ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಸೇರಿ ಇತರೆ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಇಂದು ಶುಕ್ರವಾರಕ್ಕೆ ಮುಂದೂಡಿತು. ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ, ದರ್ಶನ್ ಮತ್ತಿತರರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಕೈಗೊಂಡರು.
'ಕೊಲೆಯಲ್ಲಿ ಪವಿತ್ರಾ ಗೌಡ ಪಾತ್ರವಿಲ್ಲ':ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿ ಪವಿತ್ರಾ ಗೌಡ ಅವರು ಯಾವುದೇ ರೀತಿಯಲ್ಲಿಯೂ ಭಾಗಿಯಾಗಿಲ್ಲ. ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ಮನವಿ ಮಾಡಿದರು.
ರೇಣುಕಾಸ್ವಾಮಿ ಕೊಲೆಗೆ ಯಾವುದೇ ಪಿತೂರಿ ನಡೆದಿಲ್ಲ. ಪಟ್ಟಣಗೆರೆಯ ಜಯಣ್ಣ ಶೆಡ್‌ಗೆ ಕರೆತಂದಾಗ ಪವಿತ್ರಾ ಗೌಡ ಅವರು ದರ್ಶನ್ ಜೊತೆ ತೆರಳಿ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಆ ನಂತರ ಅವರು ಅಲ್ಲಿಂದ ತೆರಳಿದ್ದಾರೆ. ಬಳಿಕ ಏನಾಗಿದೆ ಎಂಬುದೂ ಅವರಿಗೆ ಗೊತ್ತಿಲ್ಲ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆತರುವಾಗ ಅವರೆಲ್ಲರೂ ಬೆಂಗಳೂರು-ತುಮಕೂರು ರಸ್ತೆಯಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್ವೊಂದರಲ್ಲಿ ಊಟ ಮಾಡಿದ್ದಾರೆ. ಇದರ ಉಸ್ತುವಾರಿಯಾಗಿರುವ ಶಿವಕುಮಾರ್ ಹೇಳಿಕೆ ನೋಡಿದರೆ, ರೇಣುಕಾಸ್ವಾಮಿಯ ಅಪಹರಣವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದರು.
'ಯಾವ ಪ್ರತ್ಯಕ್ಷ ಸಾಕ್ಷಿಯೂ ಪವಿತ್ರಾ ಅವರತ್ತ ಬೆರಳು ಮಾಡಿಲ್ಲ':ಹಾಗೆಯೇ, ನಟ ಚಿಕ್ಕಣ್ಣ, ನವೀನ್ ಕುಮಾರ್, ಯಶಸ್ ಸೂರ್ಯ ಅವರ ಹೇಳಿಕೆಗಳನ್ನು ಪರಿಶೀಲಿಸಿದರೆ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಮಾಡುವ ಸಂಬಂಧ ಯಾವುದೇ ಮಾತುಕತೆ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಯಾವ ಪ್ರತ್ಯಕ್ಷ ಸಾಕ್ಷಿಯೂ ಪವಿತ್ರಾ ಗೌಡರತ್ತ ಬೆರಳು ಮಾಡಿಲ್ಲ ಎಂಬುದನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.