ಹುಬ್ಬಳ್ಳಿ:ಆನ್ಲೈನ್ ಜಾಹೀರಾತುಗಳಿಗೆ ಲೈಕ್, ರೇಟಿಂಗ್ ನೀಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ಬಂದ ವಾಟ್ಸ್ಆ್ಯಪ್ ಸಂದೇಶ ನಂಬಿ ವ್ಯಕ್ತಿಯೊಬ್ಬರು 20 ಲಕ್ಷ ರೂ ಕಳೆದುಕೊಂಡಿರುವ ಘಟನೆ ನಡೆದಿದೆ. ಉಣಕಲ್ ನಿವಾಸಿ ನಿಜಾಮುದ್ದೀನ್ ಮೋಸ ಹೋಗಿದ್ದು, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆನ್ಲೈನ್ ಜಾಹೀರಾತುಗಳಿಗೆ ಲೈಕ್, ರೇಟಿಂಗ್ ನೀಡಿ ಹಣ ಗಳಿಸಬಹುದು ಎಂಬ ವಾಟ್ಸ್ಆ್ಯಪ್ ಸಂದೇಶ ನಿಜಾಮುದ್ದೀನ್ಗೆ ಬಂದಿತ್ತು. ಜೊತೆಗೆ ಲಿಂಕ್ವೊಂದನ್ನು ಕಳುಹಿಸಿ ಲೈಕ್ ಮತ್ತು ರೇಟಿಂಗ್ ನೀಡಲು ವಂಚಕರು ತಿಳಿಸಿದ್ದರು. ಇದನ್ನು ನಂಬಿದ ಇವರು, ವಂಚಕರು ಹೇಳಿದಂತೆ ಲೈಕ್ಸ್ ಮತ್ತು ರೇಟಿಂಗ್ಸ್ ನೀಡಿದ್ದರು. ಬಳಿಕ ವಂಚಕರು, ವಿಶ್ವಾಸ ಬರಲೆಂದಿ ಮಾಡಿರುವ ಆ ಕೆಲಸಕ್ಕೆ ಹಣವನ್ನು ವರ್ಗಾಯಿಸಿದ್ದರು.
ನಂತರ ನಮಲ್ಲಿ ಹೆಚ್ಚು ಹಣ ಹೂಡಿದರೆ ಇನ್ನಷ್ಟು ದುಡ್ಡು ಸಂಪಾದಿಸಬಹುದು ಎಂದು ವಂಚಕರು ನಂಬಿಸಿದ್ದರು. ಇದನ್ನು ನಂಬಿದ ದೂರುದಾರರು, 20 ಲಕ್ಷ ಹಣ ವರ್ಗಾಯಿಸಿದ್ದಾರೆ. ಬಳಿಕ ಸಂಪರ್ಕಕ್ಕೆ ಸಿಗದೇ ಮೋಸ ಮಾಡಿದ್ದಾರೆ. ಈ ಕುರಿತು ದೂರಿನಲ್ಲಿ ಉಲ್ಲೇಖಿಸಲಾಗಿದೆ.