ಕರ್ನಾಟಕ

karnataka

ETV Bharat / state

ಪಟ್ಟದ ಗೊಂಬೆಗಳೊಂದಿಗೆ ವಿದೇಶಿ ಗೊಂಬೆಗಳ ವಯ್ಯಾರ: ದಂಪತಿಯ ಹವ್ಯಾಸಕ್ಕೆ ಮನಸೋತ ದಾವಣಗೆರೆ ಜನ - FOREIGN DOLLS

ದಸರಾ ಹಬ್ಬದಲ್ಲಿ ಮನೆಗೆ ಮತ್ತಷ್ಟು ಮೆರುಗು ನೀಡುವ ಗೊಂಬೆಗಳ ಅಲಂಕಾರವನ್ನು ಕಣ್ತುಂಬಿಕೊಳ್ಳುವುದೇ ಸೊಗಸು. ದಾವಣಗೆರೆಯಲ್ಲಿ ಮಾತ್ರ ಪಟ್ಟದ ಗೊಂಬೆಗಳ ಜೊತೆಜೊತೆಗೆ ವಿದೇಶಿ ಗೊಂಬೆಗಳನ್ನೂ ಪ್ರತಿಷ್ಠಾಪಿಸಿದ್ದು, ಗಮನ ಸೆಳೆಯುತ್ತಿದೆ.

DASARA DOLLS AND IMPORTANCE
ಪಟ್ಟದ ಗೊಂಬೆಗಳೊಂದಿಗೆ ವಿದೇಶಿ ಗೊಂಬೆಗಳ ವಯ್ಯಾರ (ETV Bharat)

By ETV Bharat Karnataka Team

Published : Oct 10, 2024, 8:36 PM IST

ದಾವಣಗೆರೆ:ಹಿಂದೂ ಧರ್ಮದಲ್ಲಿ ದಸರಾ ಹಬ್ಬದಂದು ಮಾಡಲಾಗುವ ಗೊಂಬೆ ಅಲಂಕಾರಕ್ಕೆ ವಿಶೇಷ ಇತಿಹಾಸ ಉಂಟು. ಈ ಗೊಂಬೆ ಕೂರಿಸುವ ಪದ್ಧತಿಯು 18ನೇ ಶತಮಾನದಿಂದ ನಡೆದುಕೊಂಡು ಬರಲಾಗಿದ್ದು, ಇದಕ್ಕೆ ಅದರದ್ದೇ ಆದ ಮಹತ್ವವಿದೆ.

ದೇಶ-ವಿದೇಶಗಳನ್ನು ಸುತ್ತುವ ಹವ್ಯಾಸ ಇಟ್ಟುಕೊಂಡಿರುವ ದಾವಣಗೆರೆಯ ಮುರುಗೇಂದ್ರಪ್ಪ ಹಾಗೂ ಸುಮಾ ದಂಪತಿ, ಆಯಾ ದೇಶಗಳಲ್ಲಿ ಸಿಗುವ ಸುಂದರ ಮತ್ತು ಇತಿಹಾಸ ಹೇಳುವ ಗೊಂಬೆಗಳನ್ನು ಶೇಖರಿಸುವುದಷ್ಟೇ ಅಲ್ಲದೇ ದಸರಾ ಹಬ್ಬದಲ್ಲಿ ಆ ಗೊಂಬೆಗಳನ್ನು ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದ್ದಾರೆ. ಸದ್ಯ ಈ ದಸರಾ ಹಿನ್ನೆಲೆಯಲ್ಲಿ ದಂಪತಿ ಕೂರಿಸಿರುವ ಒಂದೊಂದು ಗೊಂಬೆಗಳೂ ಒಂದೊಂದು ಪೌರಾಣಿಕ ಕಥೆಗಳನ್ನು ಹೇಳುತ್ತಿವೆ.

ದಸರಾ ಗೊಂಬೆಗಳು (ETV Bharat)

ಎರಡರಿಂದ ಮೂರು ಸಾವಿರ ಗೊಂಬೆಗಳು:ದಂಪತಿಎರಡರಿಂದ ಮೂರು ಸಾವಿರ ಗೊಂಬೆಗಳನ್ನು ಕೂರಿಸಿದ್ದು, ಈ ಗೊಂಬೆಗಳ ಉತ್ಸವವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಇವರ ಮನೆಗೆ ಹರಿದು ಬರುತ್ತಿದೆ. ಪಟ್ಟದ ಹಾಗೂ ವಿದೇಶಿ ಗೊಂಬೆಗಳನ್ನು ನೋಡಿ, ಸೆಲ್ಫಿ ಕ್ಲಿಕ್ಕಿಸಿಕೊಂಡು ಹೋಗುವುದು ಇಲ್ಲಿ ಸಾಮಾನ್ಯವಾಗಿದೆ.

