ಬೆಂಗಳೂರು: ಜ್ಞಾನ, ಆರೋಗ್ಯ ಮತ್ತು ಸಂಶೋಧನೆಯನ್ನು ಸಮಗ್ರವಾಗಿ ಸಂಯೋಜಿಸಲಿರುವ, ರಾಜ್ಯದ ಅರ್ಥ ವ್ಯವಸ್ಥೆ ಮರುವ್ಯಾಖ್ಯಾನಿಸಲಿರುವ ಹಾಗೂ ಕರ್ನಾಟಕದ ವಿಶಿಷ್ಟ ಹೆಗ್ಗುರುತು ಆಗಲಿರುವ ಹೊಸ 'ಕ್ವಿನ್ ಸಿಟಿ' ಅಂದರೆ ಏನು? ಅಲ್ಲಿ ಏನೆಲ್ಲಾ ಇರುತ್ತದೆ ಅನ್ನೋದನ್ನು ಈ ಸುದ್ದಿಯಲ್ಲಿ ತಿಳಿಯೋಣ..
ಭವಿಷ್ಯದ ಅಗತ್ಯತೆಗಳನ್ನು ಪೂರೈಸುವ ರೀತಿಯಲ್ಲಿ ವಿಶೇಷ ವಿನ್ಯಾಸ ಮಾಡಿರುವ ಈ ಕ್ವಿನ್ ಸಿಟಿ-ಯು (Knowledge, Wellbeing, and Innovation City- KWIN City) ಸುಸ್ಥಿರತೆ, ಮನೆ, ಕೆಲಸದ ಸ್ಥಳ ಮತ್ತು ಅತ್ಯಾಧುನಿಕ ನಗರ ಸೇರಿದಂತೆ ಬದುಕಿನ ವಿವಿಧ ಸಂಗತಿಗಳಲ್ಲಿ ತಂತ್ರಜ್ಞಾನದ ನೆರವಿನಿಂದ ದಕ್ಷತೆ ಹಾಗೂ ಅನುಕೂಲತೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಸುಧಾರಿಸುವ 'ಸ್ಮಾರ್ಟ್ ಲಿವಿಂಗ್' ಪರಿಕಲ್ಪನೆ ಕಾರ್ಯರೂಪಕ್ಕೆ ತರಲು ದಾಬಸ್‌ಪೇಟೆ ಮತ್ತು ದೊಡ್ಡಬಳ್ಳಾಪುರ ಮಧ್ಯೆ ಅಸ್ತಿತ್ವಕ್ಕೆ ಬರಲಿದೆ.
ಕ್ವಿನ್ ಸಿಟಿ ಚಿತ್ರಣ (ETV Bharat) ಕ್ವಿನ್ ಸಿಟಿ ಅಂದರೆ ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆ. ಇವುಗಳ ನಡುವಣ ಸಮನ್ವಯತೆಯು ಆರ್ಥಿಕ ಬೆಳವಣಿಗೆ ಉತ್ತೇಜಿಸುವುದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಮುನ್ನಡೆಸಲಿದೆ. ಯೋಜಿತ ನಗರವಾಗಿ ಕ್ವಿನ್ ಸಿಟಿಯು ಅತ್ಯಾಧುನಿಕ ತಂತ್ರಜ್ಞಾನ ಸಂಯೋಜಿಸುವ ಮೂಲಕ ಪರಿಸರ ಸ್ನೇಹಿ ಮೂಲಸೌಲಭ್ಯಗಳ ನೆರವಿನಿಂದ ಹೊಸ-ಯುಗದ, ಸುಸ್ಥಿರ ಜೀವನಶೈಲಿ ಒದಗಿಸಲಿದೆ. ಸ್ವಾವಲಂಬನೆಯ ನೀರು ಮತ್ತು ವಿದ್ಯುತ್ ಸೌಲಭ್ಯಗಳೊಂದಿಗೆ ಭವಿಷ್ಯದ ಸ್ಮಾರ್ಟ್ ನಗರಗಳಿಗೆ ಆದರ್ಶ ಉದಾಹರಣೆಯಾಗಿರಲಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
'ಕ್ವಿನ್ ಸಿಟಿ'ಯ ದೂರದೃಷ್ಟಿ ಸಾಕಾರಗೊಳಿಸಲಿರುವ ಪ್ರಮುಖ ಅಂಶಗಳು:
ಜ್ಞಾನ:ಪ್ರತ್ಯೇಕ ಜ್ಞಾನ ಕೇಂದ್ರದೊಂದಿಗೆ, ಕ್ವಿನ್ ಸಿಟಿ-ಯು ಆಧುನಿಕ ಪಠ್ಯಕ್ರಮ ಮತ್ತು ಉನ್ನತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಒಳಗೊಂಡ ಪ್ರಧಾನ ಶಿಕ್ಷಣ ಕೇಂದ್ರ ಸ್ಥಾಪಿಸಲು ಬಯಸುತ್ತದೆ. ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮಾವಳಿಗಳನ್ನು ಆಧರಿಸಿ ಕ್ಯಾಂಪಸ್‌ಗಳನ್ನು ನಿರ್ವಹಿಸಲು 500 ಉನ್ನತ ವಿದೇಶಿ ಶಿಕ್ಷಣ ಸಂಸ್ಥೆಗಳನ್ನು ಆಕರ್ಷಿಸುವ ಗುರಿಯನ್ನು ನಗರವು ಹೊಂದಿದೆ. ಇದು ಕರ್ನಾಟಕವನ್ನು ಜಾಗತಿಕ ಶಿಕ್ಷಣದ ಕ್ಷೇತ್ರದ ಮುಂಚೂಣಿಗೆ ಕೊಂಡೊಯ್ಯುವ ಶೈಕ್ಷಣಿಕ ವಲಯ ಹಾಗೂ ಉದ್ಯಮದ ಪಾಲುದಾರಿಕೆಗಳನ್ನು ಉತ್ತೇಜಿಸಲಿದೆ.
