ಬೆಂಗಳೂರು:''ಎಂಎಲ್ಸಿ ಸಿ.ಟಿ.ರವಿ ಪದ ಬಳಕೆ ಪ್ರಕರಣ ಮುಗಿದ ಅಧ್ಯಾಯ. ಎಥಿಕ್ಸ್ ಕಮಿಟಿಗೆ ಕೊಡುವ ಅವಶ್ಯಕತೆ ಬರುವುದಿಲ್ಲ'' ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಅವರು, ಎಥಿಕ್ಸ್ ಕಮಿಟಿ ರಚನೆ ಬಗ್ಗೆ ಚರ್ಚೆಯಾಗುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ''ಎಥಿಕ್ಸ್ ಕಮಿಟಿಗೆ ಕೊಡುವ ಅವಶ್ಯಕತೆ ಬರುವುದಿಲ್ಲ. ನಾನು ಸದನದಲ್ಲಿ ರೂಲಿಂಗ್ ಕೊಟ್ಟಿದ್ದೇನೆ. ಇದರ ಅವಶ್ಯಕತೆ ಬರುವುದಿಲ್ಲ. ಕೆಳಗಿನ ಮನೆಯ ಬಗ್ಗೆ ನಾನು ಮಾತನಾಡುವುದಿಲ್ಲ. ಈಗ ಹಕ್ಕುಚ್ಯುತಿ ಬಗ್ಗೆ ಪತ್ರ ಬಂದಿದೆ. ಅದರ ಬಗ್ಗೆ ಏನು ಕ್ರಮ ಆಗಬೇಕೋ ಅದನ್ನು ಮಾಡುತ್ತೇವೆ. ಮಹಿಳಾ ಆಯೋಗದಿಂದ ದೂರು ಬಂದರೆ ಉತ್ತರ ಕೊಡುತ್ತೇನೆ. ಅವರು ನನ್ನ ಪ್ರಶ್ನೆ ಮಾಡಲು ಬರುವುದಿಲ್ಲ'' ಎಂದು ತಿಳಿಸಿದರು.
''ಪೊಲೀಸರು ನನಗೆ ರಾತ್ರಿ 9 ಗಂಟೆಗೆ ಮಾಹಿತಿ ಕೊಟ್ಟಿದ್ದಾರೆ. ಆರೆಸ್ಟ್ ಮಾಡುವಾಗ ನನಗೆ ಮಾಹಿತಿ ಬಂದಿದೆ. ವಿಧಾನಪರಿಷತ್ ಸದಸ್ಯರ ಮೇಲೆ ಹಲ್ಲೆಗೆ ಮುಂದಾದವರನ್ನು ಬಂಧಿಸಲು ಸೂಚಿಸಿದ್ದೇನೆ. ವಿಧಾನಪರಿಷತ್ ಮೊಗಸಾಲೆಯಲ್ಲಿ ದಾಳಿ ಮಾಡುತ್ತಾರೆ ಅಂದರೆ ಸರಿಯಲ್ಲ. ಹೀಗಾಗಿ, ಅವರನ್ನು ಬಂಧಿಸಲು ಸೂಚಿಸಿದ್ದೇನೆ'' ಎಂದರು.
ಪೊಲೀಸರು ಹಸ್ತಕ್ಷೇಪ ಮಾಡಿದರೆ ಕ್ರಮ:''ಇದು ಮುಗಿದ ಅಧ್ಯಾಯ. ಎರಡ್ಮೂರು ಗಂಟೆಗಳ ಕಾಲ ಚರ್ಚೆ ಮಾಡಿದ್ದೇವೆ. ಆದಾದ ಬಳಿಕ ನಾನು ರೂಲಿಂಗ್ ಕೊಟ್ಟಿದ್ದೇನೆ. ಹೊರಗೆ ಆದ ಗದ್ದಲಕ್ಕೆ ನಾವು ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ. ಆ ಗಲಾಟೆಗೂ ನಮ್ಮ ಸದನಕ್ಕೂ ಏನೇನೂ ಸಂಬಂಧವಿಲ್ಲ. ಹೊರಗಡೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಅದಕ್ಕೆ ಬಂಧನ ಮಾಡುವುದು, ಇನ್ನೊಂದು ಮತ್ತೊಂದು ಆಗಿದೆ. ಒಂದೇ ಒಂದು ವಿಚಾರ ಇಲ್ಲಿ ನಡೆದಿದೆ. ವಿಧಾನಪರಿಷತ್‌ನಲ್ಲಿ ಅದೆಲ್ಲ ಆಗಿದೆ ಅಂದಿದ್ದಾರೆ. ಅದು ತಪ್ಪು. ಸದನದೊಳಗೆ ನಡೆದ ಪ್ರಕ್ರಿಯೆಗೆ ಪೊಲೀಸರು ಹಸ್ತಕ್ಷೇಪ ಮಾಡಬಾರದು. ಅವರು ಮಾಡಿದ್ದೇ ಆದರೆ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ'' ಎಂದು ಇದೇ ವೇಳೆ ಸಭಾಪತಿ ತಿಳಿಸಿದರು.