ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೈಕಲ್ ಪಾತ್ ಯೋಜನೆ ರದ್ದು: ಪ್ರತಿಕ್ರಿಯೆ (ETV Bharat) ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆ ಬಂದಾಗ ಹಲವು ಯೋಜನೆಗಳು ಕಾರ್ಯಗತಗೊಳ್ಳುವ ಬಗ್ಗೆ ಜನರಿಗೆ ನಿರೀಕ್ಷೆ ಇತ್ತು. ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡುವುದು ಕೂಡ ಒಂದು ಯೋಜನೆ. ಆದರೆ ಇದಕ್ಕೆ ಬೇಕಾದ ಭೂಮಿ ಸಿಗದ ಹಿನ್ನೆಲೆಯಲ್ಲಿ ಯೋಜನೆಯೇ ರದ್ದಾಗಿದೆ. ಸೈಕಲ್ ಟ್ರ್ಯಾಕ್ ನಿರ್ಮಾಣವಾದರೆ ಅದೆಷ್ಟೋ ಸೈಕಲ್ ಸವಾರರಿಗೆ ಒಂದು ಮುಡಿಪಾಗಿಟ್ಟ ರಸ್ತೆ ನಿರ್ಮಾಣವಾಗುತ್ತಿತ್ತು.
ನಗರದಲ್ಲಿ ಟ್ರಾಫಿಕ್ ಸಮಸ್ಯೆಯ ನಡುವೆ ಸೈಕಲ್ ಸವಾರಿ ಮಾಡುವುದು ತ್ರಾಸದಾಯಕ. ವಾಹನಗಳ ಓಡಾಟಕ್ಕೆ ಜಾಗವಿಲ್ಲದ ಸಂದರ್ಭದಲ್ಲಿ ಅಪಾಯವನ್ನು ಎದುರಿಸಿ ಸೈಕಲ್ ಸವಾರಿ ಮಾಡಬೇಕಾಗುತ್ತದೆ. ಇದಕ್ಕೆ ಪರಿಹಾರವಾಗಿ ಈ ಯೋಜನೆ ರೂಪಿಸಲಾಗಿತ್ತು. ಯೋಜನೆಯ ಪ್ರಕಾರ ಮಂಗಳೂರಿನ ಬೋಳಾರದಿಂದ ಮಾರ್ನಮಿಕಟ್ಟೆ, ವೆಲೆನ್ಸಿಯ ಮೂಲಕ ಟಿಎಂಎ ಕನ್ವೆನ್ಸನ್ ಸೆಂಟರ್ವರೆಗೆ ಸೈಕಲ್ ಪಾತ್ಗಾಗಿ ಮಾರ್ಗ ರಚಿಸುವ ಚಿಂತನೆ ಮಾಡಲಾಗಿತ್ತು. ಸುಮಾರು 12 ಕಿ.ಮೀ. ಯೋಜನೆಗಾಗಿ 6.4 ಕೋಟಿ ರೂಪಾಯಿ ಮೀಸಲಿಡಲಾಗಿತ್ತು.
ಸೈಕಲ್ ಸವಾರರು ಈ ಯೋಜನೆ ಜಾರಿಯಾಗುವ ಖುಷಿಯಲ್ಲಿದ್ದರು. ಆದರೆ ನೀಲಿ ನಕಾಶೆ ಮಾತ್ರ ಸಿದ್ಧವಾಗಿತ್ತು. ಯೋಜನೆ ಕಾರ್ಯರೂಪಕ್ಕೆ ಬರಲೇ ಇಲ್ಲ. ಇದಕ್ಕೆ ಮುಖ್ಯವಾಗಿ ಅಡ್ಡಿಯಾದದ್ದು ಭೂಮಿಯ ಕೊರತೆ. ಸೈಕಲ್ ಪಾತ್ ನಿರ್ಮಾಣಕ್ಕೆ ರೈಲ್ವೆ ಇಲಾಖೆಯ ಕ್ಲಿಯರೆನ್ಸ್ ಸಿಗಬೇಕಿತ್ತು. ಹಲವೆಡೆ ಖಾಸಗಿ ಭೂಮಿ ಬೇಕಾಗಿತ್ತು. ಆದರೆ ಒಂದೆಡೆ ರೈಲ್ವೆ ಇಲಾಖೆಯ ಕ್ಲಿಯರೆನ್ಸ್ ಸಿಗದೆ ಮತ್ತೊಂದೆಡೆ ಭೂಮಿ ನೀಡಲು ಕೆಲವರು ಸಿದ್ಧರಿಲ್ಲದ ಕಾರಣ ಈ ಯೋಜನೆ ರದ್ದಾಗಿದೆ.
ಈ ಬಗ್ಗೆ 'ಈಟಿವಿ ಭಾರತ' ಜೊತೆಗೆ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, "ಸೈಕಲ್ ಪಾಥ್ ಯೋಜನೆ ಪ್ರಮುಖವಾಗಿ ಆಗಬೇಕಾದ ಯೋಜನೆಯಾಗಿತ್ತು. ಕಾಮಗಾರಿ ಆರಂಭವಾಗಬೇಕಾದ ಸಂದರ್ಭದಲ್ಲಿ ರೈಲ್ವೆ ಇಲಾಖೆಯಿಂದ ಕ್ಲಿಯರೆನ್ಸ್ ಸಿಕ್ಕಿಲ್ಲ. ಅದರ ಜೊತೆಗೆ ಕಾಮಗಾರಿ ಮುಂದುವರಿಸುತ್ತಾ ಹೋಗುವಾಗ ಖಾಸಗಿ ಭೂಮಾಲೀಕರು ತಮ್ಮ ಜಾಗವನ್ನು ಮಂಗಳೂರು ಮಹಾನಗರ ಪಾಲಿಕೆಗೆ ಬಿಟ್ಟುಕೊಡದ ಪರಿಣಾಮ, ಜಾಗದ ಸಮಸ್ಯೆಯಿಂದ ಅದನ್ನು ಮುಂದುವರಿಸಲು ಆಗಿಲ್ಲ. ಆದ ಕಾರಣ ಸ್ಮಾರ್ಟ್ ಸಿಟಿಯ ಬೋರ್ಡ್ ಮಿಟಿಂಗ್ನಲ್ಲಿ ಅದನ್ನು ಕೈಬಿಟ್ಟಿದ್ದೇವೆ" ಎನ್ನುತ್ತಾರೆ.
ಇದನ್ನೂ ಓದಿ:ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಸಮಸ್ಯೆ: ಬೇಕಿದೆ ಶಾಶ್ವತ ಪರಿಹಾರ - Mangaluru Bengaluru Train