ರಾಮನಗರ:ರಾಜ್ಯಸರ್ಕಾರ ಕುಸಿಯುವ ಹಂತಕ್ಕೆ ಬಂದು ತಲುಪಿದೆ. ಈ ಸರ್ಕಾರದಲ್ಲಿ ಬಹಳ ಗೊಂದಲ ಇದ್ದು, ದಿನಬೆಳಗಾದರೇ ಸಾಕು 108 ಹಗರಣಗಳು ಹೊರಗಡೆ ಬರ್ತಿವೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಆರೋಪಿಸಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಸರ್ಕಾರ ಈಗ ಐಸಿಯುನಲ್ಲಿದ್ದು, ಪ್ರತಿ ದಿನ ನೂರೆಂಟು ಹಗರಣಗಳು ಬೆಳಕಿಗೆ ಬರುತ್ತಲಿವೆ. ಮೂಡಾ, ವಾಲ್ಮಿಕಿ ಇಲಾಖೆ ಹಗರಣ ಹೊರ ಬಂದಿವೆ. ಒಂದೇ ವರ್ಷದಲ್ಲಿ ಜನವಿರೋಧಿ ಸರ್ಕಾರ ಎಂದು ಖ್ಯಾತಿ ಗಳಿಸಿದೆ. ಡಿಕೆ ಶಿವಕುಮಾರ್ ಸತತ ಮೂರು ದಿನ ಜನಸ್ಪಂದನ ಕಾರ್ಯಕ್ರಮ ಮಾಡಿದ್ದಾರೆ. ಉಪಚುನಾವಣೆ ಮನಸ್ಸಲ್ಲಿ ಇಟ್ಟುಕೊಂಡು ಜನಸ್ಪಂದನ ಕಾರ್ಯಕ್ರಮ ಮಾಡಿದ್ದಾರೆ. ಮತದಾರರಿಗೆ ಆಸೆ ಆಮಿಷ ತೋರಿಸಿ, ಸರ್ಕಾರದ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳಲ್ಲಿ ಭಯ ಬರುವಂತಹ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಒಂದು ವರ್ಷ ಅವಧಿಯಲ್ಲಿ ಸರ್ಕಾರ ಮಾಡಿರುವ ಯೋಜನೆ ಅನುಷ್ಠಾನದ ಬಗ್ಗೆ ಮಾತಾಡಿಲ್ಲ ಎಂದು ದೂರಿದರು.
ಮತದಾರರ ಫೋನ್ ನಂಬರ್ ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಅವರಿಷ್ಟ ಬಂದಂತೆ ನಡೆದುಕೊಂಡಿದ್ದಾರೆ. ಸರ್ಕಾರಿ ಯಂತ್ರವನ್ನು ಸ್ವಂತ ಸ್ವತ್ತಾಗಿ ದುರುಪಯೋಗ ಮಾಡಿದ್ದಾರೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಪ್ರೋಟೊಕಾಲ್ ಕೂಡ ಪಾಲನೆ ಆಗಿಲ್ಲ. ನನ್ನನ್ನು ಕರೆದಿಲ್ಲ, ನಗರಸಭಾ ಅಧ್ಯಕ್ಷರನ್ನೂ ಕರೆದಿಲ್ಲ ಎಂದು ಕಿಡಿಕಾರಿದರು. 40 ವರ್ಷದಿಂದ ಡಿಕೆಶಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಚನ್ನಪಟ್ಟಣಕ್ಕೆ ಏನು ಮಾಡಿದ್ದಾರೆ. ಉಪಚುನಾವಣೆ ಹಿನ್ನೆಲೆ ಇಲ್ಲಿ ಬಂದು ಡ್ರಾಮಾ ಮಾಡ್ತಿದ್ದಾರೆ. ಮುಂದೆ ಈ ರೀತಿ ಅನೌಪಚಾರಿಕವಾಗಿ ಸಭೆ ಮಾಡೋದನ್ನು ವಿರೋಧ ಮಾಡುತ್ತೇವೆ ಎಂದರು.