ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಕಂಬಳ ಆಯೋಜನೆಗೆ ದಿನಾಂಕ ನಿಗದಿಯಾಗಿಲ್ಲ: ಹೈಕೋರ್ಟ್‌ಗೆ​ ಸರ್ಕಾರದ ಮಾಹಿತಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಥವಾ ಪಿಲಿಕುಳದಲ್ಲಿ ಕಂಬಳ ಆಯೋಜನೆಗೆ ಆಕ್ಷೇಪವಿಲ್ಲ. ಆದರೆ, ಪಿಲಿಕುಳ ಮೃಗಾಲಯದ ಪಕ್ಕದಲ್ಲಿ ಕಂಬಳ ಸ್ಪರ್ಧೆ ಆಯೋಜಿಸುವುದಕ್ಕೆ ನಮ್ಮ ಆಕ್ಷೇಪವಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

High Court
ಹೈಕೋರ್ಟ್​ (ETV Bharat)

By ETV Bharat Karnataka Team

Published : Nov 6, 2024, 8:31 AM IST

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಂಬಳ ಆಯೋಜನೆಗೆ ಈವರೆಗೆ ದಿನಾಂಕ ನಿಗದಿ ಆಗಿಲ್ಲ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ನವೆಂಬರ್ 17ಕ್ಕೆ ಕಂಬಳ ಆಯೋಜಿಸಲಾಗಿದೆ ಎಂಬುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಬೆಂಗಳೂರು ನಗರದಲ್ಲಿ ಕಂಬಳ ಸಮಿತಿಗೆ ಕಂಬಳ ಆಯೋಜಿಸಲು ಅನುಮತಿ ನೀಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ (ಪೆಟಾ) ಸ್ವಯಂ ಸೇವಾ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠಕ್ಕೆ ಸರ್ಕಾರ ತಿಳಿಸಿತು.

ವಿಚಾರಣೆ ವೇಳೆ ಬೆಂಗಳೂರು ಕಂಬಳ ಸಮಿತಿ ಪರ ವಕೀಲ ಬಿ.ವಿನೋದ್ ಕುಮಾರ್ ವಾದ ಮಂಡಿಸಿ ಅರ್ಜಿಗೆ ಸಂಬಂಧಿಸಿದಂತೆ ತಮ್ಮ ಆಕ್ಷೇಪಣೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ಇದೇ ವೇಳೆ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ಬೆಂಗಳೂರಿನಲ್ಲಿ ಕಂಬಳ ಆಯೋಜನೆಗೆ ಈವರೆಗೆ ದಿನಾಂಕ ನಿಗದಿ ಆಗಿಲ್ಲ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ಈ ತಿಂಗಳು 17ರಂದು ಕಂಬಳ ನಡೆಯಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ, ನಮಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಥವಾ ಪಿಲಿಕುಳದಲ್ಲಿ ಕಂಬಳ ಆಯೋಜನೆಗೆ ಆಕ್ಷೇಪವಿಲ್ಲ. ಆದರೆ, ಪಿಲಿಕುಳದಲ್ಲಿ ಮೃಗಾಲಯದ ಪಕ್ಕದಲ್ಲಿ ಕಂಬಳ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಇದಕ್ಕೆ ನಮ್ಮ ಆಕ್ಷೇಪವಿದೆ. ಅಷ್ಟೇ ಅಲ್ಲ, ಸ್ವತಃ ಮೃಗಾಲಯ ನಿರ್ದೇಶಕರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕಂಬಳದ ಸಂದರ್ಭದಲ್ಲಿ ಉಂಟಾಗುವ ಕೂಗಾಟದಿಂದ ಬೇರೆ ಪ್ರಾಣಿಗಳಿಗೆ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಮೃಗಾಲಯದ ಪಕ್ಕ ಕಂಬಳ ಆಯೋಜನೆಗೆ ಅವಕಾಶ ನೀಡಬಾರದು ಎಂದು ಕೋರಿದರು.

ಈ ವೇಳೆ, ಅಡ್ವೋಕೇಟ್ ಜನರಲ್ ಪ್ರತಿಕ್ರಿಯಿಸಿ, ಪಿಲಿಕುಳದಲ್ಲಿ ಈಗಲ್ಲ ಕಳೆದ 15-20 ವರ್ಷಗಳಿಂದ ಕಂಬಳ ನಡೆಯುತ್ತಿದೆ ಎಂದರು. ಅದಕ್ಕೆ ಅರ್ಜಿದಾರರ ಪರ ವಕೀಲರು, ಪಿಲಿಕುಳದಲ್ಲಿ ಕಂಬಳ ಆಯೋಜನೆಗೆ ನಮ್ಮ ಆಕ್ಷೇಪ ಇಲ್ಲ. ಬೇರೆ ಕಡೆ ಕಂಬಳ ನಡೆಯಲಿ. ಆದರೆ, ಮೃಗಾಲಯದ ಸಮೀಪ ನಡೆಸುವುದಕ್ಕೆ ನಮ್ಮ ತಕರಾರು ಇದೆ ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ಬಗ್ಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಅರ್ಜಿದಾರರು ಮತ್ತು ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿತು.

ಇದನ್ನೂ ಓದಿ:ಅ.26ರಂದು ಬೆಂಗಳೂರಿನಲ್ಲಿ ಕಂಬಳ ನಡೆಸುತ್ತಿಲ್ಲ: ಹೈಕೋರ್ಟ್‌ಗೆ ಕಂಬಳ ಸಮಿತಿ ಮಾಹಿತಿ

ABOUT THE AUTHOR

...view details