ಬಂಟ್ವಾಳ (ದಕ್ಷಿಣ ಕನ್ನಡ):ಇಲ್ಲಿನ ಬಿ. ಸಿ. ರೋಡ್ನಲ್ಲಿ ಸೋಮವಾರ ಬೆಳಗ್ಗೆ ನಡೆದ ಘಟನೆಗಳು ಹಾಗೂ ಅದಕ್ಕೆ ಸಂಬಂಧಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಮುಂದಿನ 48 ಗಂಟೆಗಳ ಅವಧಿವರೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿರುವ ಎಲ್ಲ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಸೆ.16ರಂದು ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದು, ಮದ್ಯದಂಗಡಿಗಳಲ್ಲಿ ಎಲ್ಲ ವಿಧದ ಅಮಲು ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಅಗತ್ಯತೆ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಬಂಟ್ವಾಳ ತಹಶೀಲ್ದಾರ್ ಕೋರಿಕೆ ಮೇರೆಗೆ ಈ ಆದೇಶ ಮಾಡಲಾಗಿದೆ.