ಬೆಂಗಳೂರು : ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸಹೋದರ ಎಂ.ಪಿ.ದಾರಕೇಶ್ವರಯ್ಯಗೆ ಬೇಡ ಜಂಗಮ ಜಾತಿ ಪ್ರಮಾಣಪತ್ರ ಬಳಸದಂತೆ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿರುವ ಅವರ ಹೆಸರನ್ನು ಇವಿಎಂನಿಂದ ತೆಗೆಸುವಂತೆ ಆದೇಶಿಸಬೇಕೆಂದು ಕೋರಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಹೊಸದುರ್ಗ ತಾಲೂಕಿನ ಗೂಳಿಹಟ್ಟಿಯ ಆರ್.ಕೃಷ್ಣಮೂರ್ತಿ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರತಿವಾದಿ ದಾರಕೇಶ್ವರಯ್ಯ ಅವರಿಗೆ ಜಾತಿ ಪ್ರಮಾಣಪತ್ರ ಬಳಸದಂತೆ ನಿರ್ಬಂಧ ವಿಧಿಸಲಾಗಿದೆ. ಆದರೆ, ಬೇಡ ಜಂಗಮ ಜಾತಿಯ ಪ್ರಮಾಣ ಪತ್ರ ಪಡೆದಿರುವ ಎಂ.ಪಿ.ದಾರಕೇಶ್ವರಯ್ಯ ಪರಿಶಿಷ್ಟ ಜಾತಿಗೆ ಮೀಸಲಾದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರ ಉಮೇದುವಾರಿಕೆ ಸಿಂಧುವಾಗಿದೆ. ಹಾಗಾಗಿ ಅವರ ಹೆಸರನ್ನು ಇವಿಎಂನಿಂದ ತೆಗೆಯುವಂತೆ ಚುನಾವಣಾ ಆಯೋಗಕ್ಕೂ ಮನವಿ ಸಲ್ಲಿಸಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಇದೇ ವಿಚಾರದ ಮತ್ತೊಂದು ಅರ್ಜಿ ಶುಕ್ರವಾರ ವಿಚಾರಣೆಗೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಅರ್ಜಿಯನ್ನೂ ಸಹ ಅದರ ಜತೆ ವಿಚಾರಣೆ ನಡೆಸಲಾಗುವುದು ಎಂದು ಹೇಳಿ ವಿಚಾರಣೆ ಮುಂದೂಡಿದೆ.