ದಾವಣಗೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಭಸವಾಗಿ ಬಂದು ದ್ವಿ ಚಕ್ರ ವಾಹನ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ಕಾಲು ತುಂಡಾಗಿ ತೀವ್ರ ಗಾಯಗೊಂಡಿರುವ ಘಟನೆ ದಾವಣಗೆರೆ ತಾಲೂಕಿನ ಆನಗೋಡು ಬಳಿ ನಡೆದಿದೆ.
ಬಸವರಾಜ್ (34) ಎಂಬ ವ್ಯಕ್ತಿ ತೀವ್ರ ಗಾಯಗೊಂಡಿರುವ ಬೈಕ್ಸವಾರ. ದಾವಣಗೆರೆ ಕೊಲ್ಕುಂಟೆ ಗ್ರಾಮದ ವ್ಯಕ್ತಿ ಬಸವರಾಜ್ ತಮ್ಮ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ ಇಕ್ಕೆಲದಲ್ಲಿ ಅಳವಡಿಸಿರುವ ಕಬ್ಬಿಣದ ಡಿವೈಡರ್ಗೆ ರಭಸದಿಂದ ಡಿಕ್ಕಿ ಹೊಡೆದಿದೆ.
ಬೈಕ್ ಸವಾರ ಬಸವರಾಜ್ನ ಕಾಲು ಕಟ್ಟಾಗಿದ್ದು, ಮಧ್ಯೆ ರಸ್ತೆಯಲ್ಲಿ ತೀವ್ರ ನರಳಾಡಿದ್ದಾನೆ. ನರಳಾಡುತ್ತಿದ್ದ ಬೈಕ್ ಸವಾರ ಬಸವರಾಜ್ ನನ್ನು ನೋಡಿದ ಸ್ಥಳೀಯರು ಆಂಬ್ಯುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ರವಾನಿಸಿದರು. ದಾವಣಗೆರೆ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.