ಕರ್ನಾಟಕ

karnataka

ETV Bharat / state

ವಿಮಾನದಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ವಿಡಿಯೋ ಕಾನ್ಫೆರೆನ್ಸ್​ನಲ್ಲಿ ವಿಚಾರಣೆ ನಡೆಸಿ ಅಪರಾಧಿಗೆ ಶಿಕ್ಷೆ ವಿಧಿಸಿದ ಕೋರ್ಟ್​​ - Minor Sexual Harassment Case - MINOR SEXUAL HARASSMENT CASE

ವಿಮಾನದಲ್ಲಿ ಪ್ರಯಾಣಿಸುವಾಗ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಿಗೆ ನ್ಯಾಯಾಲಯ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ. ಪ್ರಯಾಣದ ವೇಳೆ ಮದ್ಯಪಾನ ಮಾಡಿದ್ದ ಅಪರಾಧಿ, ಬಾಲಕಿಯ ದೇಹವನ್ನು ಅಸಭ್ಯವಾಗಿ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.

pocso case
ವಿಮಾನ, ಕೋರ್ಟ್​​ (ANI And ETV Bharat)

By ETV Bharat Karnataka Team

Published : Sep 7, 2024, 4:02 PM IST

ಬೆಂಗಳೂರು: ಅಮೆರಿಕದ ವಾಷಿಂಗ್ಟನ್​ನಿಂದ ಬೆಂಗಳೂರು ನಗರಕ್ಕೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಿಗೆ ಬೆಂಗಳೂರು ಗ್ರಾಮಾಂತರ 1ನೇ ತ್ವರಿತಗತಿಯ ನ್ಯಾಯಾಲಯ 3 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ಆದೇಶಿಸಿದೆ. ತಮಿಳುನಾಡಿನ ಕೊಡಂಗಿಪಟ್ಟೈ ಮೂಲದ ಅಮಾವಶೈ ಮುರುಗೇಸನ್ ಎಂಬಾತ ಶಿಕ್ಷೆಗೆ ಗುರಿಯಾದ ವ್ಯಕ್ತಿ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ.ಎನ್. ಸರಸ್ವತಿ ಅವರು, ಸಂತ್ರಸ್ತ ಬಾಲಕಿ ಮತ್ತು ಅವರ ಪೋಷಕರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ ಈ ಆದೇಶ ನೀಡಿದ್ದಾರೆ.

2023ರ ಜೂನ್ 27ರಂದು ಸಂತ್ರಸ್ತ ಬಾಲಕಿ ಅವರ ಪೋಷಕರೊಂದಿಗೆ ಅಮೆರಿಕದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ದೋಹಾದಿಂದ ಬೆಂಗಳೂರಿಗೆ ಬರುವ ಸಂದರ್ಭದಲ್ಲಿ ಅಪರಾಧಿ ಮುರಗೇಸನ್, ಬಾಲಕಿಯ ಪಕ್ಕದ ಸೀಟಿನಲ್ಲಿ ಕುಳಿತಿದ್ದ. ಈ ವೇಳೆ ಮದ್ಯಪಾನ ಮಾಡಿದ್ದ ಮುರುಗೇಸನ್ ಬಾಲಕಿಯ ದೇಹವನ್ನು ಅಸಭ್ಯವಾಗಿ ಮುಟ್ಟಿದ್ದ. ಆ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆಯ ಪೋಷಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಆರೋಪಿಗೆ ಶಿಕ್ಷೆ ವಿಧಿಸಿದೆ. ಪ್ರಕರಣ ಸಂಬಂಧ ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ವಕೀಲರಾದ ಎ. ಚಂದ್ರಕಲಾ ವಾದ ಮಂಡಿಸಿದ್ದರು.

ಇದನ್ನೂ ಓದಿ:ಮಕ್ಕಳ ಅಶ್ಲೀಲ ವಿಡಿಯೋ ಚಿತ್ರೀಕರಣ ಆರೋಪ: ಶಿಕ್ಷಕನ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ - POCSO Case

ABOUT THE AUTHOR

...view details