ಬೆಂಗಳೂರು:ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿರುವ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಗುತ್ತಿಗೆದಾರ ಚಲುವರಾಜು ಸಿಎಂ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಚಲುವರಾಜು, ಎಫ್ಐಆರ್ ದಾಖಲಾದ ಬಳಿಕ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿ ಅಸಹ್ಯವಾಗಿ ವರ್ತಿಸಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಜೊತೆಗೆ ಜಾತಿ ನಿಂದನೆ ಮಾಡಿದ್ದಾರೆ. ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ. ಬೆಂಗಳೂರು ಪಶ್ಚಿಮ ಜಿಲ್ಲಾಧ್ಯಕ್ಷ ಈ ವೇಳೆ ಹನುಮಂತರಾಯಪ್ಪ ಉಪಸ್ಥಿತರಿದ್ದರು.
ಶಾಸಕ ಮುನಿರತ್ನ ಸೆಪ್ಟೆಂಬರ್ 9ರಂದು 20 ಲಕ್ಷ ಹಣ ಕೇಳಿದ್ದಾರೆ. ಅಲ್ಲದೇ, ಹಣ ನೀಡದಿದ್ದರೆ ರೇಣುಕಾಸ್ವಾಮಿ ರೀತಿ ಕೊಲೆ ಮಾಡುವುದಾಗಿ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರ ಚಲುವರಾಜು ದೂರು ನೀಡಿದ್ದಾರೆ. ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಆರ್.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್ಐಆರ್ ದಾಖಲಾಗಿವೆ. ಜೀವ ಬೆದರಿಕೆ, ಜಾತಿ ನಿಂದನೆ ಮಾಡಿದ ಆರೋಪದಡಿ ಪ್ರತ್ಯೇಕ ಎರಡು ಪ್ರಕರಣ ದಾಖಲಿಸಲಾಗಿದೆ. ಶಾಸಕ ಮುನಿರತ್ನ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದು, ಕೂಡಲೇ ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ:ಗುತ್ತಿಗೆದಾರನಿಗೆ ಬೆದರಿಕೆ, ಜಾತಿ ನಿಂದನೆ ಆರೋಪ: ಶಾಸಕ ಮುನಿರತ್ನ ವಿರುದ್ಧ ಎರಡು ಪ್ರತ್ಯೇಕ ಎಫ್ಐಆರ್ - FIR Against MLA Muniratna
ಮುನಿರತ್ನ ಉಚ್ಚಾಟನೆಗೆ ಡಿ.ಕೆ.ಸುರೇಶ್ ಆಗ್ರಹ: 'ಜಾತಿ ನಿಂದನೆ ಹಾಗೂ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವ ಹಾಗೂ ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿರುವ ಶಾಸಕ ಮುನಿರತ್ನ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಬೇಕು ಹಾಗೂ ವಿಧಾನಸಭಾ ಸ್ಪೀಕರ್ ಅವರು ಶಾಸಕ ಸ್ಥಾನದಿಂದ ವಜಾ ಮಾಡಬೇಕು' ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, 'ಮುನಿರತ್ನ ಅವರಂತ ನಾಯಕರು ರಾಜ್ಯದಲ್ಲಿ ಇದ್ದರೆ ಜಾತಿ ಸಂಘರ್ಷಗಳು ಹೆಚ್ಚಾಗುತ್ತವೆ. ಆದ ಕಾರಣಕ್ಕೆ ಇವರ ಮೇಲೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರಲ್ಲಿ ಮನವಿ ಮಾಡುತ್ತೇನೆ. ಬಿಜೆಪಿ ಕೇಂದ್ರ ನಾಯಕರಿಗೆ ಕಿವಿ ಕೇಳಿಸುತ್ತಿದ್ದರೆ, ಕೀಳು ಮಟ್ಟದ ಪದ ಬಳಕೆ ಮಾಡಿರುವ ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಿ. ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರೇ ಸಮುದಾಯದ ತಾಯಂದಿರನ್ನು ಅವಮಾನಿಸಿದ್ದಾರೆ. ಇದಕ್ಕೆ ನೀವೇ ಉತ್ತರಿಸಬೇಕು. ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಅವರು ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಇದರ ಬಗ್ಗೆ ಉತ್ತರಿಸಬೇಕು' ಎಂದರು.