ಪಟ್ಟದ ಗೊಂಬೆಗಳೊಂದಿಗೆ ವಿದೇಶಿ ಗೊಂಬೆಗಳ ವಯ್ಯಾರ (ETV Bharat)

25ರಿಂದ 30 ದೇಶಗಳನ್ನು ಸುತ್ತಿ ಅಲ್ಲಿ ಸಿಗುವ ಆಯಾ ದೇಶದ ಗೊಂಬೆಗಳನ್ನು ತಂದು ಪ್ರತಿ ವರ್ಷ ದಸರಾ ಸಂಧರ್ಭದಲ್ಲಿ ಪ್ರತಿಷ್ಠಾಪನೆ ಮಾಡುವುದು ಈ ದಂಪತಿಯ ಹವ್ಯಾಸ. ಅಶ್ವಯುಜ ಮಾಸದ ಪಾಡ್ಯದಿಂದ ದಶಮಿವರೆಗೆ 10 ದಿನ ಗೊಂಬೆ ಕೂರಿಸುವುದು ದಸರಾ ಸಂಪ್ರದಾಯ. ಅಂತೆಯೇ ಸುಮಾ-ಮುರುಗೇಂದ್ರಪ್ಪ ದಂಪತಿ ಕಳೆದ 22 ವರ್ಷಗಳಿಂದ ತಮ್ಮ ಮನೆಯಲ್ಲಿ ಗೊಂಬೆಗಳನ್ನು ಕೂರಿಸುತ್ತಾ ಬಂದಿದ್ದಾರೆ. ಹೀಗೆ ದಸರಾ ಹಬ್ಬಕ್ಕೆ ಮನೆಯಲ್ಲಿ ಗೊಂಬೆ ಕೂರಿಸುವುದು ಸುಮಾ ಅವರು ತಾಯಿ ಮನೆಯ ಪದ್ಧತಿಯಂತೆ.‌ ಅ ಪದ್ಧತಿಯನ್ನೇ ಸುಮಾ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಮಣ್ಣು, ಪೇಪರ್, ಮರ, ಪಿಂಗಾಣಿ, ಹಿತ್ತಾಳೆ, ಕಂಚು, ಹತ್ತಿ, ಬಟ್ಟೆ, ವೈರ್‌ನಿಂದ ತಯಾರಿಸಿದ ಗೊಂಬೆಗಳನ್ನು ವಿಶೇಷವಾಗಿ ಅಲಂಕರಿಸಿ ಕೂರಿಸಿಕೊಂಡು ಬರುತ್ತಿರುವುದು ಮತ್ತೊಂದು ಗಮನಾರ್ಹ ಸಂಗತಿ.

ಪಟ್ಟದ ಗೊಂಬೆಗಳೊಂದಿಗೆ ವಿದೇಶಿ ಗೊಂಬೆಗಳ ವಯ್ಯಾರ (ETV Bharat)

ವಿದೇಶಿ ಗೊಂಬೆಗಳ ಸಂಗ್ರಹ:ಲಂಡನ್, ಪ್ಯಾರಿಸ್, ಜರ್ಮನ್, ಇಟಲಿ, ಸ್ವಿಟ್ಜರ್ಲೆಂಡ್, ಅಮೆರಿಕ, ಆಫ್ರಿಕಾದ ಗಹಾನ, ಕಿನ್ಯಾ, ಹೈವೇರಿ ಪೋಸ್ಟ್, ಬನಿ ರಿಪಬ್ಲಿಕ್, ಜಾಂಬಿಯಾ, ತಾಂಜೇನಿಯಾ, ನೈಜೀರಿಯಾ, ಶ್ರೀಲಂಕಾ, ಸಿಂಗಾಪುರ್, ಥೈಲ್ಯಾಂಡ್, ವಿಯೆಟ್ನಾಂ, ಭೂತಾನ್, ನೇಪಾಳ, ದುಬೈ, ಅಬುದಾಬಿ, ಮಲೇಶಿಯಾ, ಕಾಂಬೋಡಿಯಾ ದೇಶಗಳನ್ನು ಇವರು ಸುತ್ತಿದ್ದು, ಅಲ್ಲಿ ಸಿಗುವ ಸುಂದರ ಗೊಂಬೆಗಳನ್ನು ಖರೀದಿಸಿ ತಂದಿದ್ದಾರೆ. ಅಲ್ಲದೇ ಚನ್ನಪಟ್ಟಣ, ಮೈಸೂರು, ಬೆಂಗಳೂರು, ಮಧುರೈ, ಆಂಧ್ರ, ತಮಿಳುನಾಡು ಗೊಂಬೆಗಳಿಗೂ ಹೆಚ್ಚು ಒತ್ತು ಕೊಡಲಾಗಿದೆ. ತರಹೇವಾರಿ ಗೊಂಬೆಗಳನ್ನು ಕೂರಿಸುವುದು ಪತ್ನಿ ಸುಮಾ ಆಸೆಯಾಗಿತ್ತು.

