ಬೆಂಗಳೂರು :ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಮಾನಹಾನಿ ಹೇಳಿಕೆ ಸುದ್ದಿ ಪ್ರಕಟ/ಪ್ರಸಾರ ಮಾಡದಂತೆ ಮಾಧ್ಯಮ ಸಂಸ್ಥೆಗಳು ಮತ್ತು ವಕೀಲ ಕೆ. ಎನ್ ಜಗದೀಶ್ ಅವರಿಗೆ ನಗರದ ಸೆಷನ್ಸ್ ನ್ಯಾಯಾಲಯ ಏಕಪಕ್ಷೀಯ ಮಧ್ಯಂತರ ನಿರ್ಬಂಧಕಾಜ್ಞೆ ಆದೇಶ ಮಾಡಿದೆ.
ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಸಲ್ಲಿಸಿರುವ ಅಸಲು ದಾವೆಯ ಭಾಗವಾಗಿ ಸಲ್ಲಿಕೆಯಾಗಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ 8ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು ಆದೇಶ ಮಾಡಿದ್ದಾರೆ.
ಪ್ರತಿವಾದಿಗಳಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿಗಳು ಮುಂದಿನ ವಿಚಾರಣೆಯವರೆಗೆ ಫಿರ್ಯಾದಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಮಾನಹಾನಿ ಉಂಟು ಮಾಡುವ ಸುದ್ದಿ ಪ್ರಸಾರ, ಪ್ರಕಟ ಮತ್ತು ಹಂಚಿಕೆ ಮಾಡಬಾರದು.
ಈ ಸಂಬಂಧ ಬೊಮ್ಮಾಯಿ ವಿರುದ್ಧ ಮಾಡಿರುವ ಟ್ವಿಟ್ಗಳನ್ನು 24 ಗಂಟೆಯ ಒಳಗೆ ತೆಗೆದು ಹಾಕಬೇಕು. ಫಿರ್ಯಾದಿ ಬೊಮ್ಮಾಯಿ ಅವರು ನಾಗರಿಕ ಪ್ರಕ್ರಿಯಾ ಸಂಹಿತೆ ನಿಯಮಗಳನ್ನು ಅನುಪಾಲಿಸಬೇಕು. ಏಕಪಕ್ಷೀಯ ಮಧ್ಯಂತರ ಪ್ರತಿಬಂಧಕಾದೇಶ ಮಾಡಲಾಗಿದ್ದು, ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ನೋಟಿಸ್ ಮತ್ತು ಸಮನ್ಸ್ ಜಾರಿ ಮಾಡಿ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ :ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ಧ; ಸಿಎಂಗೆ ಬಸವರಾಜ ಬೊಮ್ಮಾಯಿ ಸವಾಲು - mp Basavaraj Bommai