ಮಂಗಳೂರು:ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭಾನುವಾರ ಆಗಮಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ದೇವರಿಗೆ ಪೂಜೆ ಸಲ್ಲಿಸಿ, ರಾಹುಲ್ಗೆ ಪ್ರಸಾದ ನೀಡಿದರು. ಬಳಿಕ ರಾಹುಲ್ ಮೂಲ್ಕಿ ಸೀಮೆಯ ಶಿಮಂತೂರು ಆದಿ ಜನಾರ್ದನ ದೇವಸ್ಥಾನ ಹಾಗೂ ಕಕ್ವಗುತ್ತು ಮೂಲ ನಾಗ ಕ್ಷೇತ್ರಗಳಿಗೂ ಭೇಟಿ ನೀಡಿದರು.
ಈ ವೇಳೆ, ಬಪ್ಪನಾಡು ಕ್ಷೇತ್ರದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ ಕೆ.ಎಲ್.ರಾಹುಲ್ ಅವರ ಪತ್ನಿ, ನಟಿ ಅಥಿಯಾ ಶೆಟ್ಟಿ, ನಟ ಅಹನ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಸುನಿಲ್ ಆಳ್ವ ಹಾಗೂ ಅಶ್ವಿನ್ ಆಳ್ವ ಕುಬೆವೂರು ಮತ್ತಿತರರು ಉಪಸ್ಥಿತರಿದ್ದರು.
ಮೂಲ್ಕಿಯ ಅಳಿಯ:ಅಥಿಯಾ ಶೆಟ್ಟಿ ತಂದೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಮೂಲತಃ ಮೂಲ್ಕಿಯವರು. ಸುನಿಲ್ ಶೆಟ್ಟಿ ಅವರ ಅಳಿಯನಾಗಿ ರಾಹುಲ್ ಮೂಲ್ಕಿಗೆ ನೀಡಿದ ಪ್ರಥಮ ಭೇಟಿ ಇದಾಗಿದೆ. ರಾಹುಲ್ ಆಗಮಿಸುತ್ತಲೇ ಅಭಿಮಾನಿಗಳು ಅವರ ಜೊತೆ ಸೆಲ್ಫಿ, ಫೋಟೋಗಾಗಿ ಮುಗಿಬಿದ್ದರು. ಶಿಮಂತೂರು ಕ್ಷೇತ್ರದಲ್ಲಿ ಕೆಲ ಮಕ್ಕಳು ಬ್ಯಾಟ್ ಹಾಗೂ ಪುಸ್ತಕದ ಮೇಲೆ ರಾಹುಲ್ ಅವರ ಹಸ್ತಾಕ್ಷರ ಪಡೆದರಲ್ಲದೆ, ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.
ಅಭಿಮಾನಿಗಳ ಜೊತೆ ರಾಹುಲ್ ತುಳುವಿನಲ್ಲಿಯೇ ಮಾತನಾಡಿ ಮನಗೆದ್ದರು. ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಅವರಿಗೆ ಅಭಿಮಾನಿಗಳು ಶುಭ ಹಾರೈಸಿದರು.
ಇದನ್ನೂ ಓದಿ:ಕೊರಗಜ್ಜನ ಕೋಲದಲ್ಲಿ ನಟಿ ಕತ್ರಿನಾ ಕೈಫ್, ಕ್ರಿಕೆಟಿಗ ಕೆಎಲ್ ರಾಹುಲ್ ಭಾಗಿ - Koragajja kola