ಪಟ್ಟದ ಗೊಂಬೆಗಳೊಂದಿಗೆ ವಿದೇಶಿ ಗೊಂಬೆಗಳ ವಯ್ಯಾರ (ETV Bharat)

"ನಾನು ಟೆಕ್ಸ್​ಟೈಲ್ ಇಂಜಿನಿಯರ್. ನೈಜೀರಿಯಾದಲ್ಲಿ 21 ವರ್ಷಗಳ ಕಾಲ ಟೆಕ್ಸ್​ಟೈಲ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದು, ಅಲ್ಲಿದ್ದುಕೊಂಡೇ ಬೇರೆ ದೇಶಗಳನ್ನು ಸುತ್ತಿ ಈ ಗೊಂಬೆಗಳನ್ನು ಖರೀದಿಸಿದ್ದೇವೆ" ಎಂದು ಮುರುಗೇಂದ್ರಪ್ಪ ಹೇಳಿದರು.

ಪಟ್ಟದ ಗೊಂಬೆಗಳೊಂದಿಗೆ ವಿದೇಶಿ ಗೊಂಬೆಗಳ ವಯ್ಯಾರ (ETV Bharat)

ಬುಡಕಟ್ಟು ಜನಾಂಗದ ಗೊಂಬೆಗಳೇ ಹೆಚ್ಚು:ಆಫ್ರಿಕಾ ಖಂಡದಲ್ಲಿ ಬುಡಕಟ್ಟು ಜನಾಂಗವೇ ಹೆಚ್ಚು. ಸುಂದರ ಕಲಾಕೃತಿಗಳನ್ನು ಮಾರಾಟ ಮಾಡುವುದು ಅವರ ಕಾಯಕ. ನೈಜೀರಿಯಾದಲ್ಲಿ ನೆಲೆಸಿದ್ದ ಮುರುಗೇಂದ್ರಪ್ಪ ಟ್ರೈಬ್​ಗಳ ಬಳಿ ಮಾರಾಟಕ್ಕೆ ಸಿಗುವ ಗೊಂಬೆಗಳನ್ನು ಖರೀದಿ ಮಾಡಿದ್ದಾರೆ. ದೇವರ ರೂಪದ, ಕ್ರೈಸ್ತನ ಲೀಲೆ ರೂಪದ, ನೈಜೀರಿಯಾ ಟ್ರೈಬ್ ಗೊಂಬೆಗಳು, ಇಬೋ, ಎರೊಬೊ, ಹೌಸ್, ಪುಲಾನಿಸ್ ಎಂಬ ಬುಡಕಟ್ಟು ಜನರ ಗೊಂಬೆಗಳನ್ನು ಇಲ್ಲಿ ಕಾಣಬಹುದು. ಮಮ್ಮಿ ಗೊಂಬೆ, ಜಿರಾಫೆ ಗೊಂಬೆ, ದುಬೈ ಗೊಂಬೆ, ಸ್ಟಿಕ್​ನಲ್ಲಿ ಮಾಡಿರುವ ಗೊಂಬೆ, ಹಿಂತಾಳೆ ಗೊಂಬೆ, ಚಿಟ್ಟೆ ರೆಕ್ಕೆಯಲ್ಲಿ ಮಾಡಿರುವ ಕಲಾಕೃತಿಗಳನ್ನೂ ಸಹ ಇಲ್ಲಿ ನೋಡಬಹುದಾಗಿದೆ.

