ಬೆಂಗಳೂರು:ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಬಿಜೆಪಿ ಶಾಸಕ ಮುನಿರತ್ನಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿದೆ.
ಗುತ್ತಿಗೆದಾರನಿಗೆ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಮುನಿರತ್ನ ಅವರನ್ನು ಅತ್ಯಾಚಾರದ ಆರೋಪ ಪ್ರಕರಣದಲ್ಲಿ ಗುರುವಾರ ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದರು. ಇಂದು ನ್ಯಾಯಾಲಯದ ಮುಂದೆ ಹಾಜರಾದ ಮುನಿರತ್ನ ಅವರಿಗೆ ಅಕ್ಟೋಬರ್ 5ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
'ತಮ್ಮನ್ನು ಜೈಲಿನಲ್ಲಿರಿಸಲು ವ್ಯವಸ್ಥಿತವಾದ ಷಡ್ಯಂತ್ರ ರೂಪಿಸಲಾಗಿದೆ. ಲೋಕಸಭಾ ಚುನಾವಣೆಯ ನಂತರ ಈ ಸಂಚು ಶುರುವಾಗಿದೆ. ಜೊತೆಗಿದ್ದವರನ್ನೇ ಬಳಸಿಕೊಂಡು ಒಂದರ ಹಿಂದೊಂದು ದೂರು ಕೊಡಿಸಲಾಗುತ್ತಿದೆ. ಐದು ವರ್ಷಗಳ ಹಿಂದಿನದ್ದು ಎಂದು ಅತ್ಯಾಚಾರದ ದೂರು ಕೊಡಿಸಿದ್ದಾರೆ. ಆಕೆ ಮೊದಲೇ ದೂರು ಕೊಡಬಹುದಿತ್ತಲ್ಲವೇ?. ಜನಪ್ರತಿನಿಧಿಯಾದ ನನಗೆ ಜನರ ಬಳಿ ಹೇಗೆ ನಡೆದುಕೊಳ್ಳಬೇಕು ಎಂದು ಗೊತ್ತಿದೆ. ಬೇಕಿದ್ದರೆ ನಾನು ನ್ಯಾಯಾಲಯದಲ್ಲೇ ನನ್ನ ರಾಜೀನಾಮೆ ಕೊಡುತ್ತೇನೆ. ಆದರೆ ಈ ರೀತಿಯ ಹಿಂಸೆ ತಡೆದುಕೊಳ್ಳಲು ಸಾಧ್ಯವಿಲ್ಲ' ಎಂದು ನ್ಯಾಯಾಧೀಶರೆದುರು ಅಳಲು ತೋಡಿಕೊಂಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿಗೆ ಮುನಿರತ್ನ:ನ್ಯಾಯಾಂಗ ಬಂಧನ ಹಿನ್ನೆಲೆಯಲ್ಲಿ ಮುನಿರತ್ನರನ್ನು ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ. ಜೈಲಿಗೆ ಕರೆತರುವ ಹಿನ್ನೆಲೆಯಲ್ಲಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಇದನ್ನೂ ಓದಿ:ಆರ್.ಅಶೋಕ್ ವಿರುದ್ಧ ಮುನಿರತ್ನ ಷಡ್ಯಂತ್ರ ನೋಡಿ ನನಗೇ ದಿಗ್ಭ್ರಮೆ ಆಗಿದೆ: ಡಿಸಿಎಂ ಡಿ.ಕೆ.ಶಿವಕುಮಾರ್ - D K Shivakumar