ಬೆಂಗಳೂರು: ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ವಿನ್ಯಾಸ ಮತ್ತು ಯೋಜನೆಗಳನ್ನು ರೂಪಿಸುವುದು ಅಧಿಕಾರಶಾಹಿಯ ಕರ್ತವ್ಯ. ಅದರ ಮಾರ್ಗ (ಅಲೈನ್ಮೆಂಟ್) ಹೇಗಿರಬೇಕು ಎಂಬ ಬಗ್ಗೆ ಕೋರ್ಟ್‌ಗಳು ಯಾವುದೇ ರೀತಿಯ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಕೊಪ್ಪಳದ ಯಲಬುರ್ಗಾ ತಾಲೂಕಿನ ರೈತರು ರಾಷ್ಟ್ರೀಯ ಹೆದ್ದಾರಿಯನ್ನು ತಮ್ಮ ಜಮೀನಿನಲ್ಲಿ ಹಾದು ಹೋಗುವಂತೆ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಯಲಬುರ್ಗಾದ ಈರಣ್ಣ ಮತ್ತು ಸಿದ್ದರಾಮೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯಪೀಠ ಈ ಆದೇಶ ಮಾಡಿದೆ.
ಅರ್ಜಿದಾರರ ವಾದ ಆಲಿಸಿದ ಬಳಿಕ ನ್ಯಾಯಪೀಠ, ರಸ್ತೆಗಳ ಅಭಿವೃದ್ಧಿ, ಅವುಗಳ ಆಳ, ಅಗಲ, ಉದ್ದ ಮತ್ತು ಅದರ ವಿನ್ಯಾಸ ಸೇರಿ ಮತ್ತಿತರ ಅಂಶಗಳನ್ನು ಅಧಿಕಾರಶಾಹಿ ನಿರ್ಧರಿಸಲಿದೆ. ಮೂಲತಃ ಇದು ಅವರ ಕೆಲಸ ಕಾರ್ಯಗಳು. ಆ ಕ್ಷೇತ್ರ ನ್ಯಾಯಾಂಗಕ್ಕೆ ಅನ್ಯಲೋಕ (ಏಲಿಯನ್) ಇದ್ದಂತೆ. ನ್ಯಾಯಾಲಯ ಅಂತಹ ವಿಚಾರಗಳಲ್ಲಿ ಯಾವುದೇ ನಿರ್ದೇಶನಗಳನ್ನು ನೀಡಲಾಗದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.