ಕುಮಾರಸ್ವಾಮಿ ವಜಾ ಮಾಡಿಸುತ್ತಾರೆ:ಒಕ್ಕಲಿಗರನ್ನು ಅಪಮಾನ ಮಾಡಲಾಗಿದೆ. ಈಗ ಸಮುದಾಯದ ಪರವಾಗಿ ಕುಮಾರಸ್ವಾಮಿ ಅವರು ನಿಲ್ಲುತ್ತಾರಾ ಎಂಬ ಪ್ರಶ್ನೆಗೆ, 'ಇದರ ಬಗ್ಗೆ ಕುಮಾರಸ್ವಾಮಿ ಏನೇನು ಹೇಳಿಕೆ ನೀಡುತ್ತಾರೆ ಎಂಬುದನ್ನು ಮಧ್ಯಮದವರು ಗಮನಿಸಿ ನೋಡಿ. ನರೇಂದ್ರ ಮೋದಿ ಅವರಿಗೆ ಹೇಳಿ ಪಕ್ಷದಿಂದ ಮುನಿರತ್ನರನ್ನು ವಜಾ ಮಾಡಿಸುತ್ತಾರೆ. ಕುಮಾರಸ್ವಾಮಿ ಅವರಿಗೆ ಇರುವ ತಾಕತ್ತು ನಿಮಗೆ ಗೊತ್ತಿಲ್ಲ' ಎಂದು ಪ್ರತಿಕ್ರಿಯಿಸಿದರು.
ರೇಣುಕಾಸ್ವಾಮಿಗೆ ಆದ ಗತಿ ನಿನಗೆ ಆಗುತ್ತದೆ ಎಂದು ಮುನಿರತ್ನ ಬೆದರಿಕೆ ಹಾಕಿದ್ದಾರೆ ಎಂದು ಗುತ್ತಿಗೆದಾರ ಆರೋಪ ಬಗ್ಗೆ ಪ್ರತಿಕ್ರಿಯಿಸಿ, 'ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದೀಪಕ್ ಮುನಿರತ್ನ ಸಂಬಂಧಿ. ನೂರಕ್ಕೆ ನೂರರಷ್ಟು ಇದಕ್ಕೆ ಇವರ ಸಂಬಂಧ ಇದ್ದೇ ಇರುತ್ತದೆ. ಆಡಿಯೋದಲ್ಲಿ ರೌಡಿ ಸೈಲೆಂಟ್ ಸುನೀಲ್ ಹೆಸರು ಹೇಳಿದ್ದಾರೆ. ಅಂದರೆ ಯಾವ ರೀತಿಯ ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂಬುದು ಇದನ್ನು ನೋಡಿದರೆ ತಿಳಿಯುತ್ತದೆ' ಎಂದು ಆರೋಪಿಸಿದರು.
ಒಕ್ಕಲಿಗ ಸಮುದಾಯವನ್ನು ಕೀಳಾಗಿ ಕಂಡಿದ್ದಾರೆ: 'ಒಕ್ಕಲಿಗ ಸಮುದಾಯವನ್ನು ಕೀಳಾಗಿ ಕಂಡಿದ್ದಾರೆ. ಎರಡು ಸಮುದಾಯಗಳ ಮಧ್ಯೆ ಸಂಘರ್ಷಕ್ಕೆ ಕಾರಣ ಆಗಿದ್ದಾರೆ. ಶುಕ್ರವಾರ ಘಟನೆ ಹೊರಗೆ ಬಂದರೂ ಒಬ್ಬನೇ ಒಬ್ಬ ಬಿಜೆಪಿ ನಾಯಕ ಪ್ರತಿಕ್ರಿಯೆ ಕೊಟ್ಟಿಲ್ಲ. ಇಷ್ಟೊತ್ತಿಗಾಗಲೇ ಪಕ್ಷದಿಂದ ವಜಾ ಮಾಡಬೇಕಾಗಿತ್ತು. ಇಡೀ ದೇಶವೇ ಬೆಚ್ಚಿ ಬೀಳುವ ಕೀಳು ಪದಗಳನ್ನು ಮುನಿರತ್ನ ಆಡಿದ್ದಾರೆ' ಎಂದು ಕಿಡಿಕಾರಿದರು.