ದಾವಣಗೆರೆ:ಸ್ನೇಕ್ ಬಸವರಾಜ್, ಹಾವು ಹಿಡಿಯುವುದೇ ಇವರ ಕಾಯಕ. ಕಳೆದ 14 ವರ್ಷಗಳಿಂದ ಹಾವು ರಕ್ಷಣೆ ಮಾಡುತ್ತಾ ಬಂದಿರುವ ಇವರು ಇಡೀ ದಾವಣಗೆರೆ ಜಿಲ್ಲೆಗೆ ಚಿರಪರಿಚಿತ. ಯಾವುದೇ ಸಮಯವಾದರೂ ಸರಿ, ಹಾವು ಹಿಡಿಯಲು ಕರೆದರೆ ಸಾಕು ತಕ್ಷಣ ಹಾಜರಾಗುತ್ತಾರೆ. ಆದರೆ, ಬಡತನ, ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಾವು ಪಡುತ್ತಿರುವ ಕಷ್ಟಗಳನ್ನು ಈಟಿವಿ ಭಾರತದ ಜೊತೆ ಹಂಚಿಕೊಂಡಿರುವ ಉರಗಪ್ರೇಮಿ, ಸರ್ಕಾರ ನಮ್ಮ ಸಹಾಯಕ್ಕೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.
''ಹಾವುಗಳ ರಕ್ಷಣೆಯೇ ನನ್ನ ಮೊದಲ ಕಾರ್ಯ ಎನ್ನುವ ಬಸವರಾಜ್, ತಾನು ಈ ಕಾರ್ಯಕ್ಕೆ ಕಳೆದ 14 ವರ್ಷಗಳಲ್ಲಿ ಒಂದು ನಯಾ ಪೈಸೆ ಕೂಡ ಪಡೆದಿಲ್ಲ. ಬಡತನ ಬೆನ್ನುಬಿದ್ದು ಕಾಡುತ್ತಿದೆ, ಸರ್ಕಾರ ತಮಗೆ ಆಸರೆಯಾಗಬೇಕು. ರಕ್ಷಣೆ ವೇಳೆ ಹಾವು ಕಚ್ಚಿದರೆ ಸರ್ಕಾರದಿಂದ ಚಿಕಿತ್ಸೆ, ಒಂದು ಸೂರು ಕಲ್ಪಿಸುವಂತೆ'' ಮನವಿ ಮಾಡಿದ್ದಾರೆ.
ನಗರದ ಆನೆಕೊಂಡ ಮಟ್ಟಿಕಲ್ಲು ನಿವಾಸಿಯಾಗಿರುವ ಬಸವರಾಜ್, 14 ವರ್ಷಗಳಲ್ಲಿ ಬರೋಬ್ಬರಿ 5,434 ಹಾವುಗಳನ್ನು ರಕ್ಷಣೆ ಮಾಡಿರುವುದು ಗಮನಾರ್ಹ. ಇನ್ನು ಈ ಕೆಲಸಕ್ಕೆ ಯಾವುದೇ ಹಣ ನಿರೀಕ್ಷಿಸದೇ ಇರುವುದು ಮತ್ತೊಂದು ಗಮನಿಸಬೇಕಾದ ಸಂಗತಿ. ಎಲೆಮರೆಯ ಕಾಯಿಯಂತೆ ಜೀವನ ಸಾಗಿಸಿಕೊಂಡು ಬರುತ್ತಿರುವ ಅವರ ಈ ಸೇವೆ ಪರಿಗಣಿಸಿ ಕಾಯಕಯೋಗಿ ಬಸವಶ್ರೀ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿದೆ. ಬಡತನದಲ್ಲೇ ಬೆಳೆದು ಬಂದಿರುವ ಬಸವರಾಜ್ ಅವರು ರೈಸ್ ಮಿಲ್ನಲ್ಲಿ ಮೆಕ್ಯಾನಿಕ್ ಆಗಿ ಬದುಕು ಕಟ್ಟಿಕೊಂಡಿದ್ದರು. ಇದೀಗ ಹಾವು ಹಿಡಿಯುವುದನ್ನು ಕರಗತ ಮಾಡಿಕೊಂಡು ಅದನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ.
