ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂಬ ಚಿಂತನೆ ಮಾಡುತ್ತೇನೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಬಂದಿದ್ದೇನೆ. ಅಕ್ರಮ ಸಕ್ರಮ ಲೇಔಟ್ನಿಂದ ಬಡವರಿಗೆ ಅನ್ಯಾಯ ಆಗದಂತೆ ಎಚ್ಚರ ವಹಿಸುತ್ತೇನೆ ಎಂದು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಶಾಕೀರ್ ಸನದಿ ಹೇಳಿದರು.
ಅಕ್ರಮ ಸಕ್ರಮ ಲೇಔಟ್ ಮಾಡುವವರ ವಿರುದ್ಧ ಕ್ರಮ:ನಗರದ ಹುಡಾ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಬರುವ ದಿನಗಳಲ್ಲಿ ಎಲ್ಲ ಮಾಲೀಕತ್ವ ತೆಗೆದುಕೊಳ್ಳಲು ನಿಗಮ ಸಿದ್ಧವಿದೆ. ಕಡಿಮೆ ಬೆಲೆಯಲ್ಲಿ ಜಮೀನು ಪಡೆದ ಲೇಔಟ್ ಮಾಡಿ ಕೊಡುವ ಯೋಜನೆ ಇದೆ. ಕೆಲವರು ಭೂ ಮಾಫಿಯಾದವರು ಕಡಿಮೆ ಬೆಲೆಗೆ ಬಾಂಡ್ ಮೇಲೆ ಬರೆಸಿಕೊಂಡು ಸರ್ಕಾರಕ್ಕೆ ಹಾಗೂ ಮಾಲೀಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇನ್ನು ಮುಂದೆ ಅಕ್ರಮ ಸಕ್ರಮ ಲೇಔಟ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ರವಾನಿಸಿದರು.
ಪ್ರಾಧಿಕಾರದಿಂದ ಎನ್ ಎ ಸೈಟ್ಗಳನ್ನು ನಿರ್ಮಿಸಿ ಕೊಡುವ ಪ್ರಯತ್ನ ಮಾಡುತ್ತೇವೆ. ಜನರು ಅಕ್ರಮ ಸಕ್ರಮ ಲೇಔಟ್ ಮಾಡಿ ಖರೀದಿಸುವ ಕೆಲಸ ಮಾಡಬೇಡಿ. ಜಾಗ ಅಗತ್ಯವಿದ್ದಲ್ಲಿ ಪ್ರಾಧಿಕಾರ ಸಂಪರ್ಕಿಸಿ ಉತ್ತಮ ಹಾಗೂ ನ್ಯಾಯಯುತ ಸೈಟ್ ಪಡೆದುಕೊಳ್ಳಿ. ನಾನು ಖಾಲಿ ಕೈಯಲ್ಲಿಯೇ ಅಧಿಕಾರ ವಹಿಸಿದ್ದೇನೆ. ನಾಳೆಯೂ ಹಾಗೆಯೇ ಹೋಗುತ್ತೇನೆ. ಆದರೆ ಅಧಿಕಾರದ ಅವಧಿಯಲ್ಲಿ ಯಾವುದೇ ಅಕ್ರಮಕ್ಕೆ ದಾರಿ ಮಾಡಿ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದೆ ಅನೇಕರು ಅಕ್ರಮಕ್ಕೆ ಸಾಥ್ ಸಹ ನೀಡಿರುವ ಬಗ್ಗೆ ಮಾಹಿತಿ ಇದೆ. ಅದನ್ನು ಪರಿಶೀಲಿಸಿ ನಾನು ಸುಧಾರಿಸುವ ಕೆಲಸ ಮಾಡುತ್ತೇನೆ ಎಂದರು. ಈಗ ಪ್ರಾಧಿಕಾರದಿಂದ ಎರಡು ಯೋಜನೆಗೆ ಚರ್ಚೆ ನಡೆಸಿದ್ದೇನೆ. ಅದರಲ್ಲಿ ಹೊಸ ಲೇಔಟ್ ಮಾಡುವುದು. ಜಮೀನು ಮಾಲೀಕರ ಜತೆಗೆ ಜೆವಿ ಮೂಲಕ 50% ಅಡಿಯಲ್ಲಿ ಲೇಔಟ್ ನಿರ್ಮಿಸಿ ಮಾರಾಟ ಮಾಡುವ ಚಿಂತನೆ ಇದೆ. ಕನಿಷ್ಠ 50 ಎಕರೆ ಜಮೀನು ಪಡೆದು ಈ ಯೋಜನೆ ಮಾಡುವ ಚಿಂತನೆ ಇದೆ ಎಂದು ತಿಳಿಸಿದರು.
ಪತ್ರಕರ್ತರಿಗೆ ನಿವೇಶನ:ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಹಾಗೂ ಸರ್ಕಾರದ ಕೆಲಸದಲ್ಲಿ ಭ್ರಷ್ಟಾಚಾರ ಮಾಡದಂತೆ ತಡೆಯಲು, ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಕೆಲವೇ ದಿನಗಳಲ್ಲಿ ನನ್ಮ ಕಾರ್ಯವೈಖರಿ ತಿಳಿಯಲಿದೆ. ಬರುವ ದಿನಗಳಲ್ಲಿ ಪತ್ರಕರ್ತರಿಗೆ ಮನೆ ನಿರ್ಮಿಸಿಕೊಳ್ಳಲು ನಿವೇಶನ ಮಾಡುವ ಕುರಿತು ಪ್ರಯತ್ನಿಸಲಾಗುವುದು. ಇಲ್ಲದೇ ಹೋದಲ್ಲಿ ಬರುವ ದಿನಗಳಲ್ಲಿ ಹೊಸದಾಗಿ ಲೇಔಟ್ ನಿರ್ಮಿಸುವವರಿಗೆ ಶೇ.5% ಮೀಸಲಾತಿ ನೀಡುವ ಪ್ರಯತ್ನ ಮಾಡಲಾಗುವುದು. ಹೊಸದಾಗಿ ಮಾಡುವಾಗ ಪತ್ರಕರ್ತರಿಗೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು.