ಮೈಸೂರು: "ಎರಡು ಕಡೆ ಪುಣ್ಯಸ್ನಾನ ಮಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾಪ ಸ್ವಲ್ಪ ಪರಿಹಾರ ಆಗಿರಬಹುದು. ಸ್ವಯಂಕೃತ ಅಪರಾಧದಿಂದ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗೆ ಇಳಿಯುತ್ತಾರೆ. ಹೈಕಮಾಂಡ್ ಬೆಂಬಲದಿಂದಷ್ಟೇ ಡಿ.ಕೆ.ಶಿವಕುಮಾರ್ ಸಿಎಂ ಆಗಬಹುದು" ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಡಿ.ವಿ.ಸದಾನಂದ ಗೌಡ ಹೇಳಿದರು.
ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿಂದು ಕುಟುಂಬಸಮೇತ ಭಾಗವಹಿಸಿ ಪುಣ್ಯ ಸ್ನಾನ ಮಾಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ (ETV Bharat) "ಬಹಳ ವಿಶೇಷವಾದ ಕುಂಭಮೇಳ ಇಲ್ಲಿ ನಡೆಯುತ್ತದೆ. ಪುಣ್ಯ ಸ್ನಾನ ಮಾಡಲು ಲಕ್ಷಾಂತರ ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಉತ್ತರ ಭಾರತದಲ್ಲಿ ಪ್ರಯಾಗ್ರಾಜ್ನಂತೆ ದಕ್ಷಿಣ ಭಾರತದಲ್ಲಿ ತ್ರಿವೇಣಿ ಸಂಗಮ ಅಷ್ಟೇ ಪವಿತ್ರ. ಅದಕ್ಕಾಗಿ ನಾನು ಕುಟುಂಬದ ಸಮೇತವಾಗಿ ಇಲ್ಲಿಗೆ ಬಂದಿದ್ದೇನೆ" ಎಂದರು.
ಮೆಟ್ರೋ ದರ ಏರಿಕೆ ವಿಚಾರವಾಗಿ ಮಾತನಾಡಿ, "ಕೇಂದ್ರದ ಮೇಲೆ ಬೊಟ್ಟು ಮಾಡುವುದನ್ನು ಬಿಡಿ. ಮೆಟ್ರೋ ದರ ಕಡಿಮೆ ಆಗಬೇಕು. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ರಾಜ್ಯ ಸರ್ಕಾರ ಕರೆದರೆ ಕೇಂದ್ರದ ಬಳಿಗೆ ನಾವು ಜೊತೆಯಾಗಿ ಹೋಗುತ್ತೇವೆ" ಎಂದು ತಿಳಿಸಿದರು.
ಉದಯಗಿರಿ ಪ್ರಕರಣ-ಪರಮೇಶ್ವರ್ ವಿರುದ್ಧ ಟೀಕೆ: ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ವಿಚಾರವಾಗಿ ಮಾತನಾಡಿ, "ಯಾವಾಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆೋ ಆಗೆಲ್ಲ ಒಂದು ಕೋಮಿನ ಜನರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ. ಗೃಹ ಸಚಿವ ಪರಮೇಶ್ವರ್ಗೆ ಕಾನೂನು ಸುವ್ಯವಸ್ಥೆ ನಿಭಾಯಿಸಲು ಬರುತ್ತಿಲ್ಲ. ಸಿಎಂ ತಲೆಯಲ್ಲಿ ಬರೀ ಮುಡಾ ತುಂಬಿದೆ. ಸಿದ್ದರಾಮಯ್ಯ ಹೆಸರಿನಲ್ಲಿ ಇರುವ ಸಿದ್ದ ಎಂಬುದನ್ನು ತೆಗೆಯಬೇಕಾದ ಸ್ಥಿತಿ ಬಂದಿದೆ. ಆ ಮಟ್ಟಕ್ಕೆ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆದಾಗ ಬದಲಾಗಿದ್ದಾರೆ. ಪರಮೇಶ್ವರ್ ಕೇವಲ ಕುರ್ಚಿಗೆ ಅಂಟಿಕೊಂಡು ಕುಳಿತಿದ್ದಾರೆ. ರಾಜಣ್ಣ, ಜಾರಕಿಹೊಳಿ, ಪರಮೇಶ್ವರ್ ಯಾರೂ ಮಂತ್ರಿ ಕೆಲಸ ಮಾಡುತ್ತಿಲ್ಲ. ಬರೀ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಇದು ಅತ್ಯಂತ ಭ್ರಷ್ಟ ಸರ್ಕಾರ" ಎಂದು ಕಿಡಿಕಾರಿದರು.
ಬಿಜೆಪಿಯಲ್ಲಿ ಆಂತರಿಕ ಕಚ್ಚಾಟದ ಕುರಿತು ಪ್ರತಿಕ್ರಿಯಿಸಿ, "ನನ್ನ ಪಕ್ಷಕ್ಕೆ ಈ ಪರಿಸ್ಥಿತಿ ಬರಬಾರದಿತ್ತು. ನಮ್ಮಲ್ಲಿ ಆಂತರಿಕ ಅವ್ಯವಸ್ಥೆ ಇದೆ. ನಮ್ಮ ಪಕ್ಷ ರಾಜ್ಯದಲ್ಲಿ ದಯಾನೀಯ ಸ್ಥಿತಿಯಲ್ಲಿದೆ. ಹೈಕಮಾಂಡ್ ಮಧ್ಯ ಪ್ರವೇಶಿಸಬೇಕು. ಸಾಕು ಇನ್ನೂ ಈ ಮೌನ. ನಮ್ಮ ಜಗಳ ಹೆಚ್ಚಾಗಿದ್ದು ಕಾಂಗ್ರೆಸ್ಗೆ ಸ್ವಲ್ಪ ಪ್ಲಸ್ ಪಾಯಿಂಟ್ ಆಗಿದೆ. ಒಂದು ವಾರ ಕಾಯಿರಿ, ಎಲ್ಲಾ ಸರಿ ಆಗುತ್ತದೆ" ಎಂದರು.
ಇದನ್ನೂ ಓದಿ:ರಾಜಣ್ಣ ದೊಡ್ಡವರು, ಅವರ ಬಗ್ಗೆ ನಾನು ಮಾತನಾಡಲ್ಲ: ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನದ ಬಳಿಕ ಡಿಸಿಎಂ ಮಾತು
ಇದನ್ನೂ ಓದಿ:ಉದಯಗಿರಿ ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ: ಸಚಿವ ಜಿ ಪರಮೇಶ್ವರ್