ಬೆಂಗಳೂರು:"ವಿಧಾನ ಪರಿಷತ್ ಸದಸ್ಯಸಿ.ಟಿ.ರವಿ ಬಹಿರಂಗ ಕ್ಷಮೆ ಕೇಳಿದ್ರೆ ಎಲ್ಲವೂ ಮುಗಿಯುತ್ತದೆ" ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಸಿದ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಸಿ.ಟಿ.ರವಿ ಹೇಳಿರುವ ಪದವನ್ನು ಯಾರೂ ಸೃಷ್ಟಿಸಿ ಹೇಳಲು ಸಾಧ್ಯವಿಲ್ಲ. ಆ ಪದ ಬಳಕೆ ಘೋರ ಅಪರಾಧ, ಕೆಟ್ಟ ಸಂಸ್ಕೃತಿ. ಪ್ರಚೋದನೆ ಆದ್ರೂ ಈ ಶಬ್ದ ಬಳಸ್ತೀರಾ?. ಇದೇನಾ ಸಂಸ್ಕೃತಿ?. ತಪ್ಪು. ನಾವು ಖಂಡಿಸುತ್ತೇವೆ" ಎಂದು ವಾಗ್ದಾಳಿ ನಡೆಸಿದರು.
"ಸಿ.ಟಿ.ರವಿಯನ್ನು ರಾತ್ರಿಯಿಡೀ ಪೊಲೀಸರು ಸುತ್ತಿಸಿದ ಕುರಿತು ತನಿಖೆ ನಡೆಯುತ್ತಿದೆ. ಗೃಹ ಸಚಿವರು ಅದರ ಬಗ್ಗೆ ಮಾತಾಡ್ತಾರೆ. ಯಾವುದೇ ಹೆಣ್ಣು ಮಗಳು ಊಹಿಸಿಕೊಂಡು ಈ ರೀತಿಯ ಆರೋಪ ಮಾಡಲು ಸಾಧ್ಯವಿಲ್ಲ. ದೇಶದ ಬಗ್ಗೆ ಸಂಸ್ಕೃತಿ ಬಗ್ಗೆ ಪಾಠ ಹೇಳುತ್ತಾರೆ, ಇದು ಅವರ ಸಂಸ್ಕೃತಿ" ಎಂದು ಕಿಡಿ ಕಾರಿದರು.
ಎನ್‌ಕೌಂಟರ್ ಮಾಡಲು ಹೊರಟಿದ್ದರು ಎಂಬ ಬಿಜೆಪಿ ಆರೋಪಕ್ಕೆ, "ಬಳಸಿದ ಪದಕ್ಕೆ ಪ್ರತಿಯಾಗಿ ಇದೆಲ್ಲ ಸೃಷ್ಟಿಸ್ತಿದ್ದಾರೆ. ರವಿ ಬಹಿರಂಗ ಕ್ಷಮೆ ಕೇಳಿದ್ರೆ ಎಲ್ಲಾ ಮುಗಿಯುತ್ತದೆ. ಅದು ಫೇಕ್ ಎನ್‌ಕೌಂಟರ್ ಅಲ್ಲ ಫೇಕ್ ಕೌಂಟರ್" ಎಂದರು.