ಪಟ್ಟದ ಗೊಂಬೆಗಳೊಂದಿಗೆ ವಿದೇಶಿ ಗೊಂಬೆಗಳ ವಯ್ಯಾರ (ETV Bharat)

ಸ್ಥಳೀಯ ಗೊಂಬೆಗಳ ಆಕರ್ಷಣೆ:ಚನ್ನಪಟ್ಟಣ, ಮೈಸೂರು, ಬೆಂಗಳೂರು, ಆಂಧ್ರ, ತಮಿಳುನಾಡಿನಲ್ಲಿ ಸಿಗುವ ಗೊಂಬೆಗಳನ್ನು ಇಲ್ಲಿ ಇಡಲಾಗಿದೆ. ದಸರಾ ಜಂಬೂ ಸವಾರಿ, ಆನೆಗಳ ಹಿಂಡು, ಮದುವೆ ಮಂಟಪದಲ್ಲಿ ಕೂತಿರುವ ವಧು ವರ, ವಾದ್ಯ ನುಡಿಸುತ್ತಿರುವುದು, ಕೃಷ್ಣ, ಉಗ್ರ ನರಸಿಂಹ, ವಿವೇಕಾನಂದ, ರಾಮ, ಲಕ್ಷ್ಮಣ, ಸೀತೆ, ಬುದ್ಧ, ಅಂಗಡಿ ನಡೆಸುತ್ತಿರುವ ದಂಪತಿ, ಜೋಡಿ ಗೊಂಬೆ, ಪುಟ್ಟ ಅಡಿಗೆ ಮನೆ ಸಾಮಗ್ರಿಗಳು, ಕಾರು, ಲಾರಿ, ನಟರಾಜ, ನಂದಿ ಗಣೇಶ ಹೀಗೆ... ತರಹೇವಾರಿ ಗೊಂಬೆಗಳನ್ನು ಇಡಲಾಗಿದೆ.

ಪಟ್ಟದ ಗೊಂಬೆಗಳೊಂದಿಗೆ ವಿದೇಶಿ ಗೊಂಬೆಗಳ ವಯ್ಯಾರ (ETV Bharat)

ದಸರಾ ಗೊಂಬೆಯ ಮಹತ್ವ, ಇತಿಹಾಸ, ಆಚರಣೆ ಬಂದ ಬಗೆ:18ನೇ ಶತಮಾನದಲ್ಲಿ ಮೈಸೂರಿನಲ್ಲಿ ಆರಂಭವಾದ ಈ ಗೊಂಬೆ ಕೂರಿಸುವ ಸಂಪ್ರದಾಯ ರಾಜ್ಯಾದ್ಯಂತ ಪಸರಿಸಿದೆ. ಕರ್ನಾಟಕ ರಾಜ್ಯ ಅಲ್ಲದೇ ನೆರೆಯ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿಯೂ ಈ ಗೊಂಬೆ ಹಬ್ಬ ಖ್ಯಾತಿ ಪಡೆದುಕೊಂಡಿದೆ. ಇದನ್ನು ಗೊಂಬೆ ಹಬ್ಬ ಎಂದೂ ಕರೆಯುತ್ತಾರೆ. ದಸರಾ ಗೊಂಬೆ ಕೂರಿಸುವ ಪದ್ಧತಿ ಮೈಸೂರಿನಿಂದ ಆರಂಭವಾಗಿ ಬಂದಿದೆ ಎಂಬ ಮಾತು ಕೂಡ ಇದೆ. ಈ ಹಿಂದೆ ಹೆಣ್ಣು ಮಗಳು ಮದುವೆಯಾದ ಬಳಿಕ ತನ್ನ ತಾಯಿ ಮನೆಯಿಂದ ಗಂಡನ ಮನೆಗೆ ತೆರಳುವ ವೇಳೆ ಗೊಂಬೆ ಕೊಡಲಾಗುತ್ತಿತ್ತು. ತವರು ಮನೆಯಿಂದ ಕೊಟ್ಟ ಗೊಂಬೆಗಳನ್ನು ಗಂಡನ ಮನೆಯಲ್ಲಿ ಆಯಾ ಹೆಣ್ಣು ಮಕ್ಕಳು ದಸರಾ ಹಬ್ಬದ ವೇಳೆ ಪ್ರತಿಷ್ಠಾಪನೆ ಮಾಡುವುದು ಪ್ರತೀತಿ. ಈ ಪ್ರತೀತಿ ಮೈಸೂರು ಅರಸ ಕಾಲದಲ್ಲೂ ಇತ್ತು ಎಂಬುದು ಇತಿಹಾಸಕಾರರ ಮಾತು.

ಪಟ್ಟದ ಗೊಂಬೆಗಳೊಂದಿಗೆ ವಿದೇಶಿ ಗೊಂಬೆಗಳ ವಯ್ಯಾರ (ETV Bharat)

ಇದನ್ನೂ ಓದಿ: ಹಾವೇರಿಯಲ್ಲಿ ದಸರಾ ಸಂಭ್ರಮ: ಮೂರು ಸಾವಿರಕ್ಕೂ ಅಧಿಕ ಗೊಂಬೆ ಕೂರಿಸಿದ ಪದ್ಮಾ ಹಿರೇಮಠ​

ABOUT THE AUTHOR

...view details