ಕ್ವಿನ್ ಸಿಟಿ ಚಿತ್ರಣ (ETV Bharat) ಆರೋಗ್ಯ: ಜೀವ ವಿಜ್ಞಾನ (ಲೈಫ್ ಸೈನ್ಸಸ್) ಪಾರ್ಕ್ ಒಳಗೊಂಡಿರುವ ಕ್ವಿನ್ ಸಿಟಿಯು ಏಷ್ಯಾದ ಪ್ರಮುಖ ಶೈಕ್ಷಣಿಕ ವೈದ್ಯಕೀಯ ಕೇಂದ್ರವಾಗಿ ಬೆಳೆಯಲಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಸ್ಪತ್ರೆಗಳನ್ನು ಆಕರ್ಷಿಸುವ ಮೂಲಕ ಆರೋಗ್ಯ ರಕ್ಷಣೆಯ ಭವಿಷ್ಯವನ್ನು ರೂಪಿಸಲಿದೆ. ಈ ಉಪಕ್ರಮವು ವೈದ್ಯಕೀಯ ಕ್ಷೇತ್ರದಲ್ಲಿ ಕರ್ನಾಟಕದ ಸ್ಥಾನಮಾನವನ್ನು ದೇಶಿಯವಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಮಟ್ಟಕ್ಕೆ ಏರಿಸಲಿದೆ. ಇದು ಆರೋಗ್ಯದ ಶ್ರೇಷ್ಠತೆಗೆ ದಾರಿದೀಪವಾಗಿರಲಿದೆ.
ನಾವೀನ್ಯತಾ: ಕ್ವಿನ್ ಸಿಟಿಯು ಜೀವ ವಿಜ್ಞಾನ, ಭವಿಷ್ಯದ ಸಂಚಾರ, ಸೆಮಿಕಂಡಕ್ಟರ್, ಸುಧಾರಿತ ಪರಿಕರ, ಆಧುನಿಕ ತಯಾರಿಕೆ, ವೈಮಾಂತರಿಕ್ಷ ಮತ್ತು ರಕ್ಷಣೆ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮ ವಲಯಗಳ ಅಗತ್ಯಗಳನ್ನು ಪೂರೈಸಲಿದೆ. ಜಾಗತಿಕ ಬದಲಾವಣೆಗಳು ಮತ್ತು ಮಾರುಕಟ್ಟೆ ಬೇಡಿಕೆಗಳಿಗೆ ಹೊಂದಿಕೊಳ್ಳುವ ಮೂಲಕ, ಕ್ವಿನ್ ಸಿಟಿಯು ವಿಶಾಲವಾದ ಉದ್ಯಮ ಕ್ಷೇತ್ರದಲ್ಲಿ ಕರ್ನಾಟಕದ ಪಾತ್ರವನ್ನು ಹೆಚ್ಚಿಸುವ ಗುರಿ ಹೊಂದಿದೆ. ನಿರಂತರವಾದ ನಾವೀನ್ಯತೆಯ ವಾತಾವರಣ ಉತ್ತೇಜಿಸಲಿದೆ.
ಸಂಶೋಧನೆ: ಜೈವಿಕ ಔಷಧ ಮತ್ತು ವೈಜ್ಞಾನಿಕ ಸಂಶೋಧನೆ ಹೆಚ್ಚಿಸಲು ಮೀಸಲಾಗಿರುವ ಕ್ವಿನ್ ಸಿಟಿಯು ಕ್ಲಿನಿಕಲ್ ಪ್ರಯೋಗ ಕೇಂದ್ರಗಳು ಮತ್ತು ಸಂಶೋಧನಾ ಪ್ರಯೋಗಾಲಯಗಳನ್ನು ಸ್ಥಾಪಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಸಂಯೋಜಿಸಲಿದೆ. ಇದು ಜಾಗತಿಕ ಜ್ಞಾನ ಆಧಾರಿತ ಆರ್ಥಿಕತೆಗೆ ಗಣನೀಯವಾಗಿ ಕೊಡುಗೆ ನೀಡುವ, ಪ್ರಕಾಶನ, ಸೆಮಿನಾರ್ ಮತ್ತು ಸಾರ್ವಜನಿಕ ಉಪನ್ಯಾಸಗಳ ಮೂಲಕ ಸಂಶೋಧನೆಗಳ ಪ್ರಸಾರವನ್ನು ಉತ್ತೇಜಿಸಲಿದೆ. ಕ್ವಿನ್ ಸಿಟಿ-ಯು ಅಭಿವೃದ್ಧಿಗಿಂತ ಹೆಚ್ಚಿನದಾಗಿದೆ. ಶಿಕ್ಷಣ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆಗಾಗಿ ವಿಶ್ವ ದರ್ಜೆಯ ಕೇಂದ್ರವನ್ನು ನಿರ್ಮಿಸಲಿದೆ.
ಇದನ್ನೂ ಓದಿ:ದಾಬಸ್ ಪೇಟೆ- ದೊಡ್ಡಬಳ್ಳಾಪುರ ಮಧ್ಯೆ ತಲೆಎತ್ತಲಿದೆ ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರ - KWIN CITY PROJECT