡುತ್ತೇವೆ. ನಿರ್ಮಲಾ ಸೀತಾರಾಮನ್ ಅವರು ಮಂಡನೆ ಮಾಡಿರುವ ಬಜೆಟ್ ಕಟ್ಟಕಡೆಯವರಿಗೆ ತಲುಪುವುದಿಲ್ಲ. ರೈತರಿಗೆ ಎಷ್ಟು ಕೊಟ್ಟಿದ್ದಾರೆ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ರೈತರಿಗೆ ಬ್ಯಾಂಕ್ಗಳಲ್ಲಿ ಸಾಲ ಸಿಗುವುದು ಕಷ್ಟ ಆಗಿದೆ. ಎರಡು ಮೂರು ಎಕರೆ ಭೂಮಿಯಿರುವ ರೈತರಿಗೆ ಬಜೆಟ್ನಿಂದ ಉಪಯೋಗ ಆಗಿಲ್ಲ. ಬರೇ ಘೋಷಣೆ ಮಾಡಿದರೆ ಸಾಲದು ಮಂಡನೆ ಮಾಡಿರುವ ಬಜೆಟ್ನ್ನು ಹಳ್ಳಿಗಾಡಿಗೆ ತಲುಪಿದರೆ ಸಾರ್ಥಕ ಆದಂತೆ" ಎಂದು ರೈತ ಆಂಜೀನಪ್ಪ ಪೂಜಾರ್ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕೇಂದ್ರ ಬಜೆಟ್ಗೆ ಮಿಶ್ರ ಪ್ರತಿಕ್ರಿಯೆ : ಉತ್ತಮ ಬಜೆಟ್, ಆದ್ರೆ ಕರ್ನಾಟಕಕ್ಕೆ ಕೊಡುಗೆ ಶೂನ್ಯ