ಸಹಾಯದ ನಿರೀಕ್ಷೆಯಲ್ಲಿ ಬಸವರಾಜ್: ತಾನು ಈಗಾಗಲೇ ಮೂರು ಬಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದು, ಆಸ್ಪತ್ರೆಗೂ ಸೇರಿದ್ದೆ. ಆಗ ಚಿಕಿತ್ಸೆಗೆ ಹಣ ಹೊಂದಿಸಲು ಸಾಕಷ್ಟು ಪರದಾಡಿದ್ದೆ. ಸ್ನೇಹಿತರು ನನ್ನನ್ನು ಬದುಕುಳಿಸಿದರು. 65 ಸಾವಿರ ರೂಪಾಯಿ ಖರ್ಚು ಮಾಡಿ ನನ್ನ ಪ್ರಾಣ ಉಳಿಸಿದರು. ಹಾವು ಹಿಡಿಯುವಾಗ ಕಚ್ಚಿದರೆ ಚಿಕಿತ್ಸೆ ಪಡೆಯಲು ನಮಗೆ ಸರ್ಕಾರ ಆಸರೆಯಾಗಬೇಕಿದೆ. ಬಡತನದ ನಡುವೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪರದಾಡುತ್ತಿದ್ದು, ಇರಲು ಸೂರು ಕೂಡ ಇಲ್ಲ. ಇಲ್ಲಿಯ ತನಕ ನಾಗರಹಾವು, ಕಡ್ಡಿ ಹಾವು, ಕೆರೆ ಹಾವು, ರಾಮಬಾಣ, ಊರು ಮಂಡಲ, ಕೊಳಕಮಂಡಲ ಸೇರಿದಂತೆ ನಾನಾ ಜಾತಿಯ ಒಟ್ಟು 5,434 ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದೇನೆ. ವೃತ್ತಿಯಲ್ಲಿ ರೈಸ್ ಮಿಲ್ ಮೆಕಾನಿಕ್ ಆಗಿದ್ದಾಗ ಹಾವು ಹಿಡಿಯುವುದನ್ನು ಕಲಿತೆ. ಅದರೆ, ಸರ್ಕಾರ ನಮ್ಮನ್ನು ಗುರತಿಸುತ್ತಿಲ್ಲ. ಸರ್ಕಾರ ಗುರಿಸಬೇಕಾಗಿದೆ. ಸರ್ಕಾರದಿಂದ ಹಾವು ಹಿಡಿಯಲು ಲೈಸೆನ್ಸ್ ಕೋಡಬೇಕು. ಇದಕ್ಕಾಗಿ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. 14 ವರ್ಷಗಳಲ್ಲಿ ಲೈಸೆನ್ಸ್ ಸಿಕ್ಕಿಲ್ಲ. ಲೈಸೆನ್ಸ್ ಸಿಕಕ್ಕೆ ಹಾವು ಹಿಡಿಯಲು ಸಾಹಾಯ ಅಗಾಲಿದೆ. ಮಕ್ಕಳು ವಿದ್ಯಾಬ್ಯಾಸಕ್ಕೂ ಸಹಾಯ ಆಗಬೇಕಿದೆ. ಸ್ವಂತ ಸೂರು ಕೊಟ್ಟು ಪುಣ್ಯ ಕಟ್ಟಿಕೊಳ್ಳಬೇಕು ಎಂದು ಸರ್ಕಾರಕ್ಕೆ ಬಸವರಾಜ್ ಮನವಿ ಮಾಡಿಕೊಂಡಿದ್ದಾರೆ.